Bullet train and Supreme Court  trak.in
ಸುದ್ದಿಗಳು

ಬುಲೆಟ್‌ ರೈಲು ಯೋಜನೆ: ಬಾಂಬೆ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಗೋದ್ರೆಜ್ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕಾನೂನುಬಾಹಿರ ಕ್ರಮ ಪತ್ತೆಯಾಗಿಲ್ಲ. ಖಾಸಗಿ ಹಿತಾಸಕ್ತಿಗಿಂತ ವಿಸ್ತೃತವಾದ ಸಾರ್ವಜನಿಕ ಹಿತಾಸಕ್ತಿ ಮೇಲುಗೈ ಸಾಧಿಸುತ್ತದೆ ಎಂದು ಹೈಕೋರ್ಟ್‌ ಹೇಳಿದೆ.

Bar & Bench

ಮುಂಬೈ-ಅಹಮದಾಬಾದ್‌ ಬುಲೆಟ್‌ ರೈಲು ಯೋಜನೆಗೆ ತನ್ನ ಭೂಮಿ ವಶಪಡಿಸಿಕೊಂಡಿರುವುದನ್ನು ಪ್ರಶ್ನಿಸಿ ಗೋದ್ರೆಜ್‌ ಮತ್ತು ಬಾಯ್ಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾ ಮಾಡಿದೆ [ಗೋದ್ರೆಜ್‌ & ಬೋಯ್ಸ್‌ ಮ್ಯಾನುಫ್ಯಾಕ್ಚರಿಂಗ್‌ ಕಂಪೆನಿ ಲಿಮಿಟೆಡ್‌ ವರ್ಸಸ್‌ ಮಹಾರಾಷ್ಟ್ರ ಸರ್ಕಾರ].

ಯೋಜನೆಯು ರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿದ್ದು, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದಿದ್ದ ಬಾಂಬೆ ಹೈಕೋರ್ಟ್‌ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿ ಎಸ್‌ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ಎತ್ತಿ ಹಿಡಿದಿದೆ.

“ಭೂಮಿ ಸ್ವಾಧೀನಪಡಿಸಿಕೊಳ್ಳುವ ಅಗತ್ಯ ನಿಯಮ ಪಾಲಿಸದೇ ಕೆಲವೊಂದು ಅಕ್ರಮ ಎಸಗಿದೆ ಎಂದ ಮಾತ್ರಕ್ಕೆ ನ್ಯಾಯಾಲಯವು ತನ್ನ ವಿವೇಚನಾಧಿಕಾರ ಬಳಸಲು ಸಾಧ್ಯವಿಲ್ಲ, ಬುಲೆಟ್ ರೈಲು ಯೋಜನೆಯು ಮೂಲಸೌಕರ್ಯ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಸಾರ್ವಜನಿಕ ಯೋಜನೆಯಾಗಿದೆ ಎಂಬ ಅಂಶವನ್ನು ಗಮನಿಸಬೇಕಾಗುತ್ತದೆ” ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿತ್ತು.

“ಖಾಸಗಿ ಹಿತಾಸಕ್ತಿಗಿಂತ ವ್ಯಾಪಕವಾದ ಸಾರ್ವಜನಿಕ ಹಿತಾಸಕ್ತಿ ಮೇಲುಗೈ ಸಾಧಿಸುತ್ತದೆ. ಖಾಸಗಿ ಹಿತಾಸಕ್ತಿಯು ಸಾರ್ವಜನಿಕ ಹಿತಾಸಕ್ತಿಯ ಮುಂದೆ ನಿಲ್ಲದು. ಬುಲೆಟ್‌ ರೈಲು ಯೋಜನೆಯು ದೇಶದ ಕನಸಿನ ಯೋಜನೆಯಾಗಿದ್ದು, ಇದು ದೇಶದಲ್ಲಿ ಮೊದಲನೆಯದಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

2022ರ ಸೆಪ್ಟೆಂಬರ್‌ 15ರಂದು ಜಿಲ್ಲಾಧಿಕಾರಿಯು ಕಂಪೆನಿಯ ಭೂಸ್ವಾಧೀನ ಮಾಡಿಕೊಂಡು ₹264 ಕೋಟಿ ಪರಿಹಾರ ನೀಡಿದ್ದನ್ನು ಗೋದ್ರೆಜ್‌ ಮತ್ತು ಬಾಯ್ಸ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು. 2019ರಲ್ಲಿ ಆರಂಭಿಸಿದ ಭೂಸ್ವಾಧೀನ ಪ್ರಕ್ರಿಯೆಯು 2020ರಲ್ಲಿ ಮುಗಿದಿತ್ತು. ಅಧಿಕಾರಿಯು ಹೊರಡಿಸಿದ ಆದೇಶಕ್ಕೆ ಕಾನೂನಿನ ಮಾನ್ಯತೆ ಇಲ್ಲ ಎಂದು ಕಂಪೆನಿ ವಾದಿಸಿತ್ತು. ಇದನ್ನು ನ್ಯಾಯಾಲಯಗಳು ಪುರಸ್ಕರಿಸಿಲ್ಲ.