Vishal Kumar


 

Quint

ಸುದ್ದಿಗಳು

ಬುಲ್ಲಿ ಬಾಯ್ ಪ್ರಕರಣ: ಆರೋಪಿ ವಿಶಾಲ್ ಕುಮಾರ್‌ನನ್ನು ಜನವರಿ 10ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದ ಮುಂಬೈ ನ್ಯಾಯಾಲಯ

ಬೆಂಗಳೂರಿನಲ್ಲಿರುವ ಕುಮಾರ್ ಮನೆಯಲ್ಲಿ ಶೋಧ ನಡೆಸಲು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ವಶಪಡಿಸಿಕೊಳ್ಳಲು ಮುಂಬೈ ಪೊಲೀಸರಿಗೆ ನ್ಯಾಯಾಧೀಶರು ಅನುಮತಿಸಿದ್ದಾರೆ.

Bar & Bench

ಮುಸ್ಲಿಂ ಮಹಿಳೆಯರನ್ನು ಅವಹೇಳನಕಾರಿಯಾಗಿ ಬಿಂಬಿಸಿದ್ದ ಬುಲ್ಲಿ ಬಾಯ್‌ ಆ್ಯಪ್ ಪ್ರಕರಣದ ಆರೋಪಿ ಬೆಂಗಳೂರು ಮೂಲದ ವಿದ್ಯಾರ್ಥಿ, ವಿಶಾಲ್‌ ಕುಮಾರ್‌ನನ್ನು ಮುಂಬೈ ನ್ಯಾಯಾಲಯವೊಂದು ಜನವರಿ 10ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ.

ನಿನ್ನೆ ಬೆಂಗಳೂರಿನಲ್ಲಿ ಬಂಧಿತನಾಗಿದ್ದ ವಿಶಾಲ್‌ ಕುಮಾರ್‌ನನ್ನು ಇಂದು ಬಾಂದ್ರಾದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸಂಪೂರ್ಣ ತನಿಖೆಗಾಗಿ ಆರೋಪಿಯನ್ನು 10 ದಿನಗಳ ಕಾಲ ತನ್ನ ವಶಕ್ಕೆ ಒಪ್ಪಿಸುವಂತೆ ಮುಂಬೈ ಪೊಲೀಸ್‌ ಸೈಬರ್‌ ವಿಭಾಗ ನ್ಯಾಯಾಲಯವನ್ನು ಕೋರಿತು. ಪ್ರಕರಣದಲ್ಲಿ ಅನೇಕ ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಪೊಲೀಸರು ಈ ಸಂದರ್ಭದಲ್ಲಿ ತಿಳಿಸಿದರು. ಅಲ್ಲದೆ ಇತರೆ ಆರೋಪಿಗಳ ಬಗ್ಗೆ ಗೌಪ್ಯತೆ ಕಾಯ್ದುಕೊಳ್ಳುವ ಸಲುವಾಗಿ ವಿಚಾರಣೆಯನ್ನು ಗೌಪ್ಯವಾಗಿ ನಡೆಸುವಂತೆ ಕೋರಲಾಯಿತು.

ಇದೇ ವೇಳೆ ಬೆಂಗಳೂರಿನಲ್ಲಿರುವ ಆರೋಪಿಯ ಮನೆಯಲ್ಲಿ ಶೋಧ ನಡೆಸಲು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ವಶಪಡಿಸಿಕೊಳ್ಳಲು ಮುಂಬೈ ಪೊಲೀಸರಿಗೆ ನ್ಯಾಯಾಧೀಶರು ಅನುಮತಿ ನೀಡಿದರು.

ವರದಿಗಳ ಪ್ರಕಾರ 'ಬುಲ್ಲಿ ಬಾಯ್‌' ಅಪ್ಲಿಕೇಶನ್‌ನಲ್ಲಿ 100ಕ್ಕೂ ಹೆಚ್ಚು ಪ್ರಮುಖ ಮುಸ್ಲಿಂ ಮಹಿಳೆಯರ ವಿವರಗಳನ್ನು ಅಪ್‌ಲೋಡ್ ಮಾಡಿ ಆ ಮಹಿಳೆಯರ ಹರಾಜಿನಲ್ಲಿ ಭಾಗವಹಿಸಲು ಬಳಕೆದಾರರಿಗೆ ಆರೋಪಿಗಳು ಅವಕಾಶ ಮಾಡಿಕೊಟ್ಟಿದ್ದರು. ಆ ಬಳಿಕ ಪ್ರಕರಣ ದೇಶಾದ್ಯಂತ ಸುದ್ದಿ ಮಾಡಿತ್ತು. ಚಿತ್ರಗಳನ್ನು ಅಪ್‌ಲೋಡ್‌ ಮಾಡಲು ಬಳಸಿದ ಟ್ವಿಟರ್‌ ಖಾತೆ ಐಪಿ ಅಡ್ರೆಸ್‌ ಮೂಲಕ ವಿಶಾಲ್‌ ಕುಮಾರ್‌ನನ್ನು ಪತ್ತೆ ಹಚ್ಚಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಉತ್ತರಾಖಂಡದ ಮಹಿಳೆಯನ್ನು ಕೂಡ ಬಂಧಿಸಿದ್ದು ಟ್ರಾನ್ಸಿಟ್‌ ವಶಕ್ಕಾಗಿ ಆಕೆಯನ್ನು ಉತ್ತರಾಖಂಡ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇತ್ತ ಮೊಬೈಲ್‌ ಆಪ್‌ನಿಂದ ಅವಹೇಳನಕ್ಕೆ ಗುರಿಯಾಗಿದ್ದ ಪತ್ರಕರ್ತೆ ಇಸ್ಮತ್‌ ಆರಾ ಅವರು ನೀಡಿದ ದೂರನ್ನು ಆಧರಿಸಿ ದೆಹಲಿ ಪೊಲೀಸರು ಕೂಡ ಅನಾಮಧೇಯ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.