ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ (ಕೋಕಾ) ಅನ್ವಯಿಸಿರುವುದನ್ನು ಪ್ರಶ್ನಿಸಿ ಆರೋಪಿಯಾಗಿರುವ ಕೆ ಆರ್ ಪುರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸಲ್ಲಿಸಿರುವ ಅರ್ಜಿ ಸಂಬಂಧ ಗುರುವಾರ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಕೋಕಾ ಕಾಯಿದೆಯ ಸೆಕ್ಷನ್ 3 (ಸಂಘಟಿತ ಅಪರಾಧ ಕೃತ್ಯ ಎಸಗಿ, ಜೀವಹಾನಿ ಮಾಡಿರುವರಿಗೆ ಒಂದು ಲಕ್ಷ ರೂಪಾಯಿ ವರೆಗೆ ದಂಡದೊಂದಿಗೆ ಗರಿಷ್ಠ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವ) ಮತ್ತು ಸೆಕ್ಷನ್ 4 (ಸಂಘಟಿತ ಅಪರಾಧ ಸಿಂಡಿಕೇಟ್ ಸದಸ್ಯರ ಪರವಾಗಿ ಲೆಕ್ಕಕ್ಕೆ ಸಿಗದ ಸಂಪತ್ತನ್ನು ಹೊಂದಿರುವುದಕ್ಕೆ) ಹೇರಲು ಸಿಐಡಿ ಉಪ ಅಧೀಕ್ಷಕರಿಗೆ ಅನುಮತಿ ನೀಡಿ ಸಿಐಡಿ ಪೊಲೀಸ್ ಮಹಾ ನಿರ್ದೇಶಕರು 2025ರ ಆಗಸ್ಟ್ 12ರಂದು ಆದೇಶ ಹೊರಡಿಸಿರುವ ಆದೇಶ ರದ್ದತಿ ಕೋರಿ ಪ್ರಕರಣದ ಐದನೇ ಆರೋಪಿಯಾದ ಬೈರತಿ ಬಸವರಾಜ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಬಸವರಾಜ್ ಪರ ಹಿರಿಯ ವಕೀಲ ಸಂದೇಶ್ ಚೌಟ ಅವರು “ಪ್ರಕರಣದಲ್ಲಿ ಈಗಾಗಲೇ ಅರ್ಜಿದಾರರ ಬಂಧನ ಮಾಡದಂತೆ ತನಿಖಾಧಿಕಾರಿಗಳಿಗೆ ಸೂಚಿಸಿ ಹೈಕೋರ್ಟ್ ಮಧ್ಯಂತರ ರಕ್ಷಣೆ ಒದಗಿಸಿದೆ. ನಂತರ ಪ್ರಕರಣದಲ್ಲಿ ಸಿಐಡಿ ತನಿಖಾಧಿಕಾರಿಗಳು ಕೋಕಾ ಕಾಯಿದೆ ಹೇರಿದ್ದಾರೆ. ಕೋಕಾ ಕಾಯಿದೆ ಅನ್ವಯಿಸಿದರೆ ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆಯಲು ಅವಕಾಶವಿಲ್ಲ. ರಾಜಕೀಯ ದ್ವೇಷದಿಂದ ತನಿಖಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಇಲ್ಲಿ ವಿವೇಚನೆ ಬಳಸಲಾಗಿಲ್ಲ” ಎಂದರು.
“ಸಂಘಟಿತ ಅಪರಾಧಗಳನ್ನು ನಡೆಸುವ ತಂಡವಿದ್ದರೆ (ಸಿಂಡಿಕೇಟ್) ಮಾತ್ರ ಕೋಕಾ ಕಾಯಿದೆ ಅನ್ವಯಿಸಬೇಕು. ತಂಡದ ಸದಸ್ಯರ ವಿರುದ್ಧ ಎರಡಕ್ಕಿಂತ ಹೆಚ್ಚು ಕ್ರಿಮಿನಲ್ ಕೇಸ್‌ಗಳಿರಬೇಕು. ಮೂರಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆ ವಿಧಿಸುವ ಅಪರಾಧ ನಡೆಸಿರಬೇಕಾಗುತ್ತದೆ. ಇದೇ ಮೊದಲ ಬಾರಿಗೆ ಶಾಸಕರ ವಿರುದ್ಧ ಕೋಕಾ ಅನ್ವಯಿಸಲಾಗಿದೆ. ಆದ್ದರಿಂದ ಪ್ರಕರಣದಲ್ಲಿ ಕೋಕಾ ನಿಯಮಗಳನ್ನು ಹೇರಲು ಅನುಮತಿ ನೀಡಲಾಗಿರುವ ಆದೇಶ ರದ್ದುಪಡಿಸಬೇಕು” ಎಂದು ಕೋರಿದರು.
ಇದನ್ನು ಆಲಿಸಿದ ಪೀಠವು ರಾಜ್ಯ ಗೃಹ ಇಲಾಖೆ, ಸಿಐಡಿ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಅಕ್ಟೋಬರ್ 23ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು ರಾತ್ರಿ ರೌಡಿಶೀಟರ್ ಬಿಕ್ಲುಶಿವ ಅಲಿಯಾಸ್ ಶಿವಪ್ರಕಾಶ್ ಕೊಲೆಯಾಗಿತ್ತು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಆರೋಪಿಸಿ ಮೃತನ ತಾಯಿ ವಿಜಯಲಕ್ಷ್ಮಿ ದೂರು ನೀಡಿದ್ದರು. ಅದನ್ನು ಆಧರಿಸಿ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಬೈರತಿ ಬಸವರಾಜ್ ವಿರುದ್ಧ ಭಾರತಿನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆ ಎಫ್‌ಐಆರ್ ರದ್ದು ಕೋರಿ ಶಾಸಕ ಬಸವರಾಜ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ಸೂಚನೆಯಂತೆ ಬೈರತಿ ಬಸವರಾಜ್, ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ನಂತರ ಬಸವರಾಜ್ ಅನ್ನು ಬಂಧಿಸದಂತೆ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಿತ್ತು. ಅದನ್ನು ತೆರವುಗೊಳಿಸುವಂತೆ ಸಿಐಡಿ ಪೊಲೀಸರ ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳು ವಿಚಾರಣಾ ಹಂತದಲ್ಲಿವೆ. ಈ ಮಧ್ಯೆ ಸಿಐಡಿ ಪೊಲೀಸರು ಪ್ರಕರಣದಲ್ಲಿ ಕೋಕಾ ಕಾಯಿದೆ ಅನ್ವಯಿಸಿದ್ದಾರೆ.