ಸುದ್ದಿಗಳು

ಜುಲೈನಲ್ಲಿ ಸಿಎ ಪರೀಕ್ಷೆ ಬರೆಯಲಾಗದ ಅಭ್ಯರ್ಥಿಗಳಿಗೆ ಪರ್ಯಾಯ ಪರೀಕ್ಷೆ ನಡೆಸುವ ಬಗ್ಗೆ ಚಿಂತಿಸುತ್ತಿರುವ ಐಸಿಎಐ

Bar & Bench

ಲಾಕ್‌ಡೌನ್‌ ಅಥವಾ ಪರೀಕ್ಷಾ ಕೇಂದ್ರಗಳನ್ನು ಮುಚ್ಚುವಂತಹ ಪರಿಸ್ಥಿತಿಯಿಂದಾಗಿ ಇದೇ ವರ್ಷ ಜುಲೈನಲ್ಲಿ ನಡೆಯಲಿರುವ ಸಿಎ ಪರೀಕ್ಷೆಗೆ ಸೂಕ್ತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗಲು ವಿಫಲವಾದ ಸಂದರ್ಭದಲ್ಲಿ ಪರ್ಯಾಯ ಪರೀಕ್ಷೆಯನ್ನು ನಡೆಸುವ ಬಗ್ಗೆ ಭಾರತೀಯ ಲೆಕ್ಕ ಪರಿಶೋದಕರ ಸಂಸ್ಥೆಯು ಅಲೋಚಿಸುತ್ತಿದೆ.

ಇದರಿಂದಾಗಿ, ಸುಪ್ರೀಂ ಕೋರ್ಟ್‌ ಆದೇಶದಂತೆ ಕೋವಿಡ್‌ ಸಂಬಂಧಿತ ಕಾರಣದಿಂದ ಪರೀಕ್ಷೆ ಬರೆಯುವುದರಿಂದ ಹೊರಗುಳಿಯುವ ಆಯ್ಕೆಯನ್ನು ಮಾಡಿಕೊಳ್ಳುವ ಅಭ್ಯರ್ಥಿಗಳು ಸಹ ಈ ಪರ್ಯಾಯ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಆದರೆ, ಅಂತಹ ಪರೀಕ್ಷೆಯ ಸಾಧ್ಯತೆಯು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಮೂಲಸೌಕರ್ಯವನ್ನು ಆಧರಿಸಿರಲಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಐಸಿಎಐ ಅನ್ನು ಪ್ರತಿನಿಧಿಸುತ್ತಿರುವ ವಕೀಲ ರಾಮ್‌ಜಿ ಶ್ರೀನಿವಾಸನ್‌ 'ಬಾರ್‌ ಅಂಡ್‌ ಬೆಂಚ್‌'ಗೆ ತಿಳಿಸಿದ್ದಾರೆ.

“ನವೆಂಬರ್‌ನಲ್ಲಿ ಮುಂದಿನ ಸೆಷನ್‌ ಪರೀಕ್ಷೆಗಳಿವೆ. ಈ ನಡುವೆ ಲಾಕ್‌ಡೌನ್‌ ಕಾರಣದಿಂದಾಗಿ ಅಥವಾ ಕೋವಿಡ್‌ ಮಾತ್ರವೇ ಅಲ್ಲದೆ ಮತ್ತಾವುದಾದರೂ ಕಾರಣದಿಂದ ಪರೀಕ್ಷಾ ಕೇಂದ್ರಗಳು ಮುಚ್ಚಲ್ಪಟ್ಟರೆ ಹಾಗೂ ಸುಪ್ರೀಂ ಕೋರ್ಟ್‌ ಆದೇಶದನ್ವಯ ವಿದ್ಯಾರ್ಥಿಗಳು ಪರೀಕ್ಷೆಯಿಂದ ಹೊರಗುಳಿಯುವ ಆಯ್ಕೆಯನ್ನು ಮಾಡಿಕೊಂಡರೆ ಅಂತಹ ವಿದ್ಯಾರ್ಥಿಗಳಿಗೆ ಪರ್ಯಾಯ ಪರೀಕ್ಷೆಗಳ ಆಯ್ಕೆ ಸಿಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಮೂಲಸೌಕರ್ಯವನ್ನು ಅಧರಿಸಿರಲಿದೆ. ಬೃಹತ್‌ ಸಂಸ್ಥೆಯಾದ ಐಸಿಎಐನಲ್ಲಿ ಪರ್ಯಾಯ ಯೋಜನೆ ಎಂಬುದು ಯಾವಾಗಲೂ ಇರಲಿದೆ,” ಎಂದು ರಾಮ್‌ಜಿ ಶ್ರೀನಿವಾಸನ್‌ ತಿಳಿಸಿದರು.

ಇದೇ ವೇಳೆ ಅವರು, ಈ ಪರ್ಯಾಯ ಪರೀಕ್ಷೆಯನ್ನು ನವೆಂಬರ್‌ ತಿಂಗಳಿನಲ್ಲಿ ನಡೆಯಲಿರುವ ಮುಖ್ಯ ಪರೀಕ್ಷೆಯೊಂದಿಗೆ ಗೊಂದಲ ಮಾಡಿಕೊಳ್ಳಬಾರದು ಎಂದೂ ಸಹ ತಿಳಿಸಿದರು.

ಸಿಎ ಪರೀಕ್ಷೆಯು ಜುಲೈನಲ್ಲಿ ನಡೆಯಲಿದೆ. ಪರೀಕ್ಷೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್‌ ಬುಧವಾರದಂದು ನಿರಾಕರಿಸಿತ್ತು. ಆದರೆ, ಒಂದು ವೇಳೆ ಅಭ್ಯರ್ಥಿಗಳು ಅಥವಾ ಅವರ ಕುಟುಂಬದ ಸದಸ್ಯರು ಇತ್ತೀಚೆಗೆ ಕೋವಿಡ್‌ನಿಂದ ಬಳಲಿದ್ದರೆ ಅವರು ಪರೀಕ್ಷೆಯಿಂದ ‘ಹೊರಗುಳಿಯುವ’ ಅವಕಾಶವನ್ನು ನ್ಯಾಯಾಲಯವು ನೀಡಿದೆ. ಈ ಕುರಿತು ಅಭ್ಯರ್ಥಿಗಳು ನೊಂದಾಯಿತ ವೈದ್ಯರಿಂದ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.