ಆನ್‌ಲೈನ್ ಮೂಲಕ ಕ್ಯಾಬ್ ಸೇವೆ ಒದಗಿಸುವ ಕಂಪೆನಿ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುವಂತಿಲ್ಲ ಎಂದು ಸೋಮವಾರ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಸಂಚರಿಸಲು ಪರವಾನಗಿ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸುವಂತೆ ಉಬರ್‌ಗೆ ಸೂಚಿಸಿದೆ.
ರಾಜ್ಯದಲ್ಲಿ ಉಬರ್‌ಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿದ್ದ ಸುಪ್ರೀಂ ಕೋರ್ಟ್‌ನ ಹಿಂದಿನ ಮಧ್ಯಂತರ ಆದೇಶ ನಡೆಯುವುದಿಲ್ಲ. ಏಕೆಂದರೆ ಪರವಾನಗಿ ಇಲ್ಲದೆ ಅದು ಕಾರ್ಯಾಚರಿಸಲು ಸಾಧ್ಯವಿಲ್ಲ ಎಂದ ನ್ಯಾಯಾಲಯ ಮಾರ್ಚ್ 6, 2023ರೊಳಗೆ ಪರವಾನಗಿಗಾಗಿ ಅರ್ಜಿ ಸಲ್ಲಿಸುವಂತೆ ಆದೇಶಿಸಿತು.
"ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸಲು ಅನುಮತಿ ನೀಡಿದ್ದ ಮಧ್ಯಂತರ ಆದೇಶ ನಿಲ್ಲುವುದಿಲ್ಲ ಎಂದು ನಾವು ಭಾವಿಸುತ್ತೇವೆ, ಏಕೆಂದರೆ ಕಂಪೆನಿ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಉಬರ್ 3 ವಾರಗಳ ಅವಧಿಯಲ್ಲಿ, ಮಾರ್ಚ್ 6, 2023 ರಂದು ಅಥವಾ ಅದಕ್ಕಿಂತ ಮೊದಲು ಪರವಾನಗಿಗಾಗಿ ಅರ್ಜಿ ಸಲ್ಲಿಸಬೇಕು," ಎಂದು ನ್ಯಾಯಾಲಯ ಹೇಳಿದೆ.
ಕೇಂದ್ರ ಸರ್ಕಾರ ಹೊರಡಿಸಿದ 2020ರ ಮೋಟಾರು ವಾಹನಗಳ ಅಗ್ರಿಗೇಟರ್ (ಎಂವಿಎ) ಮಾರ್ಗಸೂಚಿಗಳಿಗೆ ಅನುಗುಣವಾಗಿ ಮಹಾರಾಷ್ಟ್ರದಲ್ಲಿ ಪರವಾನಗಿಗೆ ಅರ್ಜಿ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ಉಬರ್ ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಯ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯ ಈ ಆದೇಶ ನೀಡಿತು.
"ನೀವು ಪರವಾನಗಿಗಾಗಿ ಅರ್ಜಿ ಸಲ್ಲಿಸಿ ಅಥವಾ ಮಾರ್ಗಸೂಚಿಗಳಿಗೆ ಬದ್ಧರಾಗಿರಿ... ನೀವು ನ್ಯಾಯಾಲಯದ ಮಧ್ಯಂತರ ಆದೇಶದಂತೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ನೀವು ಪರವಾನಗಿ ಇಲ್ಲದೆ ಅಗ್ರಿಗೇಟರ್ (ಕ್ಯಾಬ್ ಸೇವೆ ಒದಗಿಸುವ ಕಂಪೆನಿ) ಆಗಿ ಕೆಲಸ ಮಾಡಲು ಸಾಧ್ಯವಿಲ್ಲ. ಇದು ಶಾಸನಬದ್ಧ ಆದೇಶವಾಗಿದೆ" ಎಂದು ನ್ಯಾಯಾಲಯ ಹೇಳಿತು.
ವಿಧಿಸಲಾದ ಷರತ್ತುಗಳು ಅಪ್ರಾಯೋಗಿಕವಾಗಿದ್ದರೆ ಉಬರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಬಹುದು. ಅದನ್ನು ಆಧರಿಸಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನ್ಯಾಯಾಲಯ ಸೂಚಿಸಿತು., ಎಂವಿಎ ಮಾರ್ಗಸೂಚಿ ನೀತಿ ರೂಪಿಸುವುದಕ್ಕಾಗಿ ತ್ವರಿತಗತಿಯಲ್ಲಿ ಕೆಲಸ ಮಾಡುವಂತೆ ಸರ್ಕಾರಕ್ಕೆ ನ್ಯಾಯಾಲಯ ಇದೇ ವೇಳೆ ನಿರ್ದೇಶಿಸಿತು.