ಸುದ್ದಿಗಳು

ಓಲಾ ಕ್ಯಾಬ್ ಪರವಾಗಿ ನೀಡಿದ್ದ ವಿವಿಧ ಆದೇಶ ಪ್ರಶ್ನಿಸಿ ಮೇರು ಕ್ಯಾಬ್ಸ್ ಅರ್ಜಿ: ನೋಟಿಸ್ ನೀಡಿದ ಸುಪ್ರೀಂ

Bar & Bench

ಸ್ಪರ್ಧಾತ್ಮಕ-ವಿರೋಧಿ ಅಭ್ಯಾಸಗಳಲ್ಲಿ ತೊಡಗಿರುವ ಓಲಾ ಕ್ಯಾಬ್ಸ್‌ ವಿರುದ್ಧ ತಾನು ನೀಡಿದ್ದ ದೂರನ್ನು ವಜಾಗೊಳಿಸಿದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಮತ್ತು ಭಾರತೀಯ ಸ್ಪರ್ಧಾತ್ಮಕ ಆಯೋಗದ (ಸಿಸಿಐ) ಆದೇಶಗಳನ್ನು ಪ್ರಶ್ನಿಸಿ ಮೇರು ಕ್ಯಾಬ್ಸ್‌ ಅರ್ಜಿ ಸಲ್ಲಿಸಿದ್ದು ಈ ಸಂಬಂಧ ಪ್ರತಿವಾದಿಗಳಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ [ಮೇರು ಟ್ರಾವೆಲ್ಸ್‌ ಸಲ್ಯೂಷನ್ಸ್‌ ಪ್ರೈ ಲಿಮಿಟೆಡ್‌ ಮತ್ತು ಕಾಂಪಟಿಷನ್‌ ಕಮಿಷನ್‌ ಆಫ್‌ ಇಂಡಿಯಾ ಇನ್ನಿತರರ ನಡುವಣ ಪ್ರಕರಣ].

ಪ್ರತಿಸ್ಪರ್ಧಿಗಳನ್ನು ಮುಗಿಸುವ ರೀತಿಯಲ್ಲಿ ಬೆಲೆ ನಿಗದಿಗೊಳಿಸುವ ಮೂಲಕ ಕ್ಯಾಬ್ ಅಗ್ರಿಗೇಟರ್‌ಗಳ ಮಾರುಕಟ್ಟೆಯಲ್ಲಿ ಓಲಾ ತನ್ನ ಪ್ರಾಬಲ್ಯ ದುರುಪಯೋಗಪಡಿಸಿಕೊಂಡಿಲ್ಲ ಎಂದು ಹೇಳುವ ಸಿಸಿಐ ಆದೇಶವನ್ನು ಎನ್‌ಸಿಎಲ್‌ಎಟಿ ಎತ್ತಿಹಿಡಿದಿತ್ತು. ಪ್ರತಿಸ್ಪರ್ಧಿಗಳನ್ನು ಮುಗಿಸುವಂತಹ ದರ ಎಂದು ಹಣೆಪಟ್ಟಿ ಹಚ್ಚುವಂತಹ ಯಾವುದೇ ಕಡಿಮೆ ದರವನ್ನು ನಿರಂತರ ಅವಧಿಗೆ ಓಲಾ ನಿಗದಿಪಡಿಸಿರಲಿಲ್ಲ ಎಂದು ಮೇಲ್ಮನವಿ ನ್ಯಾಯಮಂಡಳಿ ಎನ್‌ಸಿಎಲ್‌ಎಟಿ ಹೇಳಿತ್ತು. ಈ ಆದೇಶಗಳನ್ನು ಮೇರು ಪ್ರಶ್ನಿಸಿದೆ.

ಸ್ಪರ್ಧೆ ಇಲ್ಲದಂತೆ ಮಾಡಲು ಕಡಿಮೆ ಬೆಲೆ ನಿಗದಿಪಡಿಸುವುದನ್ನು ಸಕ್ರಮಗೊಳಿಸುವ ಮೂಲಕ ಈ ಆದೇಶಗಳು ಅಪಾಯಕಾರಿ ಪೂರ್ವನಿದರ್ಶನಕ್ಕೆ ಮಣೆ ಹಾಕುತ್ತವೆ ಎಂದಿರುವ ಮೇರು ಸಂಸ್ಥೆಯು ಉಬರ್‌ ಇಂಡಿಯಾ ಸಿಸ್ಟಮ್ಸ್‌ ಲಿ., ಮತ್ತು ಸಿಸಿಐ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಅವಲಂಬಿಸಿದೆ.

ಓಲಾ ತನ್ನ ಪ್ರತಿಸ್ಪರ್ಧಿಗಳನ್ನು ಮುಗಿಸುವ ರೀತಿಯ ಬೆಲೆ ನೀತಿಯಿಂದಾಗಿ ಉಂಟಾಗಿರುವ ಸುಮಾರು ₹ 15,000 ಕೋಟಿಗಳಷ್ಟು ನಷ್ಟವನ್ನು ಭಾರೀ ವಿದೇಶಿ ನಿಧಿ ಮೂಲಕ ಸರಿದೂಗಿಸಿದೆ ಎಂದು ವಾದಿಸಲಾಗಿದೆ. ಅಂತಹ ನೀತಿಗಳು ಮಾರುಕಟ್ಟೆಯಲ್ಲಿನ ಇತರರಮೇಲೆ ಪರಿಣಾಮ ಬೀರುತ್ತವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಓಲಾದ ಪ್ರತಿಸ್ಪರ್ಧಿಯಾದ ಉಬರ್‌ಅನ್ನು ಪ್ರತಿನಿಧಿಸಿದರೆ ಮತ್ತೊಬ್ಬ ಹಿರಿಯ ನ್ಯಾಯವಾದಿ ಪಿ ಚಿದಂಬರಂ ಮೇರುವನ್ನು ಪ್ರತಿನಿಧಿಸಿದ್ದಾರೆ.