Vidhana Soudha 
ಸುದ್ದಿಗಳು

ಸಂಪುಟ ಸಭೆ: ಕನ್ನಡ ಹೋರಾಟಗಾರರು, ರೈತರ ವಿರುದ್ಧದ ಪ್ರಕರಣ ಹಿಂಪಡೆಯಲು, ನ್ಯಾಯ ಮಂಡಳಿ ತೀರ್ಪು ಜಾರಿಗೊಳಿಸಲು ಉಪ ಸಮಿತಿ

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಟೆಂಡರ್‌ ಮೂಲಕ ವಹಿಸಲಾದ ಕಾಮಗಾರಿಗಳ ಮೊತ್ತದ ಮಿತಿಯನ್ನು 50 ಲಕ್ಷದಿಂದ 1 ಕೋಟಿ ರೂಪಾಯಿ ಹೆಚ್ಚಿಸಿರುವ ಕೆಟಿಪಿಪಿ ಕಾಯಿದೆ ತಿದ್ದುಪಡಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.

Bar & Bench

ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ನ್ಯಾಯ ಮಂಡಳಿಗಳ ತೀರ್ಪು ಹಾಗೂ ಕಾನೂನುಬಾಹಿರವಾಗಿ ಅಮಾಯಕರ ವಿರುದ್ಧ ಪೊಲೀಸರು ದಾಖಲಿಸಿರುವ ಪ್ರಕರಣಗಳ ಪರಿಶೀಲಿಸಿ, ಹಿಂಪಡೆಯಲು ಸಂಪುಟ ಉಪ ಸಮಿತಿ ರಚಿಸಲು ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಇದೇ ವೇಳೆ ಮೂರು ಕಾಯಿದೆಗಳಿಗೆ ತಿದ್ದುಪಡಿ ಮಾಡಲು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಂಪುಟ ಸಭೆ ಅನುಮೋದನೆ ನೀಡಿದೆ.

ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ್‌ ಅವರು ಮಾಹಿತಿ ನೀಡಿದ್ದು, ವಿವರ ಇಂತಿದೆ.

  • ಕೃಷ್ಣಾ, ಕಾವೇರಿ, ಮಹದಾಯಿ ಇತರೆ ನೀರಾವರಿ ಯೋಜನೆಗಳ ಅನುಷ್ಠಾನ ಮತ್ತು ವಿವಿಧ ನ್ಯಾಯ ಮಂಡಳಿಗಳ ತೀರ್ಪುಗಳ ಅನುಷ್ಠಾನ ಮತ್ತು ರೂಪುರೇಷೆ ಸಿದ್ಧಪಡಿಸಲು ಜಲಸಂಪನ್ಮೂಲ ಸಚಿವಾಲಯದ ಪ್ರಸ್ತಾವಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಸಚಿವ ಸಂಪುಟ ಉಪ ಸಮಿತಿ ರಚಿಸಲು ನಿರ್ಧಾರ.

  • ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಕನ್ನಡ ಪರ ಹೋರಾಟಗಾರರು, ರೈತರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದನ್ನು ಆಧರಿಸಿ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯುವ ನಿಟ್ಟಿನಲ್ಲಿ ಪರಿಶೀಲಿಸಲು ಸಚಿವ ಸಂಪುಟದ ಉಪ ಸಮಿತಿ ರಚಿಸಲು ನಿರ್ಣಯ ಮಾಡಲಾಗಿದೆ. ಸಮಿತಿ ರಚನೆಯ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿದೆ.

  • ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ 2023 ಮಂಡಿಸಲು ಅನುಮೋದನೆ ನೀಡಲಾಗಿದೆ.

  • ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಟೆಂಡರ್‌ ಮೂಲಕ ವಹಿಸಲಾದ ಕಾಮಗಾರಿಗಳ ಮೊತ್ತದ ಮಿತಿಯನ್ನು 50 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿಗೆ ಹೆಚ್ಚಿಸಿರುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಅಧಿನಿಯಮಕ್ಕೆ (ಕೆಟಿಪಿಪಿ) ತಿದ್ದುಪಡಿ ಮಾಡಲು ಸಂಪುಟವು ಒಪ್ಪಿಗೆ ನೀಡಿದೆ.

  • ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಕಾಯಿದೆ 2017ಕ್ಕೆ ತಿದ್ದುಪಡಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಕರ್ನಾಟಕ ರಾಜ್ಯ ರಸ್ತೆ ಪ್ರಾಧಿಕಾರ ಕಾಯಿದೆ ಅಡಿ ಬಿಬಿಎಂಪಿ ಬರುತ್ತಿರಲಿಲ್ಲ. ಅದನ್ನು ಸೇರಿಸಲು, ಈ ತಿದ್ದುಪಡಿ ಮಾಡಲು ಅನುಮತಿಸಲಾಗಿದೆ.