PM Narendra Swamy & Karnataka HC 
ಸುದ್ದಿಗಳು

ಕೆಎಸ್‌ಪಿಸಿಬಿ ಅಧ್ಯಕ್ಷ ನರೇಂದ್ರ ಸ್ವಾಮಿಗೆ ಸಂಪುಟ ದರ್ಜೆ ಸ್ಥಾನಮಾನ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ನರೇಂದ್ರಸ್ವಾಮಿ ಅವರಿಗೆ ಲಾಭದಾಯಕ ಹುದ್ದೆ ನೀಡಿದ್ದು, ಈ ನೇಮಕಾತಿಯು ನಿಯಮಗಳಿಗೆ ವಿರುದ್ಧವಾಗಿದೆ. ಹಾಗಾಗಿ, ಫೆ.5ರಂದು ಹೊರಡಿಸಿದ ನೇಮಕಾತಿ ಆದೇಶ ರದ್ದುಪಡಿಸಬೇಕು ಎಂದು ಕೋರಲಾಗಿದೆ.

Bar & Bench

ಮಳವಳ್ಳಿ ಕಾಂಗ್ರೆಸ್ ಶಾಸಕ ಪಿ ಎಂ ನರೇಂದ್ರ ಸ್ವಾಮಿ ಅವರನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸಂಪುಟ ದರ್ಜೆ ಸ್ಥಾನಮಾನ ನೀಡಿ ಲಾಭದಾಯಕ ಹುದ್ದೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಆಕ್ಷೇಪಿಸಿ ಹೈಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಸಲಾಗಿದೆ.

ಬೆಂಗಳೂರಿನ ವಕೀಲ ಎಂ ಶ್ರೇಯಸ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರ ಪರ ವಕೀಲರಾದ ನಚಿಕೇತ್‌ ಜೋಶಿ ಅವರು “ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಬೇರೆ ಅರ್ಜಿಗಳು ಆಗಸ್ಟ್‌ 13ರಂದು ವಿಚಾರಣೆಗೆ ಬರಲಿವೆ. ಹೀಗಾಗಿ, ಈ ಅರ್ಜಿಯಲ್ಲಿ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಬೇರೆ ಅರ್ಜಿಗಳೊಂದಿಗೆ ವಿಚಾರಣೆ ನಡೆಸಬೇಕು” ಎಂದು ಕೋರಿದರು.

ಇದನ್ನು ಒಪ್ಪಿದ ಪೀಠವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಶಾಸಕ ಪಿ.ಎಂ ನರೇಂದ್ರ ಸ್ವಾಮಿ, ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿಗೆ ನೋಟಿಸ್‌ಗೊಳಿಸಿ ವಿಚಾರಣೆ ಮುಂದೂಡಿತು.

ರಾಜ್ಯ ಸರ್ಕಾರದ ಶಿಫಾರಸ್ಸು ಹಾಗೂ ರಾಜ್ಯಪಾಲರ ಆದೇಶದಂತೆ ಹಾಲಿ ಶಾಸಕರಾಗಿರುವ ಪಿ ಎಂ ನರೇಂದ್ರಸ್ವಾಮಿ ಅವರನ್ನು 2025ರ ಫೆಬ್ರವರಿ 5ರಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅರಣ್ಯ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಮುಂದುವರಿದು ಅವರಿ ಸಂಪುಟ ದರ್ಜೆ ಸ್ಥಾನಮಾನ ನೀಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಏಪ್ರಿಲ್ 29ರಂದು ಆದೇಶ ಹೊರಡಿಸಿತ್ತು. ಈ ಮೂಲಕ ನರೇಂದ್ರಸ್ವಾಮಿ ಅವರಿಗೆ ಲಾಭದಾಯಕ ಹುದ್ದೆ ನೀಡಿದಂತಾಗಿದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ಅಲ್ಲದೇ ಈ ನೇಮಕಾತಿಯು ನಿಯಮಗಳಿಗೆ ವಿರುದ್ಧವಾಗಿದ್ದು, ಫೆಬ್ರವರಿ 5ರಂದು ಹೊರಡಿಸಿದ ನೇಮಕಾತಿ ಆದೇಶ ರದ್ದುಪಡಿಸಬೇಕು. ಅಧ್ಯಕ್ಷ ಹುದ್ದೆಯ ಕರ್ತವ್ಯ ನಿರ್ವಹಿಸದಂತೆ ನರೇಂದ್ರಸ್ವಾಮಿ ಅವರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ. 

ಹಲವು ಶಾಸಕರಿಗೆ ನಿಗಮ-ಮಂಡಳಿಯ ಮುಖ್ಯಸ್ಥ ಸ್ಥಾನ ನೀಡಿರುವುದನ್ನು ಪ್ರಶ್ನಿಸಿ ಇನ್ನೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್‌ ಪರಿಗಣನೆಯಲ್ಲಿದೆ.