Red Label 
ಸುದ್ದಿಗಳು

ರೆಡ್ ಲೇಬಲ್ ಟೀ ಮಿಸ್‌ಬ್ರ್ಯಾಂಡಿಂಗ್‌: ಹಿಂದೂಸ್ತಾನ್ ಯುನಿಲಿವರ್ ಅಧಿಕಾರಿಗಳ ಖುಲಾಸೆಗೊಳಿಸಿದ ಕಲ್ಕತ್ತಾ ಹೈಕೋರ್ಟ್

Bar & Bench

ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್‌ನ ಉತ್ಪನ್ನವಾದ 'ರೆಡ್ ಲೇಬಲ್ ನ್ಯಾಚುರಲ್ ಕೇರ್ ಟೀʼಯನ್ನು ತಪ್ಪಾಗಿ ಬ್ರ್ಯಾಂಡ್ ಮಾಡಿದ ಆರೋಪದಡಿ ದಾಖಲಿಸಲಾದ ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಿಸಿದಂತೆ ಅದರ ಪದಾಧಿಕಾರಿಗಳನ್ನು ಕಲ್ಕತ್ತಾ ಹೈಕೋರ್ಟ್ ಬುಧವಾರ ಖುಲಾಸೆಗೊಳಿಸಿದೆ [ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣ].

ಹಿಂದೂಸ್ತಾನ್ ಯುನಿಲಿವರ್ ಮತ್ತು ಅದರ ಪದಾಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ ಮಾಡಿದ ವಾದದಲ್ಲಿ ಕೆಲ ವ್ಯತ್ಯಾಸಗಳನ್ನು ಗಮನಿಸಿದ ನ್ಯಾಯಮೂರ್ತಿ ಸುಭೇಂದು ಸಾಮಂತ ಅವರು ಖುಲಾಸೆ ಆದೇಶ ನೀಡಿದರು.

ಬ್ರೂಕ್ ಬಾಂಡ್ ರೆಡ್ ಲೇಬಲ್ ಟೀಯನ್ನು ತಪ್ಪಾದ ರೀತಿಯಲ್ಲಿ ಬ್ರ್ಯಾಂಡ್‌ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟ ಸಾರ್ವಜನಿಕ ವಿಶ್ಲೇಷಕರನ್ನು ಆ ಅಭಿಪ್ರಾಯ ಸಾಬೀತಿಗಾಗಿ ಪ್ರಾಸಿಕ್ಯೂಷನ್‌ ವಿಚಾರಣಾ ನ್ಯಾಯಾಲಯದೆದುರು ಎಂದಿಗೂ ಹಾಜರಿಪಡಿಸಿರಲಿಲ್ಲ ಎಂಬುದನ್ನು ನ್ಯಾಯಮೂರ್ತಿಗಳು ಗಮನಿಸಿದರು.

ಹಿಂದೂಸ್ತಾನ್ ಯುನಿಲಿವರ್ ತನ್ನ ಉತ್ಪನ್ನವನ್ನು ಏಕೆ ತಪ್ಪಾಗಿ ಬ್ರ್ಯಾಂಡ್‌ ಮಾಡಿದೆ ಎಂಬುದಕ್ಕೆ ಪ್ರಾಸಿಕ್ಯೂಷನ್ ಯಾವುದೇ ಕಾರಣವನ್ನು ವಿವರಿಸಲಿಲ್ಲ ಎಂದ ನ್ಯಾಯಾಲಯ  ಅಂತಿಮವಾಗಿ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸುವಂತೆ ಆದೇಶಿಸಿತು.

ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್‌ನ ಉತ್ಪನ್ನವಾದ 'ರೆಡ್ ಲೇಬಲ್ ನ್ಯಾಚುರಲ್ ಕೇರ್ ಟೀ'ಯನ್ನು ತಪ್ಪಾದ ರೀತಿಯಲ್ಲಿ ಬ್ರ್ಯಾಂಡ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ  ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಆಹಾರ ನಿರೀಕ್ಷಕರು ಅದರ ಪದಾಧಿಕಾರಿಗಳ (ಅರ್ಜಿದಾರರ) ಮವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದರು.

ಆಹಾರ ಕಲಬೆರಕೆ ನಿಯಂತ್ರಣ ಕಾಯಿದೆಯ ಸೆಕ್ಷನ್‌ 38 ಮತ್ತು 39ರ ಅಡಿ ಪ್ರಕರಣವನ್ನು ದಾಖಲಿಸಲಾಗಿತ್ತು. 'ವೈದ್ಯಕೀಯ ವೃತ್ತಿಪರರಿಂಧ ಶಿಫಾರಸ್ಸು ಮಾಡಲಾದ' ಎನ್ನುವ ಪದವನ್ನು ನಿಷೇಧಿಸುವ ಸೆಕ್ಷನ್‌ 39ಅನ್ನು ಕಂಪೆನಿಯು ಉಲ್ಲಂಘಿಸಿದೆ ಎನ್ನುವ ಆರೋಪವನ್ನು ಮಾಡಲಾಗಿತ್ತು.

ಉತ್ಪನ್ನವನ್ನು ತಪ್ಪಾಗಿ ಬ್ರ್ಯಾಂಡ್ ಮಾಡಿದ್ದಕ್ಕಾಗಿ 2014 ರಲ್ಲಿ ಅರ್ಜಿದಾರರಿಗೆ ಶಿಕ್ಷೆ ವಿಧಿಸಿದ ಮುನ್ಸಿಪಲ್ ಮ್ಯಾಜಿಸ್ಟ್ರೇಟ್ ಅವರು ಅವರು ಪದಾಧಿಕಾರಿಗಳಿಗೆ ₹ 5,000 ದಂಡದೊಂದಿಗೆ ಆರು ತಿಂಗಳ ಸಾದಾ ಜೈಲು ಶಿಕ್ಷೆಯನ್ನು ವಿಧಿಸಿದ್ದರು. ಕೋಲ್ಕತ್ತಾದ ಸೆಷನ್ಸ್ ನ್ಯಾಯಾಲಯ ಶಿಕ್ಷೆಯನ್ನು ರದ್ದುಗೊಳಿಸಿತಾದರೂ ಮುನ್ಸಿಪಲ್‌ ಮ್ಯಾಜಿಸ್ಟ್ರೇಟ್‌ಗೆ ಹೊಸದಾಗಿ ಪ್ರಕರಣ ನಿರ್ಣಯಿಸುವಂತೆ ಸೂಚಿಸಿ ಮರಳಿಸಿತ್ತು.  

ಪ್ರಕರಣ ಹೊಸದಾಗಿ ನಿರ್ಣಯಿಸುವಂತೆ ಸೂಚಿಸಿದ್ದ ಸೆಷನ್ಸ್‌ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಕಂಪೆನಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಮನವಿ ಪುರಸ್ಕರಿಸಿದ ಹೈಕೋರ್ಟ್‌ ಪ್ರಕರಣವನ್ನು ಸೆಷನ್ಸ್‌ ನ್ಯಾಯಾಲಯ ಮರಳಿ ನಿರ್ಣಯಿಸುವಂತೆ ಸೂಚಿಸುವ ಬದಲು ಖುಲಾಸೆಗೊಳಿಸಬೇಕಿತ್ತು ಎಂದು ತೀರ್ಪು ನೀಡಿದೆ.

ಏನಿದು ಮಿಸ್‌ಬ್ರ್ಯಾಂಡಿಂಗ್?

ಗ್ರಾಹಕರಲ್ಲಿ ಗೊಂದಲ ಮೂಡಿಸಿ ಪ್ರಯೋಜನ ಪಡೆಯುವ ಸಲುವಾಗಿ ನಿರ್ದಿಷ್ಟ ಉತ್ಪನ್ನದ ಪ್ಯಾಕೇಜಿಂಗ್‌ನಲ್ಲಿ ಉದ್ದೇಶಪೂರ್ವಕವಾಗಿ ದಿಕ್ಕುತಪ್ಪಿಸುವ ಮಾಹಿತಿ ಒದಗಿಸುವ ಮೋಸದ ವ್ಯಾಪಾರ ಕ್ರಮವನ್ನು ಮಿಸ್‌ಬ್ರ್ಯಾಂಡಿಂಗ್ ಎನ್ನಲಾಗುತ್ತದೆ. ಉದಾಹರಣೆಗೆ ಲೇಬಲಿಂಗ್‌ ಮಾಹಿತಿ ನೀಡದೇ ಇರುವುದು, ತಪ್ಪಾದ ಮಾಹಿತಿ ನೀಡುವುದು, ವಿವಾದಾತ್ಮಕ ಉತ್ಪನ್ನ ಅಥವಾ ಸೇವೆಯನ್ನು ಮರೆಮಾಚಿ ಮಾರಾಟ ಮಾಡುವುದು ಇದರಲ್ಲಿ ಸೇರಿದೆ.