ಕಲ್ಕತ್ತಾ ಹೈಕೋರ್ಟ್, ಸಂದೇಶ್‌ಖಾಲಿ ಹಿಂಸಾಚಾರ
ಕಲ್ಕತ್ತಾ ಹೈಕೋರ್ಟ್, ಸಂದೇಶ್‌ಖಾಲಿ ಹಿಂಸಾಚಾರ 
ಸುದ್ದಿಗಳು

ಇ ಡಿ ಅಧಿಕಾರಿಗಳ ಮೇಲೆ ಶಹಜಹಾನ್‌ ಬೆಂಬಲಿಗರ ಹಲ್ಲೆ: ತನಿಖೆ ನಿಲ್ಲಿಸುವಂತೆ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್‌ ಸೂಚನೆ

Bar & Bench

ಬಂಧಿತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶಹಜಹಾನ್ ಶೇಖ್ ವಿರುದ್ಧದ ತನಿಖೆಯನ್ನು ಮುಂದಿನ ಆದೇಶದವರೆಗೆ ತಡೆಹಿಡಿಯುವಂತೆ ಕಲ್ಕತ್ತಾ ಹೈಕೋರ್ಟ್ ಸೋಮವಾರ ಪಶ್ಚಿಮ ಬಂಗಾಳ ಪೊಲೀಸರಿಗೆ ಸೂಚಿಸಿದೆ. 

ಶೇಖ್ ಬೆಂಬಲಿಗರು ಇ ಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ತನಿಖೆಯನ್ನು ರಾಜ್ಯ ಪೊಲೀಸರು ಮಾಡಬೇಕೇ ಅಥವಾ ಕೇಂದ್ರ ತನಿಖಾ ದಳ (ಸಿಬಿಐ) ನಡೆಸಬೇಕೇ ಎಂದು ನಿರ್ಧರಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಟಿ ಎಸ್‌ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ಪೀಠ ಹೇಳಿದೆ.

"ಸಮಸ್ಯೆಯೆಂದರೆ ನಾವು ಈ ವ್ಯಕ್ತಿಯನ್ನು ಬಂಧಿಸಲು ಮಾತ್ರ ಅನುಮತಿ ನೀಡಿದ್ದೇವೆ ಆದರೆ ಈ ಎಫ್ಐಆರ್‌ಗಳಲ್ಲಿನ (ಇಡಿ ಅಧಿಕಾರಿಗಳ ಮೇಲಿನ ದಾಳಿ) ತನಿಖೆಯನ್ನು ತಡೆಹಿಡಿಯಲಾಗಿದೆ. ಹಾಗಾದರೆ ಯಾವುದೇ ತನಿಖೆ ಇಲ್ಲದಿರುವಾಗ ನೀವು ಒಬ್ಬ ವ್ಯಕ್ತಿಯನ್ನು ಹೇಗೆ ಬಂಧನದಲ್ಲಿಡಲು ಸಾಧ್ಯ?" ಎಂದು ಮುಖ್ಯ ನ್ಯಾಯಮೂರ್ತಿಗಳು ಅಡ್ವೊಕೇಟ್ ಜನರಲ್ (ಎಜಿ) ಕಿಶೋರ್ ದತ್ತಾ ಅವರನ್ನು ಕೇಳಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಎಜಿ, ಪ್ರಕರಣ ನಿರ್ಧಾರವಾಗುವವರೆಗೂ ರಾಜ್ಯ ಸರ್ಕಾರ ಈ ವಿಚಾರದಲ್ಲಿ ಮುಂದುವರೆಯುವುದಿಲ್ಲ ಎಂದು ಹೇಳಿದರು. 

"ಹೌದು. ಸದ್ಯಕ್ಕೆ ತನಿಖೆ ನಡೆಸದಿರಿ" ಎಂದು ನ್ಯಾಯಾಲಯ ಹೇಳಿತು.

ಸಿಜೆ ಟಿ.ಎಸ್.ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ

ಪ್ರಕರಣದಲ್ಲಿ ರಾಜ್ಯ ಪೊಲೀಸರು ಶೇಖ್ ಅವರನ್ನು ಬಂಧಿಸಿದ್ದಾರೆ ಎಂದು ಇ ಡಿ ಈ ಹಿಂದೆ ಪೀಠಕ್ಕೆ ತಿಳಿಸಿತ್ತು. ಪ್ರಕರಣದ ತನಿಖೆಯನ್ನು ಕಳೆದ ತಿಂಗಳು ಇದೇ ಪೀಠ ತಡೆಹಿಡಿದಿದೆ ಎಂದು ಡೆಪ್ಯುಟಿ ಸಾಲಿಸಿಟರ್ ಜನರಲ್ (ಡಿಎಸ್‌ಜಿ) ಧೀರಜ್ ತ್ರಿವೇದಿ ಅವರ ಮೂಲಕ ಇ ಡಿ ಗಮನ ಸೆಳೆದಿತ್ತು.

ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ ವಿ ರಾಜು ಅವರು, ಎಫ್‌ಐಆರ್‌ಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು ಉದ್ದೇಶಪೂರ್ವಕವಾಗಿ ಶೇಖ್ ಅವರನ್ನು ಬಂಧಿಸಿದ್ದಾರೆ. ಇದು ಅವರ ದುರುದ್ದೇಶವನ್ನು ತೋರಿಸುತ್ತದೆ ಎಂದು ಹೇಳಿದರು.

ಬಂಧನ ಒಂದು ಪ್ರಹಸನ. 15 ದಿನಗಳ ಕಾಲ ಈ ಕಸ್ಟಡಿ ಅವಧಿಯಲ್ಲಿ ಯಾವುದೇ ತನಿಖೆ ನಡೆಯದಿದ್ದರೆ ಯಾವುದೇ ಮಾಹಿತಿ ಹೊರಬರುವುದಿಲ್ಲ ಎಂದು ವಾದಿಸಿದ್ದರು.

ಆದರೆ ಶೇಖ್‌ ಅವರನ್ನು ಬಂಧಿಸಿದ ಪೊಲೀಸರ ಕ್ರಮ ಸಮರ್ಥಿಸಿಕೊಂಡ ಎಜಿ ದತ್ತಾ, ಸ್ಥಳೀಯ ಪೊಲೀಸರು ಕೆಲ ಆದೇಶಗಳನ್ನು ತಪ್ಪಾಗಿ ತಿಳಿದುಕೊಂಡಿರುವುದಾಗಿ ತಿಳಿಸಿದರು. ಆದರೆ ಈ ವಾದವನ್ನು ಅಲ್ಲಗಳೆದ ಎಎಸ್‌ಜಿ ರಾಜು "ಎಜಿ ಅನ್ಯಾಯಯುತ ವಾದ ಮಂಡಿಸುತ್ತಿದ್ದಾರೆ. ತಡೆಯಾಜ್ಞೆ ಇರುವುದು ತನಿಖೆಗೆ ಮಾತ್ರ ಬಂಧನಕ್ಕಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ್ದರೂ ಎಜಿ ಈ ರೀತಿಯ ಮನವಿ ಸಲ್ಲಿಸುತ್ತಿದ್ದಾರೆ" ಎಂದರು.

ಪ್ರಕರಣದ ತನಿಖೆ ನಡೆಸಲು ರಾಜ್ಯ ಪೊಲೀಸರು ಸಮರ್ಥರಾಗಿರುವುದರಿಂದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಎಜಿ ಹೇಳಿದರು. ತನ್ನ ಅಧಿಕಾರಿಗಳ ಮೇಲಿನ ದಾಳಿಯಲ್ಲಿ ರಾಜ್ಯ ಪೊಲೀಸರ ಪಾತ್ರವಿದೆ ಎಂದು ಇ ಡಿ ಯಾವುದೇ ಆರೋಪ ಮಾಡಿಲ್ಲ ಎಂದು ಅವರು ಹೇಳಿದರು. 

ಮತ್ತೊಂದು ತನಿಖಾ ಸಂಸ್ಥೆಗೆ ವರ್ಗಾಯಿಸಲು ಆದೇಶಿಸುವ ಅಧಿಕಾರವನ್ನು ಹೈಕೋರ್ಟ್‌ಗಳು ಎಚ್ಚರಿಕೆಯಿಂದ ಮತ್ತು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಬಳಸಬೇಕು ಎಂದು ಸುಪ್ರೀಂ ಕೋರ್ಟ್ ಪದೇ ಪದೇ ಅಭಿಪ್ರಾಯಪಟ್ಟಿದೆ ಎಂದು ಅವರು ಗಮನಸೆಳೆದರು.  

ಇದಕ್ಕೆ ಪ್ರತಿಕ್ರಿಯಿಸಿದ ಡಿಎಸ್‌ಜಿ ತ್ರಿವೇದಿ, ಘಟನೆಯ ಆರಂಭದಿಂದಲೂ ಸ್ಥಳೀಯ ಪೊಲೀಸರು ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ. ಇ ಡಿ ದೂರು ದಾಖಲಿಸುವ ಮೊದಲೇ, ಸ್ಥಳೀಯ ಪೊಲೀಸರು ಇ ಡಿ ಅಧಿಕಾರಿಗಳ ವಿರುದ್ಧ ಮಹಿಳೆಯರ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ, ಮಹಿಳೆಯರು ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಗಮನಸೆಳೆದರು. 

ವಾದಗಳನ್ನು ಆಲಿಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತು.