ತನ್ನ ಮಾಜಿ ಗೆಳತಿಗೆ 45 ಬಾರಿ ಇರಿದು ಕೊಲೆ ಮಾಡಿದ ಆರೋಪಿಯ ಮರಣದಂಡನೆಯನ್ನು ಕಲ್ಕತ್ತಾ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ [ಪಶ್ಚಿಮ ಬಂಗಾಳ ಸರ್ಕಾರ ಮತ್ತು ಸುಸಂತಾ ಚೌಧರಿ ನಡುವಣ ಪ್ರಕರಣ] .
ಅಪರಾಧಿ ಸುಧಾರಣೆಗೆ ಒಳಪಡದೆ ಇರುವವನಲ್ಲ ಎಂದು ತಿಳಿಸಿದ ನ್ಯಾಯಮೂರ್ತಿಗಳಾದ ದೇಬಾಂಗ್ಸು ಬಸಕ್ ಮತ್ತು ಮುಹಮ್ಮದ್ ಶಬ್ಬರ್ ರಶೀದಿ ಅವರಿದ್ದ ಪೀಠ ಸುಸಂತಾ ಚೌಧರಿಗೆ ವಿಧಿಸಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತು. ಅಲ್ಲದೆ, ಈ ಕೊಲೆ ಅಪರೂಪದ ಪ್ರಕರಣಗಳ ವರ್ಗಕ್ಕೆ ಸೇರುವುದಿಲ್ಲ ಎಂದು ಅದು ಹೇಳಿದೆ.
"ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆಗೆ ಸಂಬಂಧಿಸಿದ ಅಧಿಕಾರಗಳ ಅನುಪಾತ ಸೇರಿದಂತೆ ಪ್ರಸ್ತುತ ಪ್ರಕರಣದ ಸಂಪೂರ್ಣ ಸಂಗತಿಗಳು ಮತ್ತು ಸನ್ನಿವೇಶಗಳನ್ನು ಪರಿಗಣಿಸಿ, ಮೇಲ್ಮನವಿ ಸಲ್ಲಿಸಿದ ದಿನಾಂಕದಿಂದ ಇನ್ನೂ 40 ವರ್ಷಗಳ ಕಾಲ ವಿನಾಯಿತಿ ನೀಡುವ ಸಾಧ್ಯತೆಯಿಲ್ಲದೆ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ನ್ಯಾಯದ ಹಿತಾಸಕ್ತಿ ಕಾಪಾಡಿಕೊಳ್ಳಲಾಗುತ್ತದೆ" ಎಂದು ಪೀಠ ತೀರ್ಪು ನೀಡಿದೆ.
ಕೋಚಿಂಗ್ ಸೆಂಟರ್‌ನಲ್ಲಿ ಪರಿಚಯವಾಗಿದದ್ದ ಚೌಧರಿ ಮತ್ತು ಆತನ 21 ವರ್ಷದ ಗೆಳತಿ ಕೆಲಕಾಲ ಸಂಬಂಧದಲ್ಲಿದ್ದರು. ಆದರೆ ಚೌಧರಿ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಗೆಳತಿ ಮತ್ತು ಆಕೆಯ ಕುಟುಂಬ ದೂರಿತ್ತು ಮತ್ತು ಆಕೆಯನ್ನು ಹಾಗೂ ಆಕೆಯ ಕುಟುಂಬವನ್ನು ಚೌಧರಿ ಸಂಪರ್ಕಿಸದಂತೆ ತಾಕೀತು ಮಾಡಲಾಗಿತ್ತು. ಸಿನಿಮಾ ನೋಡಿ ಹಿಂತಿರುಗುತ್ತಿದ್ದಾಗ ಚೌಧರಿ ಆಕೆಯನ್ನು 45 ಬಾರಿ ಇರಿದು ಕೊಂದಿದ್ದ. ಆಕೆ ಯಾವುದೇ ಪ್ರತಿರೋಧ ತೋರದಿದ್ದರೂ ಹಲವು ಬಾರಿ ಇರಿದಿದ್ದ. ಪ್ರತ್ಯಕ್ಷದರ್ಶಿಗಳು ಕೃತ್ಯ ಎಸಗದಂತೆ ತಡೆಯಬಾರದು ಎಂದು ಆಟಿಕೆ ಗನ್ ಸಹ ಖರೀದಿಸಿದ್ದ ಎಂದು ಪ್ರತ್ಯಕ್ಷದರ್ಶಿಗಳು ಸಾಕ್ಷ್ಯ ನುಡಿದಿದ್ದರು.
ಆದರೆ ಅಪರಾಧಿ ಕ್ರಿಮಿನಲ್ ಚಾರಿತ್ರ್ಯ ಉಳ್ಳವನಲ್ಲ. ಜೊತೆಗೆ ಸಾರ್ವಜನಿಕರಲ್ಲಿ ಭೀತಿ ಮೂಡಿಸಲು ಕೃತ್ಯ ಎಸಗಿದ್ದ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ಗೆ ಸಾಧ್ಯವಾಗಿಲ್ಲ. ಅಲ್ಲದೆ ಮರಣದಂಡನೆ ಶಿಕ್ಷೆ ಎತ್ತಿಹಿಡಿಯಲು ಇದು ಅಪರೂಪದಲ್ಲೇ ಅಪರೂಪದ ಪ್ರಕರಣವಲ್ಲ ಎಂದು ನ್ಯಾಯಾಲಯ ಹೇಳಿದೆ.