Calcutta High Court and Jitendra Narain
Calcutta High Court and Jitendra Narain Facebook
ಸುದ್ದಿಗಳು

ಸಾಮೂಹಿಕ ಅತ್ಯಾಚಾರ ಪ್ರಕರಣ: ಮಾಜಿ ಮುಖ್ಯ ಕಾರ್ಯದರ್ಶಿಗೆ ಎಸ್‌ಐಟಿ ಮುಂದೆ ಹಾಜರಾಗಲು ಕಲ್ಕತ್ತಾ ಹೈಕೋರ್ಟ್‌ ನಿರ್ದೇಶನ

Bar & Bench

ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಅಂಡಮಾನ್‌ ನಿಕೋಬರ್‌ ಮಾಜಿ ಮುಖ್ಯ ಕಾರ್ಯದರ್ಶಿ ಹಾಗೂ ಐಎಎಸ್‌ ಅಧಿಕಾರಿ ಜಿತೇಂದ್ರ ನರೈನ್‌ ಅವರನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಹಾಜರಾಗುವಂತೆ ಪೋರ್ಟ್‌ ಬ್ಲೇರ್‌ನಲ್ಲಿರುವ ಕಲ್ಕತ್ತಾ ಹೈಕೋರ್ಟ್‌ನ ಸರ್ಕೀಟ್‌ ಪೀಠವು ಕಳೆದ ವಾರ ನಿರ್ದೇಶಿಸಿದೆ.

ಪ್ರಕರಣದ ಕುರಿತು ತುರ್ತು ತನಿಖೆಯಾಗಬೇಕಿದೆ ಎಂದು ನ್ಯಾಯಮೂರ್ತಿಗಳಾದ ಬಿಬೇಕ್‌ ಚೌಧರಿ ಮತ್ತು ಪ್ರಸೆಂಜಿತ್‌ ಬಿಸ್ವಾಸ್‌ ಅವರ ನೇತೃತ್ವದ ವಿಭಾಗೀಯ ಪೀಠವು ಹೇಳಿದ್ದು, ಅಕ್ಟೋಬರ್‌ 22ರಂದು ಎಸ್‌ಐಟಿ ಮುಂದೆ ಹಾಜರಾಗಲು ನರೈನ್‌ ಅವರಿಗೆ ನಿರ್ದೇಶಿಸಿದೆ.

“ಅಕ್ಟೋಬರ್‌ 22 ಮತ್ತು 28ರಂದು ಎಸ್‌ಐಟಿ ನಿಗದಿಪಡಿಸಿದ ದಿನದಂದು ಅರ್ಜಿದಾರರು ತನಿಖಾ ಸಂಸ್ಥೆಯ ಮುಂದೆ ಹಾಜರಾಗಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ನಿರೀಕ್ಷಣಾ ಜಾಮೀನು ವಿಸ್ತರಿಸುವಂತೆ ನರೈನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ವೇಳೆ ನ್ಯಾಯಾಲಯವು ಮೇಲಿನಂತೆ ಆದೇಶ ಮಾಡಿದೆ. ರಜಾ ಕಾಲ ಮುಗಿದ ಬಳಿಕ ಸರ್ಕೀಟ್‌ ಪೀಠವನ್ನು ಸಂಪರ್ಕಿಸುವಂತೆ ಅರ್ಜಿದಾರರು ಮತ್ತು ಪ್ರಾಸಿಕ್ಯೂಷನ್‌ಗೆ ನ್ಯಾಯಾಲಯ ಸ್ವಾತಂತ್ರ್ಯ ಕಲ್ಪಿಸಿದೆ.

ಅರ್ಜಿದಾರರ ವೈದ್ಯಕೀಯ ಪರೀಕ್ಷೆ ಸೇರಿದಂತೆ ಅವರನ್ನು ತನಿಖೆ ನಡೆಸಲು ಅಗತ್ಯ ಕ್ರಮಕೈಗೊಳ್ಳುವಂತೆ ಎಸ್‌ಐಟಿಗೆ ನ್ಯಾಯಾಲಯ ಆದೇಶ ಮಾಡಿದೆ.

ದೆಹಲಿ ಮತ್ತು ಕೇಂದ್ರಾಡಳಿತ ಪ್ರದೇಶ ಪೊಲೀಸರು ಜಂಟಿಯಾಗಿ ನರೈನ್‌ ಅವರ ಮನೆಯಲ್ಲಿ ಶೋಧ ನಡೆಸಿದ ಬಳಿಕ ದೆಹಲಿ ಹೈಕೋರ್ಟ್‌ ನರೈನ್‌ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಎರಡು ಸಂದರ್ಭದಲ್ಲಿ ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ನರೈನ್‌ ಆರೋಪಿಯಾಗಿದ್ದಾರೆ.

ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನರೈನ್‌ ಅವರನ್ನು ಕೇಂದ್ರ ಗೃಹ ಇಲಾಖೆಯು ಅಮಾನತು ಮಾಡಿದ್ದು, ಶಿಸ್ತು ಪ್ರಕ್ರಿಯೆ ಆರಂಭಿಸಿದೆ.