Calcutta High Court
Calcutta High Court 
ಸುದ್ದಿಗಳು

ಐದು ವರ್ಷ ಸೆರೆವಾಸದ ಬಳಿಕ, ಮನೋವ್ಯಾಧಿಯಿಂದ ಬಳಲುತ್ತಿದ್ದ ಕೊಲೆ ಆರೋಪಿಗೆ ಜಾಮೀನು ನೀಡಿದ ಕಲ್ಕತ್ತಾ ಹೈಕೋರ್ಟ್

Bar & Bench

ವಿಚಾರಣೆ ಇಲ್ಲದೆ ಸುಮಾರು ಐದು ವರ್ಷಗಳಿಂದ ಸೆರೆವಾಸ ಅನುಭವಿಸುತ್ತಿದ್ದ, ಸ್ಕಿಜೋಫ್ರೇನಿಯಾ ಮನೋವ್ಯಾಧಿಗೆ ತುತ್ತಾಗಿದ್ದ ಕೊಲೆ ಆರೋಪಿಯೊಬ್ಬರಿಗೆ ಕಲ್ಕತ್ತಾ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ.

ಮನೋವೈದ್ಯ ಸಲಹೆಗಾರರನ್ನು ಒಳಗೊಂಡ ಮಂಡಳಿ ಸಲ್ಲಿಸಿದ ವೈದ್ಯಕೀಯ ವರದಿ ಪರಿಗಣಿಸಿ ನ್ಯಾಯಮೂರ್ತಿಗಳಾದ ಅಜಯ್ ಕುಮಾರ್ ಗುಪ್ತಾ ಮತ್ತು ಜೋಯ್‌ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿತು.

“ಸರ್ಕಾರದ ಪರ ಹಾಜರಾದ ವಕೀಲರು ಸಲ್ಲಿಸಿದ ವೈದ್ಯಕೀಯ ವರದಿಯನ್ನು ದಾಖಲೆಯಲ್ಲಿ ಒದಗಿಸಲಾಗಿದೆ. ಅರ್ಜಿದಾರರು ವಿಚಾರಣೆ ಎದುರಿಸಲು ಯೋಗ್ಯರಲ್ಲ ಎಂದು ಅದು ಹೇಳುತ್ತಿದೆ. ಅರ್ಜಿದಾರರು ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದಾರೆ. ಅವರಿಗೆ ವೈದ್ಯಕೀಯ ಆರೈಕೆಯ ಅಗತ್ಯವಿದೆ” ಎಂದು ಪೀಠ ದಾಖಲಿಸಿತು.

ಜನವರಿ 2017ರಲ್ಲಿ ಕೊಲೆ ಕೃತ್ಯಕ್ಕೆ ಸಂಬಂಧಿಸಿದಂತೆ ಅರ್ಜಿದಾರನನ್ನು ಬಂಧಿಸಲಾಗಿತ್ತು. ಈ ಹಿಂದೆ ಹೈಕೋರ್ಟ್‌ ಮತ್ತು ಸೆಷನ್ಸ್‌ ನ್ಯಾಯಾಲಯಗಳು ಎರಡು ಬಾರಿ ಅವರಿಗೆ ಜಾಮೀನು ನಿರಾಕರಿಸಿದ್ದವು. ತಾನು 2014ರಿಂದ ಸ್ಕಿಜೋಫ್ರೇನಿಯಾ ಕಾಯಿಲೆಯಿಂದ ಬಳಲುತ್ತಿದ್ದುದರಿಂದ ತಮ್ಮ ತಂದೆ ತನ್ನನ್ನು ಪ್ರತಿನಿಧಿಸುತ್ತಿದ್ದರು. ತನ್ನ ಮಾನಸಿಕ ಅಸ್ವಸ್ಥತೆ ಪತ್ತೆ ಹಚ್ಚಲು 2019ರಲ್ಲಿ ವೈದ್ಯಕೀಯ ಮಂಡಳಿ ರಚಿಸಲಾಗಿತ್ತು.  ಅದು ತಾನು ವಿಚಾರಣೆ ಎದುರಿಸಲು ಅರ್ಹನಲ್ಲ ಎಂದು ಸಾರಿರುವುದಾಗಿ ಅರ್ಜಿ ವಿವರಿಸಿತ್ತು.

ಅಲ್ಲದೆ ಪ್ರಕರಣದ ತನಿಖೆ ಪೂರ್ಣಗೊಂಡಿರುವುದರಿಂದ ತಮ್ಮನ್ನು ಬಂಧನದಲ್ಲಿಡುವ ಅವಶ್ಯಕತೆ ಇಲ್ಲ. ನ್ಯಾಯಾಲಯ ವಿಧಿಸುವ ಯಾವುದೇ ಷರತ್ತುಗಳಿಗೆ ಬದ್ಧ ಮತ್ತು ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅರ್ಜಿದಾರರು ಆಶ್ವಾಸನೆ ನೀಡಿದ್ದರು.

ವೈದ್ಯಕೀಯ ಮಂಡಳಿಯ ವರದಿಯನ್ನು ಪರಿಗಣಿಸಿದ ವಿಭಾಗೀಯ ಪೀಠ, ಅರ್ಜಿದಾರನ ತಂದೆ ನೀಡಿದ ₹ 10,000 ಬಾಂಡ್‌ ಮತ್ತು ಇಬ್ಬರು ವ್ಯಕ್ತಿಗಳ ಶ್ಯೂರಿಟಿಯೊಂದಿಗೆ ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಒಪ್ಪಿಕೊಂಡಿತು.