ಕಲ್ಕತ್ತಾ ಹೈಕೋರ್ಟ್  
ಸುದ್ದಿಗಳು

ನ್ಯಾಯಾಲಯದಿಂದ ವಕೀಲರ ಬಂಧನದ ತೀರ್ಪು: ರಾತ್ರಿಯೇ ವಿಚಾರಣೆ ನಡೆಸಿ ಬಿಡುಗಡೆಗೆ ಆದೇಶಿಸಿದ ಕಲ್ಕತ್ತಾ ಹೈಕೋರ್ಟ್

Bar & Bench

ನ್ಯಾಯಾಂಗ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರನ್ನು ನ್ಯಾಯಾಲಯದ ವಿಚಾರಣೆ ವೇಳೆಯೇ ಬಂಧಿಸುವಂತೆ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರಿದ್ದ ಕಲ್ಕತ್ತಾ ಹೈಕೋರ್ಟ್‌ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ವಿಭಾಗೀಯ ಪೀಠ ರಾತ್ರಿ ವಿಚಾರಣೆ ನಡೆಸಿ ತಡೆಯಾಜ್ಞೆ ನೀಡಿದೆ.

ಬಂಧಿತ ವಕೀಲ ಪ್ರೊಸೆನ್‌ಜಿತ್‌ ಮುಖರ್ಜಿ ಅವರು ಪರಿಹಾರ ಕೋರಿ ನ್ಯಾಯಾಲಯಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಹರೀಶ್ ಟಂಡನ್ ಮತ್ತು ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ಪೀಠ ರಾತ್ರಿ 8: 30ರವರೆಗೆ ವಿಚಾರಣೆ ನಡೆಸಿತು.

ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ನೀಡಿದ್ದ ಆದೇಶವನ್ನು ವಿಭಾಗೀಯ ಪೀಠ ತಡೆ ಹಿಡಿಯಿತು.

"ಮೇಲ್ಮನವಿದಾರ ವಕೀಲ ಸಮುದಾಯಕ್ಕೆ ಸೇರಿದ್ದು ಮತ್ತು ಕಾನೂನು ವೃತ್ತಿಯಲ್ಲಿರುವುದರಿಂದ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸುವುದು ಸೂಕ್ತ ಎಂದು ನಾವು ಭಾವಿಸುತ್ತೇವೆ. ಆದ್ದರಿಂದ, ಈ ನ್ಯಾಯಾಲಯದ ಮುಂದಿನ ಆದೇಶದವರೆಗೆ ಮೇಲ್ಮನವಿದಾರನಿಗೆ ಮೂರು ದಿನಗಳ ಸಿವಿಲ್ ಜೈಲು ಶಿಕ್ಷೆಯನ್ನು ಅನುಭವಿಸಲು ನಿರ್ದೇಶಿಸಲಾದ 2023 ರ ಡಿಸೆಂಬರ್ 18 ರ ಆದೇಶ ಜಾರಿಯಾಗದಂತೆ ತಡೆಹಿಡಿಯಲಾಗುತ್ತಿದೆ" ಎಂದು ಆದೇಶ ತಿಳಿಸಿದೆ.

ಏಕಸದಸ್ಯ ಪೀಠದ ಮುಂದೆ ಬೇಷರತ್ತಾಗಿ ಕ್ಷಮೆಯಾಚಿಸಿದರೂ ಶೆರಿಫ್/ಡೆಪ್ಯುಟಿ ಶೆರಿಫ್ ತನ್ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮುಖರ್ಜಿ ನ್ಯಾಯಾಲಯಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ನಂತರ ಅವರನ್ನು ಬಿಡುಗಡೆ ಮಾಡಲಾಗಿದೆಯಾದರೂ ಆದೇಶ ಜಾರಿಗೆ ತಂದರೆ ತಮ್ಮನ್ನು ಮತ್ತೆ ಕಸ್ಟಡಿಗೆ ತೆಗೆದುಕೊಳ್ಳುವ ಭೀತಿ ಇರುವುದಾಗಿ ಅವರು ವಿಭಾಗೀಯ ಪೀಠಕ್ಕೆ ವಿವರಿಸಿದ್ದರು.

ನ್ಯಾಯಾಲಯದಲ್ಲಿ ಹಿಂದೆಂದೂ ನಡೆಯದ ಘಟನೆಗಳು ಸಂಭವಿಸಿರುವುದನ್ನು ಪರಿಗಣಿಸಿ ಪ್ರಸ್ತುತ ಪ್ರಕರಣದ ವಿಚಾರಣೆ ನಡೆಸಿ ಸೂಕ್ತ ಆದೇಶ ನೀಡುವುದಕ್ಕಾಗಿ ಪೀಠವೊಂದನ್ನು ರಚಿಸಲಾಗುತ್ತಿದೆ ಎಂದು ತಿಳಿಸಿದ ನ್ಯಾಯಾಲಯ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿತು.

ಇದಕ್ಕೂ ಮೊದಲು ವಿಚಾರಣೆ ಸಂದರ್ಭದಲ್ಲಿ ವಕೀಲರನ್ನು ಬಂಧಿಸಲು ಆದೇಶ ನೀಡಿದ್ದ ನ್ಯಾ. ಅಭಿಜಿತ್‌ ಗಂಗೋಪಾಧ್ಯಾಯ ಅವರ ತೀರ್ಪಿಗೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದ ಕಲ್ಕತ್ತಾ ಹೈಕೋರ್ಟ್‌ ವಕೀಲರ ಸಂಘ ಅವರಿಂದ ಎಲ್ಲಾ ನ್ಯಾಯಾಂಗ ಕಾರ್ಯಗಳನ್ನು ಹಿಂಪಡೆಯುವಂತೆ ಸರ್ವಾನುಮತದ ನಿರ್ಣಯ ಕೈಗೊಂಡು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿತ್ತು.

ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಅವರಿಗೆ ಬರೆದ ಪತ್ರದಲ್ಲಿ, ವಕೀಲರ ಸಂಘ "ಪ್ರೊಸೆನ್‌ಜಿತ್‌ ಮುಖರ್ಜಿ ಅವರಿಗೆ ತೀವ್ರ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಈ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದೆ ಎಂದು ತಿಳಿಸಿತ್ತು.

ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಕ್ಷಮೆಯಾಚಿಸದ ಹೊರತು ಯಾವುದೇ ಸದಸ್ಯರು ನ್ಯಾಯಾಲಯಕ್ಕೆ ಕಾಲಿಡಬಾರದು ಎಂದು ಸಂಘ ನಿರ್ಧರಿಸಿತ್ತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Prosenjit Mukherjee vs Aparna Modak.pdf
Preview