Calcutta High Court
Calcutta High Court 
ಸುದ್ದಿಗಳು

ಭುವನೇಶ್ವರದ ಏಮ್ಸ್ ಆಸ್ಪತ್ರೆಗೆ ಪಾರ್ಥ ಚಟರ್ಜಿ ಸ್ಥಳಾಂತರ: ಜಾರಿ ನಿರ್ದೇಶನಾಲಯಕ್ಕೆ ಕಲ್ಕತ್ತಾ ಹೈಕೋರ್ಟ್ ಅನುಮತಿ

Bar & Bench

ಶಿಕ್ಷಕರ ಉದ್ಯೋಗ ಹಗರಣದ ಆರೋಪಿ, ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರನ್ನು ಕಲ್ಕತ್ತಾದ ಎಸ್‌ಎಸ್‌ಕೆಎಂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಒಡಿಶಾದ ಭುವನೇಶ್ವರದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಆಸ್ಪತ್ರೆಗೆ ಸ್ಥಳಂತರಿಸುವಂತೆ ಜಾರಿ ನಿರ್ದೇಶನಾಲಯ (ಇ ಡಿ) ಮಾಡಿದ್ದ ಮನವಿಯನ್ನು ಭಾನುವಾರ ನಡೆದ ವಿಶೇಷ ಕಲಾಪದ ವೇಳೆ ಕಲ್ಕತ್ತಾ ಹೈಕೋರ್ಟ್‌ ಪುರಸ್ಕರಿಸಿತು.

ಅಧಿಕಾರಿಗಳ ವಿಚಾರಣೆ ಎದುರಿಸಬೇಕಾದಾಗ ಟಿಎಂಸಿ ನಾಯಕರು ವೈದ್ಯಕೀಯ ಕಾರಣಗಳ ನೆಪ ಹೇಳಿ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಆಶ್ರಯ ಪಡೆದ ಸಂಶಯಾಸ್ಪದ ದಾಖಲೆ ಇದೆ ಎಂಬ ಇ ಡಿ ವಾದವನ್ನು ಆಲಿಸಿದ ನ್ಯಾಯಾಲಯ ಚಟರ್ಜಿ ಸ್ಥಳಾಂತರಕ್ಕೆ ಅನುಮತಿಸಿತು.

“ಆರೋಪಿ ಪಶ್ಚಿಮ ಬಂಗಾಳ ಸರ್ಕಾರದ ಅತ್ಯಂತ ಹಿರಿಯ ಕ್ಯಾಬಿನೆಟ್ ಮಂತ್ರಿಯಾಗಿದ್ದು ದೊಡ್ಡಮಟ್ಟದ ಅಧಿಕಾರ ಮತ್ತು ಹುದ್ದೆ ಹೊಂದಿರುವ ಕಾರಣದಿಂದಾಗಿ ಇತರೆ ರಾಜಕೀಯ ವ್ಯಕ್ತಿಗಳ ಸಹಾಯ ಪಡೆದು ಗಂಭೀರ ಕಾಯಿಲೆ ಇದೆ ಎಂಬ ಸೋಗಿನಲ್ಲಿ ವಿಚಾರಣೆಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯದ ಮಾತೇನಲ್ಲ. ಇದಕ್ಕೆ ಅವಕಾಶ ನೀಡಿದರೆ ಹಣಕ್ಕಾಗಿ ಭವಿಷ್ಯ ನಾಶವಾದ ಸಾವಿರಾರು ಅರ್ಹ ಅಭ್ಯರ್ಥಿಗಳ ಕಣ್ಣಿರಿನ ಶಾಪಕ್ಕೆ ನ್ಯಾಯದೇವತೆ ತುತ್ತಾಗುತ್ತಾಳೆ” ಎಂದು ನ್ಯಾಯಾಲಯ ಹೇಳಿದೆ.

“ಆರೋಪಿಯನ್ನು ಎಸ್‌ಎಸ್‌ಕೆಎಂ ಎಸ್‌ಎಸ್‌ಕೆಎಂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆಂಬ್ಯುಲೆನ್ಸ್ ಮೂಲಕ ಕೊಲ್ಕತ್ತಾದ ನೇತಾಜಿ ಸುಭಾಷ್‌ ಚಂದ್ರ ಬೋಸ್ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಬೇಕು. ಆರೋಪಿಯೊಂದಿಗೆ ಎಸ್‌ಎಸ್‌ಕೆಎಂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಮತ್ತು ಆರೋಪಿಯ ಪರ ವಕೀಲರು ಇರಬೇಕು. ಏಮ್ಸ್‌ ವೈದರ ತಂಡ ಆರೋಪಿಯನ್ನು ಪರೀಕ್ಷೆಗೆ ಒಳಪಡಿಸಿ ಜುಲೈ 25 ರಂದು ಮಧ್ಯಾಹ್ನ 3 ಗಂಟೆಗೆ ಇ ಡಿಗೆ ವರದಿ ಸಲ್ಲಿಸಬೇಕು. ನಂತರ ಪ್ರಕರಣದ ವಿಚಾರಣೆ ಪಿಎಂಎಲ್‌ಎ ವಿಶೇಷ ನ್ಯಾಯಾಲಯದಲ್ಲಿ ನಡೆಯಬೇಕು" ಎಂದು ಪೀಠ ಆದೇಶಿಸಿದೆ.

ಜುಲೈ 23 ರಂದು ಕಲ್ಕತ್ತಾದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಪ್ರಭಾರ) ನೀಡಿದ್ದ ಎರಡು ನಿರ್ದೇಶನಗಳನ್ನು ಪ್ರಶ್ನಿಸಿ ಇಡಿ ಸಲ್ಲಿಸಿದ್ದ ಮನವಿ ಆಲಿಸಿದ ನ್ಯಾಯಾಲಯ ಈ ಆದೇಶ ನೀಡಿದೆ.