ಸುದ್ದಿಗಳು

ಶಿಕ್ಷಕರ ನಡವಳಿಕೆ: ಮಾನದಂಡ ನಿಗದಿಪಡಿಸಿದ ಕಲ್ಕತ್ತಾ ಹೈಕೋರ್ಟ್

Bar & Bench

ಶಿಕ್ಷಕರು ಸೂಕ್ತ ರೀತಿಯಲ್ಲಿ ನಡೆದುಕೊಳ್ಳಲು ಮತ್ತು ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದನ್ನು ತಪ್ಪಿಸಲು ಅಗತ್ಯವಾದ ಮಾರ್ಗಸೂಚಿಗಳನ್ನು ಕಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ಹೊರಡಿಸಿದೆ [ಡಾ. ಸಿಮಾ ಬ್ಯಾನರ್ಜಿ ಮತ್ತು ಡಾ. ಬರ್ನಾಲಿ ಚಟ್ಟೋಪಾಧ್ಯಾಯ ನಡುವಣ ಪ್ರಕರಣ].

ನ್ಯಾಯಮೂರ್ತಿ ಶಂಪಾ ದತ್ (ಪೌಲ್) ಅವರಿದ್ದ ಏಕಸದಸ್ಯ ಪೀಠ ಶಿಕ್ಷಕರು ಸೂಕ್ತ ರೀತಿಯಲ್ಲಿ ನಡೆದುಕೊಳ್ಳಲು ಅಗತ್ಯವಾದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ವಿದ್ಯಾರ್ಥಿಗಳ ಬಗ್ಗೆ ಗೌರವ ಭಾವನೆ, ವಿಷಯ ಮತ್ತು ಬೋಧನಾ ವಿಧಾನಗಳಲ್ಲಿ ಪರಿಣತಿ, ಎಲ್ಲಾ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವ್ಯವಹಾರಗಳಲ್ಲಿ ಪ್ರಾಮಾಣಿಕತೆ, ವೃತ್ತಿಪರತೆ, ವಿದ್ಯಾರ್ಥಿಗಳ ಕೆಲಸವನ್ನು ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡುವ ನ್ಯಾಯಸಮ್ಮತತೆ ಮತ್ತು ನಿಷ್ಪಕ್ಷಪಾತತನ, ಸಿಬ್ಬಂದಿಗಳ ನಡುವೆ ಉತ್ತಮ ಸಹಕಾರ ಮನೋಭಾವ, ತಮ್ಮ ಕ್ಷೇತ್ರದಲ್ಲಿ ಪ್ರಸುತತೆ ಕಾಯ್ದುಕೊಳ್ಳಲು ನಿರಂತರ ಸುಧಾರಣೆ, ಶೈಕ್ಷಣಿಕ ಸಮುದಾಯಕ್ಕೆ ಧನಾತ್ಮಕ ಕೊಡುಗೆ, ಸಾಂಸ್ಥಿಕ ನೀತಿಗಳ ಪಾಲನೆಯಂತಹ ಮಾರ್ಗಸೂಚಿಗಳನ್ನು ನೀಡಲಾಗಿದೆ.

ತಮ್ಮ ವಿರುದ್ಧ ಕಾಲೇಜಿನ ಶಿಕ್ಷಕಿಯೊಬ್ಬರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಹೂಗ್ಲಿ ಮಹಿಳಾ ಕಾಲೇಜಿನ ಪ್ರಾಂಶುಪಾಲರು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಸೂಚನೆಗಳನ್ನು ನೀಡಿತು.

ರಾಜಕೀಯ ಪ್ರಭಾವಕ್ಕೊಳಗಾಗಿ ಶಿಕ್ಷಣ ನೀಡುವುದು ಶಿಕ್ಷಣದ ಪ್ರಾಥಮಿಕ ಧ್ಯೇಯೋದ್ದೇಶವನ್ನೇ ಕಡೆಗಣಿಸುತ್ತದೆ. ಇದು ದುರದೃಷ್ಟಕರ ಮತ್ತು ವಿದ್ಯಾರ್ಥಿಗಳ ಕಲ್ಯಾಣಕ್ಕೆ ಮಾರಕ ಎಂದು ನ್ಯಾಯಮೂರ್ತಿಗಳು ಮೇ 2ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಾಸಿಕ್ಯೂಷನ್ ವಾದದ ಪ್ರಕಾರ, ಅರ್ಜಿದಾರರು 2015ರಲ್ಲಿ ಹೂಗ್ಲಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ನಂತರ, ಪ್ರತಿವಾದಿ ಶಿಕ್ಷಕರ ಹೆಸರಿನಲ್ಲಿ ಕೆಲವು ಕಾಲ್ಪನಿಕ ಪಿತೂರಿಗಳ ಬಗ್ಗೆ ಸುಳ್ಳು ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

ಆಗಸ್ಟ್ 9, 2018 ರಂದು, ಅರ್ಜಿದಾರರು ಸಾರ್ವಜನಿಕ ಸಂದರ್ಶನವೊಂದರಲ್ಲಿ ಹೂಗ್ಲಿ ಮಹಿಳಾ ಕಾಲೇಜಿನಲ್ಲಿ ನಡೆಯುತ್ತಿರುವ ಪರಿಸ್ಥಿತಿಯನ್ನು ವರ್ಣಿಸಿದ್ದರು. ಈ ಸಂದರ್ಶನವನ್ನು ಎಬಿಪಿ ಆನಂದ್ ಸುದ್ದಿ ವಾಹಿನಿ ಪ್ರಸಾರ ಮಾಡಿತ್ತು, ಇದರಲ್ಲಿ ಅರ್ಜಿದಾರರು ಹೂಗ್ಲಿ ಮಹಿಳಾ ಕಾಲೇಜಿನ ನಡೆಯುತ್ತಿರುವ ರಾಜಕೀಯ ಮತ್ತು ಅಸ್ತವ್ಯಸ್ತವಾಗಿರುವ ಪರಿಸ್ಥಿತಿಯನ್ನು ವರ್ಣಿಸಿದ್ದು ಹಲವಾರು ಸಂದರ್ಭಗಳಲ್ಲಿ ದೂರುದಾರ ಶಿಕ್ಷಕಿ ಮತ್ತು ಪ್ರಿಯಾಂಕಾ ಅಧಿಕಾರಿ ಎಂಬುವವರನ್ನು ಹೆಸರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಧಿಕಾರಿ, ತೃಣಮೂಲ ಛತ್ರ ಪರಿಷತ್ತಿನ (ಟಿಎಂಸಿಪಿ) ಜಿಲ್ಲಾ ಘಟಕದ ಜಂಟಿ ಕಾರ್ಯದರ್ಶಿ ಹಾಗೂ ಹೂಗ್ಲಿ ಮಹಿಳಾ ಕಾಲೇಜಿನ ಟಿಎಂಸಿಪಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ, ಕಾಲೇಜಿನಲ್ಲಿ ನಡೆಯುತ್ತಿರುವ ವಿವಿಧ ಕಾನೂನುಬಾಹಿರ ಚಟುವಟಿಕೆಗಳಿಗೆ ಮುಖ್ಯ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದ್ದರು ಎಂಬುದಾಗಿ ಅಹವಾಲು ಸಲ್ಲಿಸಿದ್ದರು.

ವಾದ ಆಲಿಸಿದ ನ್ಯಾಯಾಲಯ ಅರ್ಜಿದಾರರ ಆರೋಪ ಐಪಿಸಿ ಸೆಕ್ಷನ್‌ 499 (ಮಾನನಷ್ಟ) ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿತು. ದೂರುದಾರರ ವಿರುದ್ಧ ಮಾಡಲಾದ ಆರೋಪಗಳು ನಿರಾಧಾರ ಅವರ ಖ್ಯಾತಿಗೆ ಧಕ್ಕೆ ತರುವ ಉದ್ದೇಶದಿಂದ ಈ ಆರೋಪಗಳನ್ನು ಮಾಡಲಾಗಿದೆ ಎಂದು ಪ್ರಕರಣವನ್ನು ರದ್ದುಗೊಳಿಸಿತು.