Calcutta High Court  
ಸುದ್ದಿಗಳು

ಕೊಲೆ ಪ್ರಕರಣ: ಆರೋಪದಿಂದ ಗೂರ್ಖಾ ನಾಯಕನನ್ನು ಕೈ ಬಿಡುವ ನಿರ್ಧಾರ ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್

Bar & Bench

ಅಖಿಲ ಭಾರತ ಗೂರ್ಖಾ ಲೀಗ್‌ ನಾಯಕ  ಮದನ್ ತಮಾಂಗ್ ಅವರನ್ನು 2010ರಲ್ಲಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಹಾಗೂ ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ನಾಯಕ ಬಿಮಲ್ ಗುರುಂಗ್ ಹೆಸರನ್ನು ಸೇರಿಸುವಂತೆ ಕಲ್ಕತ್ತಾ ಹೈಕೋರ್ಟ್ ಗುರುವಾರ  ಸಿಬಿಐಗೆ ನಿರ್ದೇಶನ ನೀಡಿದೆ [ಭಾರತಿ ತಮಾಂಗ್ ಮತ್ತು ಸಿಬಿಐ ಇನ್ನಿತರರ ನಡುವಣ ಪ್ರಕರಣ].

ಅಖಿಲ ಭಾರತ ಗೂರ್ಖಾ ಲೀಗ್‌ ನಾಯಕ ತಮಾಂಗ್‌ನಹತ್ಯೆಯಲ್ಲಿ ಗುರುಂಗ್‌ ಭಾಗಿಯಾಗಿದ್ದಾರೆ ಎಂಬುದು ಸಾಕಷ್ಟು ರೀತಿಯಲ್ಲಿ ಸಾಬೀತಾಗಿದೆ ಎಂದು ನ್ಯಾಯಮೂರ್ತಿ ಸುಭೇಂದು ಸಾಮಂತ ಹೇಳಿದ್ದಾರೆ. 

"ಸಾಕ್ಷಿಗಳು ಆರೋಪಿಯ ಹೆಸರನ್ನು ನೇರವಾಗಿ ಹೇಳಿರುವಾಗ ಕ್ರಿಮಿನಲ್‌ ಪ್ರಕರಣದಿಂದ ಅಂತಹ ಆರೋಪಿಯನ್ನು ಬಿಡುಗಡೆ ಮಾಡುವುದಕ್ಕೆ ಅನುಮತಿ ಇರುವುದಿಲ್ಲ. ಬಿಮಲ್ ಗುರುಂಗ್ ಅವರನ್ನು ಇತರ ಆರೋಪಿಗಳ ನಾಯಕ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಆತನ ವಿರುದ್ಧದ ಆರೋಪ ಈ ಹಂತದಲ್ಲಿ ಸಾಕಷ್ಟು ರೀತಿಯಲ್ಲಿ ಸಾಬೀತಾಗಿದೆ," ಎಂದು  ನ್ಯಾಯಾಲಯ ಪ್ರಕರಣದಿಂದ ಗುರುಂಗ್‌ ಅವರನ್ನು ಬಿಡುಗಡೆ ಮಾಡಿದ್ದ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು ಆರೋಪಿಗಳಿಂದ ಗುರುಂಗ್‌ ಅವರನ್ನು ಪ್ರತ್ಯೇಕವಾಗಿಟ್ಟು ಸಿಟಿ ಸೆಷನ್ಸ್‌ ನ್ಯಾಯಾಲಯ ಎಡವಿದೆ ಎಂದು ಅದು ನುಡಿಯಿತು. ,

 ಮೇ 21, 2010ರಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುವಾಗ ತಮಾಂಗ್ ಅವರನ್ನು ಕೊಲ್ಲಲಾಗಿತ್ತು. ಗೂರ್ಖಾಗಳಿಗೆ ಪ್ರತ್ಯೇಕ ರಾಜ್ಯದ ಬೇಡಿಕೆಗೆ ಸಂಬಂಧಿಸಿದಂತೆ ಡಾರ್ಜಿಲಿಂಗ್‌ನಲ್ಲಿನ ರಾಜಕೀಯದ ವಿವರಗಳನ್ನು ಬಹಿರಂಗಪಡಿಸಲು ಹೊರಟಿದ್ದರಿಂದ ಅವರನ್ನು ಕೊಲ್ಲಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು.

ಗುರುಂಗ್ ನೇತೃತ್ವದ ಮೋರ್ಚಾ ಡಾರ್ಜಿಲಿಂಗ್ ರಾಜಕೀಯದಲ್ಲಿ ಮುಂಚೂಣಿಯಲ್ಲಿತ್ತು.

ಗೂರ್ಖಾಲ್ಯಾಂಡ್ ಎಂಬ ಹೆಸರಿನ ಸ್ವಾಯತ್ತ ಮಂಡಳಿಯನ್ನು ಒಪ್ಪುವ ಗುರುಂಗ್‌ ಮತ್ತವರ ಸಂಘಟನೆ  ಪ್ರತ್ಯೇಕ ರಾಜ್ಯ ಸ್ಥಾಪನೆ ಬಗ್ಗೆ ಪ್ರಾಮಾಣಿಕ ಯತ್ನ ಮಾಡುತ್ತಿಲ್ಲ ಎಂಬುದು ತಮಂಗ್‌ ಅವರ ಆರೋಪವಾಗಿತ್ತು.

ಸಿಐಡಿ ಆರಂಭದಲ್ಲಿ ಪ್ರಕರಣದ ತನಿಖೆ ನಡೆಸುತ್ತಿತ್ತು. ಆದರೆ ಮೋರ್ಚಾದ ಸದಸ್ಯ ಮತ್ತು ಪ್ರಮುಖ ಆರೋಪಿ ನಿಕೋಲ್ ತಮಾಂಗ್ ಸಿಐಡಿ ವಶದಿಂದ ತಪ್ಪಿಸಿಕೊಂಡ ಬಳಿಕ, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು.

ಸಿಬಿಐ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಗುರುಂಗ್ ಮತ್ತು ಅವರ 47 ಅನುಯಾಯಿಗಳನ್ನು ಪ್ರಕರಣದಲ್ಲಿ ಆರೋಪಿಸಿತ್ತು, ಆರೋಪಪಟ್ಟಿಯಲ್ಲಿ ಅವರ ಪತ್ನಿ ಆಶಾ ಮತ್ತು ರಾಜಕಾರಣಿಗಳಾದ ರೋಷನ್ ಗಿರಿ  ಹಾಗೂ ಬಿನಯ್ ತಮಾಂಗ್ ಅವರ ಹೆಸರನ್ನೂ ಉಲ್ಲೇಖಿಸಲಾಗಿತ್ತು.

, ಸಿಬಿಐ ತಮಂಗ್‌ ವಿರುದ್ಧ ಸಾಕಷ್ಟು ಸಾಕ್ಷ್ಯ ಒದಗಿಸಿಲ್ಲ ಎಂದು ತಿಳಿಸಿ 2017 ರಲ್ಲಿ, ಕೆಳ ನ್ಯಾಯಾಲಯವು ಗುರುಂಗ್ ಅವರನ್ನು ಆರೋಪಪಟ್ಟಿಯಿಂದ ಕೈಬಿಟ್ಟಿತ್ತು. ತಮಂಗ್‌ ಅವರ ಪತ್ನಿ ಭಾರತಿ ಹಾಗೂ ಸಿಬಿಐ ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು.