ಸುದ್ದಿಗಳು

ಗೂಗಲ್ ಪ್ಲೇ ಸ್ವತಃ ಪಾವತಿ ಅಗ್ರಿಗೇಟರ್ ಅಲ್ಲವಾದರೂ ಆರ್‌ಬಿಐ ನಿರ್ಧಾರ ಅಂತಿಮ: ಕಲ್ಕತ್ತಾ ಹೈಕೋರ್ಟ್

ಗೂಗಲ್ ಪ್ಲೇ ಸ್ಟೋರ್‌ನಿಂದ ತನ್ನನ್ನು ತೆಗೆದುಹಾಕಿರುವುದನ್ನು ಪ್ರಶ್ನಿಸಿ ಬಂಗಾಳಿ ಓವರ್-ದಿ-ಟಾಪ್ (OTT) ವೇದಿಕೆ ಹೋಯ್ಚೋಯ್ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ನ್ಯಾಯಾಲಯ ಈ ಎಕ್ಸ್ ಫೇಸಿ ಪ್ರಕಟಿಸಿತು.

Bar & Bench

ಗೂಗಲ್‌ ಪ್ಲೇ ಸ್ವತಃ ಪಾವತಿ ಅಗ್ರಿಗೇಟರ್‌ ಅಲ್ಲ ಏಕೆಂದರೆ ಅದು ವಿಭಿನ್ನ ಪಾವತಿ ವಿಧಾನಗಳನ್ನು ಮಾತ್ರ ಒದಗಿಸುತ್ತದೆಯೇ ವಿನಾ ಆ್ಯಪ್‌ಗಳು ಮತ್ತು ಗ್ರಾಹಕರ ನಡುವೆ ಎಂಡ್‌-ಟು-ಎಂಡ್‌ ಪಾವತಿಗಳನ್ನು ನಿರ್ವಹಣೆ ಮಾಡುವುದಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್‌ ಈಚೆಗೆ ಹೇಳಿದೆ [ಹೋಯ್‌ಚೋಯ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಆರ್‌ಬಿಐ ಇನ್ನಿತರರ ನಡುವಣ ಪ್ರಕರಣ].

ತಾನು ಗೂಗಲ್‌ ಪ್ಲೇಯ ಬಿಲ್ಲಿಂಗ್‌ ವ್ಯವಸ್ಥೆಯನ್ನು (ಜಿಪಿಬಿಎಸ್‌) ಒಪ್ಪದೇ ಇದ್ದುದರಿಂದ ಅದು ತನ್ನನ್ನು ತೆಗೆದುಹಾಕಿರುವುದನ್ನು ಪ್ರಶ್ನಿಸಿ ಬಂಗಾಳಿ ಓವರ್-ದಿ-ಟಾಪ್ (ಒಟಿಟಿ) ವೇದಿಕೆ ಹೋಯ್‌ಚೋಯ್‌ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ಅವರಿದ್ದ ಪೀಠ ಈ ಎಕ್ಸ್‌ ಫೇಸಿ ಪ್ರಕಟಿಸಿತು.

ಆದರೂ ಪಾವತಿ ವಹಿವಾಟು ಸುಗಮಗೊಳಿಸಲು ಜಿಪಿಬಿಎಸ್‌ ಬಳಸಿಕೊಳ್ಳುವ ಮೂಲಕ ಗೂಗಲ್‌ ಸಮೂಹ ಕಂಪೆನಿಗಳು ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯಿದೆ- 2007ನ್ನು ಉಲ್ಲಂಘಿಸುತ್ತಿವೆ ಎಂದು ಹೋಯ್‌ಚೋಯ್‌ ದೂರಿರುವ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

“ಎತ್ತಲಾದ ಪ್ರಶ್ನೆಗಳು ಬಹಳ ವಾದಯೋಗ್ಯವಾಗಿದ್ದು ಪಿಎಸ್ಎಸ್ ಕಾಯಿದೆಯ ಉಲ್ಲಂಘನೆ ಎದುರಿಸಲು ತನ್ನದೇ ಆದ ವ್ಯವಸ್ಥೆ ಹೊಂದಿರುವ ಮತ್ತು  ಕಾಯಿದೆ ತಿಳಿಸಿರುವಂತೆ ನಿಯಂತ್ರಕ ಮತ್ತು ನ್ಯಾಯನಿರ್ಣಯ ಪ್ರಾಧಿಕಾರವಾಗಿರುವ ಆರ್‌ಬಿಐ ಈ ಕುರಿತು ನಿರ್ಧರಿಸಬೇಕು” ಎಂದು ನ್ಯಾಯಾಲಯ ನುಡಿದಿದೆ.

ಗೂಗಲ್ ಗ್ರೂಪ್ ಆಫ್ ಕಂಪನಿಗಳ ವಿರುದ್ಧದ ದೂರಿನ ಬಗ್ಗೆ ಆರ್‌ಬಿಐ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ಹೋಯ್‌ಚೋಯ್‌ ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಷಯ ತಿಳಿಸಿದೆ.

ಜಿಪಿಬಿಎಸ್‌ ಅನ್ನು ಸ್ವೀಕರಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಹೋಯ್‌ಚೋಯ್‌ ಆರೋಪಿಸಿತು. ಆದರೆ ಅರ್ಜಿ ವಜಾಗೊಳಿಸುವಂತೆ ಆರ್‌ಬಿಐ ಕೋರಿತು.

ವಾದ ಆಲಿಸಿದ ನ್ಯಾಯಾಲಯ ಪ್ರಾಥಮಿಕ ಪರಿಹಾರ ನೀಡುವಂತೆ ಆರ್‌ಬಿಐಗೆ ನಿರ್ದೇಶನ ಇತ್ತಿದ್ದರೂ ಪ್ಲೇ ಸ್ಟೋರ್‌ನಿಂದ ತೆಗೆದುಹಾಕದಂತೆ ರಕ್ಷಣೆ ಕೋರಿರುವ ಮನವಿಯಲ್ಲಿ ನೈಜ ಪರಿಹಾರ ಅಡಕವಾಗಿದೆ ಎಂದಿತು.