National Flag and Calcutta High Court A1
ಸುದ್ದಿಗಳು

ರಾಷ್ಟ್ರಧ್ವಜ ಅಪವಿತ್ರ ಆರೋಪ: ಸತ್ಯ ಹೇಳುವಂತೆ ರಾಜ್ಯ ಸರ್ಕಾರವನ್ನು ಕೇಳಿದ ಕಲ್ಕತ್ತಾ ಹೈಕೋರ್ಟ್

ಇಂತಹ ಕೃತ್ಯಗಳಲ್ಲಿ ತೊಡಗಿರುವವರನ್ನು ಹೊಣೆಗಾರರನ್ನಾಗಿ ಮಾಡಿ ತಕ್ಕ ಪಾಠ ಕಲಿಸುವ ಮಹತ್ವವನ್ನು ನ್ಯಾಯಾಲಯ ಒತ್ತಿ ಹೇಳಿತು.

Bar & Bench

ಸ್ವಾತಂತ್ರ್ಯ ದಿನಾಚರಣೆಯಂದು ಹೂಗ್ಲಿ ಜಿಲ್ಲೆಯಲ್ಲಿ ರಾಷ್ಟ್ರಧ್ವಜವನ್ನು ಅಪವಿತ್ರಗೊಳಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ನಾಯಕ ಸುವೆಂದು ಅಧಿಕಾರಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಪಶ್ಚಿಮ ಬಂಗಾಳ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ.

ರಾಷ್ಟ್ರಧ್ವಜವನ್ನು ಅಪವಿತ್ರಗೊಳಿಸಿದ ನಂತರ ಹೂಗ್ಲಿಯ ಶಾಲೆಯೊಂದರಲ್ಲಿ ಹಿಂಸಾಚಾರ ಸಂಭವಿಸಿದ್ದು ಮಹಿಳೆಯರು ಸೇರಿದಂತೆ ಹಿಂಸಾಚಾರದಲ್ಲಿ ಸಂತ್ರಸ್ತರಾದವರನ್ನು ಬಂಧಿಸಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಯಂತಹ ಮಹತ್ವದ ರಾಷ್ಟ್ರೀಯ ಕಾರ್ಯಕ್ರಮದ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಅಪವಿತ್ರಗೊಳಿಸಿರುವ ಬಗ್ಗೆ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ಪೀಠ ತೀವ್ರ ಕಳವಳ ವ್ಯಕ್ತಪಡಿಸಿದೆ. ಇಂತಹ ಕೃತ್ಯಗಳಲ್ಲಿ ತೊಡಗುವವರನ್ನು ಹೊಣೆಗಾರರನ್ನಾಗಿ ಮಾಡಿ ತಕ್ಕ ಪಾಠ ಕಲಿಸುವ ಮಹತ್ವವನ್ನು ನ್ಯಾಯಾಲಯ ಒತ್ತಿ ಹೇಳಿದೆ.

ಇದು ಗಂಭೀರ ವಿಚಾರವಲ್ಲವೇ ಎಂದು ನ್ಯಾಯಾಲಯ ಪ್ರಶ್ನಿಸಿದಾಗ ರಾಜ್ಯ ಸರ್ಕಾರ ಧ್ವಜ ಅಪವಿತ್ರ ಕಾರ್ಯ ನಡೆದಿಲ್ಲ ಎಂದು ಹೇಳಿತು. ಅಪವಿತ್ರಗೊಳಿಸದೇ ಇದ್ದರೆ 16- 17ವ್ಯಕ್ತಿಗಳನ್ನು ಏಕೆ ಬಂಧಿಸಲಾಯಿತು ಎಂದು ನ್ಯಾಯಾಲಯ ಪ್ರಶ್ನಿಸಿತು.

"ದಯವಿಟ್ಟು ನಿಜ ಹೇಳಿ. ಅಲ್ಲದೆ, ನೀವು ರಾಜಕೀಯ ಬಣ್ಣ ಕೊಡುವ ಪ್ರತಿಯೊಂದು ವಿಷಯಕ್ಕೂ ಇದು ಸಮ್ಮತವಲ್ಲ. ಅಪವಿತ್ರತೆ ನಡೆದಿದ್ದರೆ, ಶಾಲೆಯ ಅಧಿಕಾರಿಗಳ ಹೇಳಿಕೆ ಇತ್ಯಾದಿಗಳು ನಡೆದಿವೆಯೇ ಅಥವಾ ಇಲ್ಲವೇ? ನೀವು ಕಣ್ಣು ಮುಚ್ಚುವುದರಿಂದ ಜಗತ್ತಿಗೆ ಕತ್ತಲಾಗುವುದಿಲ್ಲ, ಆದ್ದರಿಂದ ನೀವು ಸತ್ಯ ಹೇಳಬೇಕಾಗಿದೆ. ಇಲ್ಲಿ ನನ್ನ ಅನುಭವಕ್ಕೆ ಬಂದಂತೆ ಕಾರಣದ ಬಗ್ಗೆ ಗಮನ ಕೇಂದ್ರೀಕರಿಸಲಾಗಿಲ್ಲ, ಬದಲಿಗೆ ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದ ವ್ಯಕ್ತಿಯ ಬಗ್ಗೆ ಗಮನ ಕೇಂದ್ರೀಕರಿಸಲಾಗಿದೆ. ನೀವು ಬಯಸಿದರೆ, ನಾವು ಅರ್ಜಿದಾರರನ್ನು ಕೈಬಿಡುತ್ತೇವೆ”ಎಂದು ನ್ಯಾಯಾಲಯ ಕುಟುಕಿತು.