ಸುದ್ದಿಗಳು

ಜ್ಞಾನವಾಪಿ ಮಸೀದಿ ಶಿವಲಿಂಗವ ಕಾರಂಜಿ ಎನ್ನುವುದು ಅವಹೇಳನಕಾರಿ: ವೈಜ್ಞಾನಿಕ ವಿಶ್ಲೇಷಣೆಗೆ ಹಿಂದೂ ಪಕ್ಷಕಾರರ ಮನವಿ

ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ಶಿವಲಿಂಗದ ವೈಜ್ಞಾನಿಕ ವಿಶ್ಲೇಷಣೆ ನಡೆಸಬೇಕು ಎಂದು ಅಲಾಹಾಬಾದ್ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಕೆಲಕಾಲ ಮುಂದೂಡುವಂತೆ ಸುಪ್ರೀಂ ಕೋರ್ಟ್ ಈ ವರ್ಷದ ಮೇನಲ್ಲಿ ಆದೇಶಿಸಿತ್ತು.

Bar & Bench

ಜ್ಞಾನವಾಪಿ ಮಸೀದಿಯ ಶಿವಲಿಂಗವನ್ನು 'ಕಾರಂಜಿ' ಎಂದಿರುವುದು ಅದಕ್ಕೆ ಅವಹೇಳನ ಮಾಡಿದಂತೆ. ಹೀಗಾಗಿ ವಿವಾದಿತ ವಸ್ತುವನ್ನು ವೈಜ್ಞಾನಿಕ ವಿಶ್ಲೇಷಣೆ ನಡೆಸಿ ವಿವಾದ ಇತ್ಯರ್ಥಗೊಳಿಸಬೇಕು ಎಂದು ಪ್ರಕರಣದ ಹಿಂದೂ ಪಕ್ಷಕಾರರು ಸೋಮವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಶಿವಲಿಂಗದ ವೈಜ್ಞಾನಿಕ ವಿಶ್ಲೇಷಣೆ ನಡೆಸಬೇಕು ಎಂದು ಅಲಾಹಾಬಾದ್‌ ಹೈಕೋರ್ಟ್‌ ನೀಡಿದ್ದ ನಿರ್ದೇಶನವನ್ನು ಕೆಲಕಾಲ ಮುಂದೂಡುವಂತೆ ಸುಪ್ರೀಂ ಕೋರ್ಟ್‌ ಈ ವರ್ಷದ ಮೇನಲ್ಲಿ ಆದೇಶಿಸಿತ್ತು. ಹೈಕೋರ್ಟ್ ನಿರ್ದೇಶನ ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಪ್ರತಿಕ್ರಿಯೆ ನೀಡಬೇಕೆಂದು ಆಗ ಅದು ಸೂಚಿಸಿತ್ತು.

ವಕೀಲ ವಿಷ್ಣು ಶಂಕರ್ ಜೈನ್ ಅವರ ಮೂಲಕ ಹಿಂದೂ ಪಕ್ಷಕಾರರು ಸಲ್ಲಿಸಿರುವ ಇತ್ತೀಚಿನ ಅಫಿಡವಿಟ್‌ ಶಿವಲಿಂಗವನ್ನು 'ಕಾರಂಜಿ' ಎಂದು ಉಲ್ಲೇಖಿಸುವ ಮೂಲಕ ಮುಸ್ಲಿಂ ಅರ್ಜಿದಾರರು ಶಿವಲಿಂಗವನ್ನು ಅವಮಾನಿಸುತ್ತಿದ್ದಾರೆ. ದೇಶದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಹಿಂದೂಗಳು ಶ್ರದ್ಧಾ ಭಕ್ತಿಗಳಿಂದ ನಡೆದುಕೊಳ್ಳುವ ದೈವ ಶಿವಲಿಂಗವಾಗಿದೆ. ಆದ್ದರಿಂದ ಅವರಿಗೆ ಆ ದೇವರನ್ನು ಪೂಜಿಸುವ ಮೂಲಭೂತ ಹಕ್ಕು ಇದೆ ಎಂದಿದೆ.

ಮೊಕದ್ದಮೆಯನ್ನು ಸಂಪೂರ್ಣವಾಗಿ ಮತ್ತು ಅಂತಿಮವಾಗಿ ನಿರ್ಧರಿಸಲು, ಶಿವಲಿಂಗ/ಕಾರಂಜಿಯ ವೈಜ್ಞಾನಿಕ ತನಿಖೆ ನಡೆಸುವುದು ಪೂರ್ವಾಪೇಕ್ಷಿತ ಎಂಬುದು ಸ್ಪಷ್ಟವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಎಎಸ್‌ಐ ಮೊಹರು ಮಾಡಿದ ಸ್ಥಳದ ಪರಿಶೀಲನೆ ನಡೆಸಬೇಕು. ಈ ಪ್ರಕ್ರಿಯೆ ನಡೆಸುವಾಗ ಯಾವುದೇ ಹಾನಿಯಾಗದಂತೆ ಅನುಸರಿಸಬೇಕಾದ ವಿಧಾನದ ಬಗ್ಗೆ ತಜ್ಞರಿಂದ ಅಭಿಪ್ರಾಯಪಡೆಯಬೇಕು ಎಂಬುದು ಸೇರಿದಂತೆ ಸುಮಾರು ಏಳು ಸಲಹೆಗಳನ್ನು ಹಿಂದೂಪಕ್ಷಕಾರರು ಎಎಸ್‌ಐಗೆ ನೀಡಿದ್ದಾರೆ.  

ವೈಜ್ಞಾನಿಕ ವಿಶ್ಲೇಷಣೆಯಿಂದ ವಿವಾದಿತ ವಸ್ತುವಿನ ಸ್ವರೂಪ ಮತ್ತು ಅದರ ಕಾಲ ತಿಳಿಯಲಿದೆ ಎಂದು ಎಎಸ್‌ಐ ಸಲ್ಲಿಸಿದ ವರದಿ ಹೇಳಿರುವುದರಿಂದ ಹೈಕೋರ್ಟ್‌ ಆದೇಶ ಸಂಪೂರ್ಣ ಸಿಂಧು ಮತ್ತು ಸಮರ್ಥನೀಯವಾಗಿದೆ ಎಂದು ಅಫಿಡವಿಟ್‌ ವಿವರಿಸಿದೆ. ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಇಂದು ಪ್ರಕರಣದ ವಿಚಾರಣೆ ನಡೆಸಲಿದೆ.