ಲೈಂಗಿಕ ಕಿರುಕುಳ 
ಸುದ್ದಿಗಳು

ಅಪರಿಚಿತ ಮಹಿಳೆಯನ್ನು'ಡಾರ್ಲಿಂಗ್' ಎಂದು ಕರೆಯುವುದು ಲೈಂಗಿಕ ಕಿರುಕುಳ: ಕಲ್ಕತ್ತಾ ಹೈಕೋರ್ಟ್

ಕುಡಿದ ಮತ್ತಿನಲ್ಲಿ ಮಹಿಳಾ ಕಾನ್‌ಸ್ಟೇಬಲ್‌ಗೆ "ಕ್ಯಾ ಡಾರ್ಲಿಂಗ್, ಚಲನ್ ಕರನೇ ಆಯಿ ಹೈ ಕ್ಯಾ?" ಎಂದು ಕೇಳಿದ ವ್ಯಕ್ತಿಗೆ ವಿಧಿಸಿದ್ದ ಶಿಕ್ಷೆಯನ್ನು ನ್ಯಾ. ಜೇ ಸೇನ್‌ಗುಪ್ತಾ ಅವರು ಎತ್ತಿಹಿಡಿದಿದ್ದಾರೆ.

Bar & Bench

ಅಪರಿಚಿತ ಮಹಿಳೆಯನ್ನು 'ಡಾರ್ಲಿಂಗ್' ಎಂದು ಕರೆಯುವುದು ಅಪಮಾನಕರ ಹಾಗೂ ಲೈಂಗಿಕ ಛಾಯೆಯ ಹೇಳಿಕೆಯಾಗಿದ್ದು, ಐಪಿಸಿ ಸೆಕ್ಷನ್ 354 ಎ (ಐ) ಪ್ರಕಾರ ಲೈಂಗಿಕ ಛಾಯೆಯ ಹೇಳಿಕೆಗಳು ದಂಡನೀಯ ಎಂದು ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ (ಜನಕ್ ರಾಮ್ ಮತ್ತು ಪ. ಬಂಗಾಳ ಸರ್ಕಾರ ನಡುವಣ ಪ್ರಕರಣ).

ಕುಡಿದ ಅಮಲಿನಲ್ಲಿ ಬಂಧಿತನಾಗಿದ್ದ‌ ಅರ್ಜಿದಾರ ಜನಕರಾಮ್‌ ಮಹಿಳಾ ಪೊಲೀಸ್‌ ಪೇದೆಗೆ "ಕ್ಯಾ ಡಾರ್ಲಿಂಗ್, ಚಲನ್ ಕರ್ನೆ ಆಯಿ ಹೈ ಕ್ಯಾ?" (ಏನು ಡಾರ್ಲಿಂಗ್, ದಂಡ ವಿಧಿಸಲು ಬಂದಿದ್ದೀಯಾ?) ಎಂದು ಪ್ರಶ್ನಿಸಿದ್ದ. ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ಆತನಿಗೆ ವಿಧಿಸಿದ್ದ ಶಿಕ್ಷೆಯನ್ನು ಪೋರ್ಟ್ ಬ್ಲೇರ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಜೇ ಸೇನ್ ಗುಪ್ತಾ ಅವರು ಎತ್ತಿಹಿಡಿದರು.

354 ಎ (ಮಹಿಳೆಯ ಗೌರವಕ್ಕೆ ಧಕ್ಕೆ) ಸೆಕ್ಷನ್ ಅನ್ನು ಪ್ರಸ್ತಾಪಿಸಿದ ನ್ಯಾ. ಜೇ ಅವರು ಇದು ಲೈಂಗಿಕ ಛಾಯೆಯ ಹೇಳಿಕೆಗಳ ಬಳಕೆಗೆ ಶಿಕ್ಷೆ ವಿಧಿಸುತ್ತದೆ ಎಂದರು.

"ಅಪರಿಚಿತ ಮಹಿಳೆಯನ್ನು, ಆಕೆ ಪೊಲೀಸ್ ಕಾನ್‌ಸ್ಟೇಬಲ್‌ ಆಗಿರಲಿ ಅಥವಾ ಇಲ್ಲದಿರಲಿ, ಆರೋಪಿ ಕುಡಿದಿರಲಿ ಅಥವಾ ಕುಡಿಯದಿರಲಿ, 'ಡಾರ್ಲಿಂಗ್' ಎಂಬ ಪದದಿಂದ ಬೀದಿಯಲ್ಲಿ ಸಂಬೋಧಿಸುವುದು ಸಂಪೂರ್ಣವಾಗಿ ಅಪಮಾನಕರವಾಗಿದ್ದು ಪದ ಮೂಲತಃ ಲೈಂಗಿಕ ಛಾಯೆಯ ಹೇಳಿಕೆಯಾಗಿದೆ" ಎಂದು ಏಕ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ತಾನು ಕುಡಿದಿದ್ದೆ ಎನ್ನುವುದಕ್ಕೆ ಯಾವುದೇ ಸಾಕ್ಷಿಯಿಲ್ಲ ಎಂದು ಆರೋಪಿ ಹೇಳಿಕೊಂಡಿದ್ದನ್ನು ತಿಳಿದ ನ್ಯಾಯಾಲಯ "ಅಮಲುರಹಿತ ಸ್ಥಿತಿಯಲ್ಲಿ ಇದನ್ನು ಹೇಳಿದ್ದರೆ ಅಪರಾಧದ ಗಂಭೀರತೆ ಬಹುಶಃ ಇನ್ನೂ ಹೆಚ್ಚಾಗಿರುತ್ತಿತ್ತು" ಎಂದು 'ಕಪಾಳಮೋಕ್ಷʼ ಮಾಡಿತು.

ಬೀದಿಯಲ್ಲಿರುವ ಪುರುಷ ಅನುಮಾನಾಸ್ಪದವಲ್ಲದ ಮತ್ತು ಪರಿಚಿತರಲ್ಲದ ಮಹಿಳೆಯನ್ನು ಹೀಗೆ ಆಮೋದದಲ್ಲಿ ಕರೆಯಲು ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿರುವ ಮಾನದಂಡಗಳು ಅನುಮತಿಸುವುದಿಲ್ಲ ಎಂದು ಅದು ಒತ್ತಿ ಹೇಳಿತು.

ಸಂತ್ರಸ್ತ ಪೇದೆ ಮತ್ತು ಇತರ ಪೊಲೀಸ್‌ ಸಿಬ್ಬಂದಿಯನ್ನು ದುರ್ಗಾಪೂಜೆಯ ಮುನ್ನಾದಿನ ಲಾಲ್‌ ಟಿಕ್ರಿ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನೇಮಿಸಲಾಗಿತ್ತು. ಈ ವೇಳೆ ಜನರಿಗೆ ಉಪಟಳ ನೀಡುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿದ ಪೊಲೀಸರ ಒಂದು ತಂಡ ಆತನನ್ನು ಠಾಣೆಗೆ ಕರೆದೊಯ್ಯಿತು. ಈ ವೇಳೆ ಸಂತ್ರಸ್ತೆ ಸೇರಿದಂತೆ ಇತರೆ ಕೆಲ ಪೊಲೀಸರು ಅವರಿದ್ದ ಸ್ಥಳದಲ್ಲಿ ಕತ್ತಲು ಆವರಿಸಿದ್ದರಿಂದ ಸಮೀಪದಲ್ಲಿಯೇ ಬೆಳಕಿದ್ದ ಅಂಗಡಿಯೊಂದರ ಮುಂದಕ್ಕೆ ಬಂದು ನಿಂತರು. ಈ ಸಂದರ್ಭದಲ್ಲಿ ಅಲ್ಲಿಯೇ ಅಂಗಡಿಯ ಮುಂದೆ ನಿಂತಿದ್ದ ಮೇಲ್ಮನವಿದಾರನಾದ ಆರೋಪಿಯು ಸಂತ್ರಸ್ತೆಯ ವಿರುದ್ಧ ಲೈಂಗಿಕ ಛಾಯೆಯ ಪದಪ್ರಯೋಗ ಮಾಡಿದ.

ಉತ್ತರ ಮತ್ತು ಮಧ್ಯ ಅಂಡಮಾನ್‌ನ ಪ್ರಥಮ ದರ್ಜೆ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಮೇಲ್ಮನವಿದಾರನನ್ನು ದೋಷಿ ಎಂದು ಘೋಷಿಸಿ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು (ಐಪಿಸಿ) ಸೆಕ್ಷನ್ 354 ಎ (1) (4) ಮತ್ತು 509 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದ ಪದ, ಸನ್ನೆ ಅಥವಾ ಕೃತ್ಯ) ಅಡಿಯ ಅಪರಾಧಗಳಿಗಾಗಿ ತಲಾ ರೂ 500 ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿದ್ದ ಆತನ ಮೇಲ್ಮನವಿಯನ್ನು ಉತ್ತರ ಮತ್ತು ಮಧ್ಯ ಅಂಡಮಾನ್‌ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಕೂಡ ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಆತ ಹೈಕೋರ್ಟ್‌ ಮೆಟ್ಟಿಲೇರಿದ್ದ.

ಸೆಕ್ಷನ್ 354 ಎ ಮತ್ತು 509ನ್ನು ಪರಿಶೀಲಿಸಿದ ಹೈಕೋರ್ಟ್‌ ಪರಿಚಯವಿಲ್ಲದ ಮಹಿಳೆಯನ್ನು ಸಂಬೋಧಿಸಲು 'ಡಾರ್ಲಿಂಗ್' ರೀತಿಯ ಪದ ಬಳಸುವುದು ಎರಡೂ ಸೆಕ್ಷನ್‌ಗಳ ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ಅಭಿಪ್ರಾಯಪಟ್ಟಿತು. ಆದರೆ ಅಪರಾಧವನ್ನು ಆತ ಇನ್ನಷ್ಟು ತೀವ್ರಗೊಳಿಸಿಲ್ಲ ಮತ್ತು ಅಪಮಾನಕಾರಿ ಅಭಿವ್ಯಕ್ತಿಯನ್ನು ಉಚ್ಚರಿಸಿ ಅಲ್ಲಿಗೇ ನಿಂತಿದ್ದಾನೆ ಎಂದ ನ್ಯಾಯಾಲಯ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮೂರು ತಿಂಗಳ ಶಿಕ್ಷೆ ಬದಲಾಗಿ ಶಿಕ್ಷೆಯ ಪ್ರಮಾಣವನ್ನು ಒಂದು ತಿಂಗಳಿಗೆ ಇಳಿಸಿತು.

[ತೀರ್ಪಿನ ಪ್ರತಿಗಾಗಿ ಈ ಕೆಳಗೆ ಕ್ಲಿಕ್ಕಿಸಿ]

Janak Ram vs State of West Bengal.pdf
Preview