ಶಾಸನ ಸಭೆಗೆ ಚರ್ಚೆಗೆ ಕಳಿಸುವುದಕ್ಕೆ ಮುನ್ನ ಭಾರತೀಯ ಮಹಾಲೇಖಪಾಲರ ವರದಿಗಳನ್ನು(ಸಿಎಜಿ ವರದಿ) ಬಹಿರಂಗಪಡಿಸಬಹುದೇ ಎಂಬ ಕುರಿತು ಶೀಘ್ರವೇ ದೆಹಲಿ ಹೈಕೋರ್ಟ್ ತೀರ್ಪು ನೀಡಲಿದೆ [ಬ್ರಿಜ್ ಮೋಹನ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಕೇಂದ್ರ ಸರ್ಕಾರ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಮತ್ತು ಸಿಎಜಿ ಆಡಿಟ್ ವರದಿಗಳನ್ನು ಸಂಬಂಧಪಟ್ಟ ಜಾಲತಾಣಗಳಲ್ಲಿ ಪ್ರಕಟಿಸಿದರೆ ಸಾರ್ವಜನಿಕರು ಮತದಾನ ಮಾಡುವ ಮುನ್ನ ಅವರಿಗೆ ದೆಹಲಿಯ ಹಣಕಾಸಿನ ಸ್ಥಿತಿಗತಿ ತಿಳಿಯುತ್ತದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ತಿಳಿಸಿತ್ತು.
ರಾಷ್ಟ್ರ ರಾಜಧಾನಿಯಲ್ಲಿ ಚುನಾವಣೆ ಸನ್ನಿಹಿತವಾಗಿರುವಂತೆ ಸಿಎಜಿ ವರದಿಗಳನ್ನು ಮಂಡಿಸುವುದಕ್ಕಾಗಿ ದೆಹಲಿ ವಿಧಾನಸಭೆ ವಿಶೇಷ ಅಧಿವೇಶ ನಡೆಸುವಂತೆ ಬಿಜೆಪಿ ಒತ್ತಾಯಿಸುತ್ತಿದೆ.
ಪಿಐಎಲ್ ಅರ್ಜಿದಾರರ ವಾದ ಮೂಲಭೂತವಾಗಿ ಮಾಹಿತಿ ಬಹಿರಂಗಪಡಿಸುವ ಹಕ್ಕು ಮತ್ತು ತಿಳಿದುಕೊಳ್ಳುವ ಹಕ್ಕಿನ ಕುರಿತಾಗಿದೆ ಎಂದು ಜನವರಿ 14 ರಂದು, ನ್ಯಾಯಮೂರ್ತಿ ಯಶವಂತ್ ವರ್ಮಾ ಮತ್ತು ನ್ಯಾಯಮೂರ್ತಿ ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ಪೀಠ ತಿಳಿಸಿದೆ.
ಲೆಕ್ಕಪರಿಶೋಧನಾ ವರದಿಗಳನ್ನು ವಿಧಾನಸಭೆಯಲ್ಲಿ ಮಂಡಿಸುವವರೆಗೆ ಅದನ್ನು ಬಹಿರಂಗಗೊಳಿಸುವಂತಿಲ್ಲ ಎಂಬುದು ಸಿಎಜಿ ನಿಲುವುವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, "ಸದನದಲ್ಲಿ ಚರ್ಚೆ ಮತ್ತು ಚರ್ಚೆಯ ಉದ್ದೇಶಗಳಿಗಾಗಿ ವರದಿಗಳು ಮತ್ತು ಲೆಕ್ಕಪತ್ರಗಳನ್ನು ಹಾಕುವುದನ್ನಷ್ಟೇ ಕಾರ್ಯವಿಧಾನದ ಕೈಪಿಡಿ ನಿಯಂತ್ರಿಸುತ್ತದೆ. ಹಾಗಾಗಿ ಪ್ರಾಥಮಿಕ ದೃಷ್ಟಿಯಲ್ಲಿ, ರಿಟ್ ಅರ್ಜಿದಾರರು ಪ್ರತಿಪಾದಿಸಿರುವ ಮಾಹಿತಿಯ ಮೇಲಿನ ಹಕ್ಕನ್ನು ಕಸಿದುಕೊಳ್ಳುವುದಿಲ್ಲ” ಎಂದಿದೆ. ನ್ಯಾಯಾಲಯ ಜನವರಿ 24 ರಂದು ಪ್ರಕರಣವನ್ನು ಮತ್ತೆ ವಿಚಾರಣೆ ನಡೆಸಲಿದೆ.
ಸಿಎಜಿ ವರದಿಗಳನ್ನು ಬಹಿರಂಗಪಡಿಸದೇ ಇರುವುದು ಸಂವಿಧಾನದ 19(1)(ಎ) ವಿಧಿ ಪ್ರಕಾರ ಮಾಹಿತಿ ಪಡೆಯುವ ನಾಗರಿಕರ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನಿವೃತ್ತ ಅಧಿಕಾರಿ ಬ್ರಿಜ್ ಮೋಹನ್ ಅವರು ವಾದಿಸಿದ್ದರು. ಅವರನ್ನು ಹಿರಿಯ ವಕೀಲೆ ಗೀತಾ ಲೂತ್ರಾ ಪ್ರತಿನಿಧಿಸಿದ್ದರು.
ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತಿತರರು (ಚುನಾವಣಾ ಬಾಂಡ್ ಯೋಜನೆ) ಹಾಗೂ ಭಾರತ ಒಕ್ಕೂಟ ಸರ್ಕಾರ ಇನ್ನಿತರರ ನಡುವಣ ಪ್ರಕರಣದಲ್ಲಿ ಮತದಾರರ ಮಾಹಿತಿಯ ಹಕ್ಕನ್ನು ಪ್ರಜಾಸತ್ತಾತ್ಮಕ ಭಾಗವಹಿಸುವಿಕೆಗೆ ಅವಿಭಾಜ್ಯ ಅಂಗವೆಂದು ಪರಿಗಣಿಸಲಾಗಿದೆ ಎಂಬುದಾಗಿ ಆಕೆ ವಾದಿಸಿದ್ದರು.
ಆದರೆ ವರದಿಯನ್ನು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಮತ್ತು ಸಾಂವಿಧಾನಿಕ ಅಧಿಕಾರಿಗಳಿಗೆ ಮಾತ್ರ ಸಲ್ಲಿಸುವುದು ತನ್ನ ಸಾಂವಿಧಾನಿಕ ಬದ್ಧತೆಯಾಗಿದೆ ಎಂದು ಮಹಾಲೇಖಪಾಲ ಸಂಸ್ಥೆ ವಾದಿಸಿತ್ತು.