Winzo & Karnataka HC 
ಸುದ್ದಿಗಳು

ಕಚೇರಿಯಲ್ಲಿನ ಶೋಧದ ಸಿಸಿಟಿವಿ ದೃಶ್ಯಾವಳಿಯನ್ನು ವಿನ್ಜೊಗೆ ನೀಡಬಹುದೇ? ಹೈಕೋರ್ಟ್‌

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್‌ 18 ರಿಂದ 22 ರವರೆಗೆ ಶೋಧ ಮತ್ತು ಜಫ್ತಿ ನಡೆಸಿರುವುದನ್ನು ಪ್ರಶ್ನಿಸಿ ವಿನ್ಜೊ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ನಡೆಸಿತು.

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣದ (ಪಿಎಂಎಲ್‌ಎ) ಸಂಬಂಧ ವಿನ್ಜೊ ಕಚೇರಿಯಲ್ಲಿ ನಡೆಸಿದ ಶೋಧ ಮತ್ತು ಜಫ್ತಿಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಯನ್ನು ಕಂಪನಿಗೆ ನೀಡುವ ಸಂಬಂಧ ಬುಧವಾರ ಉತ್ತರಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

ದೆಹಲಿಯ ಮಾಳವೀಯ ನಗರದಲ್ಲಿರುವ ಕಚೇರಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್‌ 18 ರಿಂದ 22 ರವರೆಗೆ ಶೋಧ ಮತ್ತು ಜಫ್ತಿ ನಡೆಸಿರುವುದನ್ನು ಪ್ರಶ್ನಿಸಿ ವಿನ್ಜೊ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ನಡೆಸಿತು.

ನವೆಂಬರ್‌ 21 ರಂದು ಬ್ಯಾಂಕ್‌ ಖಾತೆಗಳನ್ನು ನಿರ್ಬಂಧಿಸಿರುವುದು ಮತ್ತು ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್‌ 17(1A) ಅಡಿ ಇತರೆ ಆರ್ಥಿಕ ಆಸ್ತಿಗಳನ್ನು ಜಫ್ತಿ ಮಾಡಿರುವುದನ್ನು ವಿನ್ಜೊ ಪ್ರಶ್ನಿಸಿದೆ.

ವಿನ್ಜೊ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್‌ ಅಗರ್ವಾಲ್‌ ಅವರು “ಪಿಎಂಎಲ್‌ಎ ಸೆಕ್ಷನ್‌ 17 ರಕ್ಷಣಾ ಕ್ರಮಗಳನ್ನು ಮೀರಿ ಶೋಧನಾ ಪ್ರಕ್ರಿಯೆ ನಡೆಸಲಾಗಿದೆ. ಐದು ದಿನಗಳ ಕಾಲ ಇ ಡಿ ಅಧಿಕಾರಿಗಳು ಕಂಪನಿಯಲ್ಲೇ ಉಳಿದು, ಉದ್ಯೋಗಿಗಳು ಮತ್ತು ಮೂರನೇ ವ್ಯಕ್ತಿಗಳನ್ನು ಬರಮಾಡಿಕೊಂಡು ಅರ್ಧರಾತ್ರಿಯಲ್ಲಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಕೆಲವೊಮ್ಮೆ ಇದು ಬೆಳಗಿನ ಜಾವದವರೆಗೂ ನಡೆದಿದೆ. ಸೆಕ್ಷನ್‌ 17ರ ಪ್ರಕಾರ ಶೋಧದ ಸಂದರ್ಭದಲ್ಲಿ ಯಾರು ಕಂಪನಿಯಲ್ಲಿರುತ್ತಾರೋ ಅವರ ಹೇಳಿಕೆ ಮಾತ್ರ ದಾಖಲಿಸಿಕೊಳ್ಳಬಹುದು. ಶೋಧ ನಡೆಸಿದ ಸ್ಥಳವನ್ನು ಇ ಡಿಯು ವಿಚಾರಣೆಗೆ ಒಳಪಡಿಸುವ ಸ್ಥಳವನ್ನಾಗಿಸಲಾಗದು” ಎಂದು ಆಕ್ಷೇಪಿಸಿದರು.

ಮುಂದುವರಿದು, “ಕಚೇರಿಯಲ್ಲಿದ್ದ ಸಿಸಿಟಿವಿ ರೆಕಾರ್ಡಿಂಗ್‌ ನಿರ್ಬಂಧಿಸಿದ್ದು, ಇಡೀ ಪ್ರಕ್ರಿಯೆಯ ಆಡಿಯೊ-ವಿಡಿಯೊ ರೆಕಾರ್ಡ್‌ ಮಾಡಲಾಗಿಲ್ಲ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್‌ 105ರಲ್ಲಿ ಅದಕ್ಕೆ ಅವಕಾಶವಿದ್ದರೂ ಅದನ್ನು ಮಾಡಲಾಗಿಲ್ಲ. ನವೆಂಬರ್‌ 22ರ ಪಂಚನಾಮೆಯಲ್ಲಿ ಶೋಧದ ಸಂದರ್ಭದಲ್ಲಿ ನಡೆದಿರುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ದಾಖಲಿಸಲಾಗಿಲ್ಲ. ಸಂದರ್ಭ ಮತ್ತು ಹೇಳಿಕೆ ದಾಖಲಿಸಿಕೊಂಡ ವಿಧಾನವನ್ನೂ ಸರಿಯಾಗಿ ಉಲ್ಲೇಖಿಸಲಾಗಿಲ್ಲ” ಎಂದರು.

“ಶಾಸನಬದ್ಧ ಸಂಸ್ಥೆಗಳಿಗೆ ಈಗಾಗಲೇ ತೋರ್ಪಡಿಸಲಾಗಿರುವ ಬ್ಯಾಂಕ್‌ ಖಾತೆಯನ್ನು ಶೋಧದ ಸಂದರ್ಭದಲ್ಲಿ ಜಫ್ತಿ ಮಾಡಲಾಗದು. ₹7-₹8 ಲಕ್ಷ ರೂಪಾಯಿಗಳ ಪ್ರೆಡಿಕೇಟ್‌ ಅಪರಾಧವನ್ನು ಮುಂದು ಮಾಡಿ ₹500 ಕೋಟಿ ಜಫ್ತಿ ಮಾಡುವುದು ಅಕ್ರಮ” ಎಂದರು.

ಇ ಡಿ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಮಧು ಎನ್.ರಾವ್‌ ಅವರು “ಈಗಾಗಲೇ ಅಳವಡಿಸಿರುವ ಸಿಸಿಟಿವಿ ಅಥವಾ ಡಿವಿಆರ್‌ ಸಿಸ್ಟಂ ಅನ್ನು ಕಾನೂನುಬದ್ಧವಾಗಿ ಶೋಧಿಸುವಾಗ ಜಫ್ತಿ ಮಾಡಬಾರದು ಎಂಬುದಕ್ಕೆ ಕಾನೂನಿನ ನಿರ್ಬಂಧವಿಲ್ಲ. ಬಿಎನ್‌ಎಸ್‌ಎಸ್‌ ಅಡಿ ಆಡಿಯೊ-ವಿಡಿಯೊ ರೆಕಾರ್ಡಿಂಗ್‌ ಅಂಥ ಜಫ್ತಿಯನ್ನು ನಿಷೇಧಿಸುವುದಿಲ್ಲ” ಎಂದರು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು “ವಿನ್ಜೊ ಶೋಧ ಪ್ರಶ್ನಿಸಿರುವುದರಿಂದ ಸಿಸಿಟಿವಿ ದೃಶ್ಯಾವಳಿಯ ಅಗತ್ಯತೆ ಇದೆ. ಈ ಸಂಬಂಧ ದೃಶ್ಯಾವಳಿಯ ಪ್ರತಿಯನ್ನು ಅರ್ಜಿದಾರರಿಗೆ ನೀಡಬಹುದೇ” ಎಂಬುದರ ಕುರಿತು ಸೂಚನೆ ಪಡೆಯಲು ಇ ಡಿ ವಕೀಲರಿಗೆ ನಿರ್ದೇಶಿಸಿತು. ಅಲ್ಲದೇ, ವಿನ್ಜೊ ವಿರುದ್ಧ ದಾಖಲಾಗಿರುವ ಪ್ರಕರಣಗಳ ಪಟ್ಟಿ, ಆ ಪ್ರಕರಣಗಳಲ್ಲಿ ಹಣದ ಆರೋಪದ ವಿವರವನ್ನು ಒದಗಿಸಬೇಕು. ಇದೆಲ್ಲವೂ ಎನ್‌ಸಿಆರ್‌ಬಿಯನ್ನು ಕೇಳಿದರೆ ಸಿಕ್ಕಿಬಿಡುತ್ತದೆ ಎಂದೂ ಪೀಠವು ಇ ಡಿ ವಕೀಲರಿಗೆ ಹೇಳಿತು.