ಅಯೋಧ್ಯೆ ರಾಮ ಮಂದಿರ ಹಾಗೂ ಬಾಬರಿ ಮಸೀದಿ ವಿವಾದದ ಕುರಿತು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ಇತ್ತೀಚಿಗೆ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿರುವ ಮಧ್ಯೆಯೇ ಈ ಹೇಳಿಕೆ ಆಧರಿಸಿ 2019ರ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕ್ಯುರೇಟೀವ್ ಅರ್ಜಿ ಸಲ್ಲಿಸಬಹುದು ಎಂದು ಪ್ರೊಫೆಸರ್ ಜಿ ಮೋಹನ್ ಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.
ವಿವಾದಿತ ಸ್ಥಳ ನಿರಂತರವಾಗಿ ತಮ್ಮ ಸ್ವಾಧೀನದಲ್ಲಿತ್ತು ಎಂಬುದನ್ನು ಸಾಬೀತುಪಡಿಸಲು ಮುಸ್ಲಿಂ ಪಕ್ಷಕಾರರು ವಿಫಲವಾಗಿದ್ದು ಸಂಭವನೀಯತೆಯ ತುಲನೆಯ ಆಧಾರದಲ್ಲಿ ವಿವಾದಿತ ಸ್ಥಳವನ್ನು ಹಿಂದೂ ಪಕ್ಷಕಾರರಿಗೆ ಹಸ್ತಾಂತರಿಸುವಂತೆ 2019ರಲ್ಲಿ, ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಎಸ್ ಎ ಬೊಬ್ಡೆ, ಡಿ ವೈ ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಎಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳಿದ್ದ ಸಾಂವಿಧಾನಿಕ ಪೀಠ ನೀಡಿತ್ತು.
ಐವರು ನ್ಯಾಯಮೂರ್ತಿಗಳಲ್ಲಿ ತೀರ್ಪು ಬರೆದವರಾರು ಎಂಬುದು ಖಚಿತವಾಗದೆ ಇದ್ದರೂ ನ್ಯಾಯಮೂರ್ತಿ ಚಂದ್ರಚೂಡ್ ಅವರೇ ತೀರ್ಪಿನ ಲೇಖಕರು ಎಂದು ವ್ಯಾಪಕವಾಗಿ ನಂಬಲಾಗಿತ್ತು.
ಸ್ಥಳವನ್ನು ಹಿಂದೂ ಪಕ್ಷಕಾರರಿಗೆ ನೀಡಿದ್ದರೂ, ಬಾಬರಿ ಮಸೀದಿಯನ್ನು ದೇವಾಲಯದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಕೂಡ ತೀರ್ಪಿನಲ್ಲಿ ದಾಖಲಿಸಲಾಗಿತ್ತು.
ಇತ್ತೀಚೆಗೆ ಪತ್ರಕರ್ತ ಶ್ರೀನಿವಾಸನ್ ಜೈನ್ ಅವರಿಗೆ ನೀಡಿದ ಸಂದರ್ಶನದಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಅವರು ಬಾಬರಿ ಮಸೀದಿ ನಿರ್ಮಾಣ ಎಂಬುದೇ ಅಲ್ಲಿದ್ದ ದೇವಾಲಯವನ್ನು ಅಪವಿತ್ರಗೊಳಿಸುವ ಕೃತ್ಯ ಎಂದು ಹೇಳಿದ್ದರು. ಈ ಹೇಳಿಕೆ ತೀರ್ಪಿನಲ್ಲಿ ಹೇಳಲಾದ ವಿಷಯಗಳಿಗೆ ಹೊಂದಿಕೆಯಾಗದ ಕಾರಣ ಸಾಮಾಜಿಕ ಜಾಲತಾಣ ಸೇರಿದಂತೆ ಅನೇಕ ಕಡೆ ತೀವ್ರ ಟೀಕೆಗೆ ಗುರಿಯಾಗಿತ್ತು.
ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ನಡೆದ ಸಿ ಎಚ್ ಮೊಹಮ್ಮದ್ ಕೋಯಾ ಸ್ಮಾರಕ ರಾಷ್ಟ್ರೀಯ ವಿಚಾರ ಸಂಕಿರಣದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾನೂನು ತಜ್ಞ, ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ವಿಶ್ರಾಂತ ಉಪ ಕುಲಪತಿ ಪ್ರೊ. ಗೋಪಾಲ್ ಅವರು ಸಿಜೆಐ ಅವರ ಹೇಳಿಕೆ 2019ರ ತೀರ್ಪಿನ ವಿರುದ್ಧ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಸಾಕಷ್ಟು ಆಧಾರ ಒದಗಿಸಲಿದೆ ಎಂದು ತಿಳಿಸಿದ್ದಾರೆ.
ಪ್ರೊ. ಗೋಪಾಲ್ ಅವರ ಅಭಿಪ್ರಾಯದ ಪ್ರಮುಖ ಅಂಶಗಳು
ನ್ಯಾಯಾಲಯದ ಪರಮ ಜವಾಬ್ದಾರಿ ಎಂದರೆ ಜನರು ನಂಬಿಕೆ ಇಡುವಂತಹ ವಿಶ್ವಾಸ ತೋರುವಂತಹ ತೀರ್ಪುಗಳನ್ನು ನೀಡುವುದಾಗಿದೆ. ನ್ಯಾಯ ನೀಡುವುದಷ್ಟೇ ಅಲ್ಲ ಅದು ದೃಗ್ಗೋಚರವಾಗುವಂತಿರಬೇಕು.
ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಅಯೋಧ್ಯೆ ತೀರ್ಪು ಲೋಪಗಳಿಂದ ಕೂಡಿದೆ. ನ್ಯಾ. ಚಂದ್ರಚೂಡ್ ಅವರ ಹೇಳಿಕೆ ಆಧಾರದಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಬೇಕು. ಮುಂದೇನಾಗುತ್ತದೆ ನೋಡೋಣ. ಆ ಕೆಲಸ ಮಾಡಲು ಸಂತೋಷ ಇದೆ.
ಅಂತಹ ಪ್ರಕರಣಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಇದೊಂದು ಉತ್ತಮ ಅವಕಾಶ.
ನ್ಯಾ. ಚಂದ್ರಚೂಡ್ ಏನು ಹೇಳಿದರು ಎಂದು ಅರಿಯೋಣ ಅದನ್ನು ಆಧರಿಸಿ ಕ್ಯರೇಟಿವ್ ಅರ್ಜಿ ಸಲ್ಲಿಸಿ ಮರು ವಿಚಾರಣೆ ನಡೆಸಬೇಕೆಂದು ಬೇಡಿಕೆ ಇಡೋಣ.
ನ್ಯಾಯಮೂರ್ತಿ ಚಂದ್ರಚೂಡ್ ಅವರ ಹೇಳಿಕೆಗಳನ್ನು ಆ ಪ್ರಕರಣದಲ್ಲಿ ನಿಜವಾಗಿಯೂ ಏನಾಯಿತು ಎಂಬುದನ್ನು ಜನರಿಗೆ ಮನವರಿಕೆ ಮಾಡಲು ಒಂದು ಅವಕಾಶವಾಗಿ ಪರಿವರ್ತಿಸೋಣ.
ಇಡೀ ಪ್ರಕರಣದ ಮರುವಿಚಾರಣೆಗಾಗಿ ನ್ಯಾಯಾಲಯದ ಮನವೊಲಿಸೋಣ.
ಅಯೋಧ್ಯೆ ತೀರ್ಪು ಅನುಮಾನಗಳನ್ನು ಹುಟ್ಟುಹಾಕುವಂತಿದೆ. ವಿಶೇಷವಾಗಿ ತೀರ್ಪಿಗೆ ಸಹಿ ಮಾಡದ ಅನುಬಂಧ ಇದೆ.
ನ್ಯಾಯಾಧೀಶರು ತಮ್ಮ ರಾಜಕೀಯ ನಿಲುವುಗಳ ಬಗ್ಗೆ ಮುಕ್ತವಾಗಿರಬೇಕು. ಅದರಿಂದ ಪ್ರಭಾವಿತವಾಗುವಂತಹ ಪ್ರಕರಣಗಳಿಂದ ದೂರ ಉಳಿಯಬೇಕು. ನ್ಯಾಯಮೂರ್ತಿ ಚಂದ್ರಚೂಡ್ ಅವರು ಅಯೋಧ್ಯೆ ಪ್ರಕರಣದಿಂದ ಹಿಂದೆ ಸರಿಯಬೇಕಿತ್ತು.
ಅದೇ ರೀತಿ ಕೇರಳದ ಕಮ್ಯುನಿಸ್ಟ್ ಸರ್ಕಾರ ಹಿಂದೂ ದೇವಾಲಯಗಳನ್ನು ನಿಯಂತ್ರಣಕ್ಕೆ ಪಡೆದುಕೊಂಡಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಹೇಳಿರುವುದು, ಶ್ರೀ ಪದ್ಮನಾಭಸ್ವಾಮಿ ದೇವಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 2020ರಲ್ಲಿ ನೀಡಿದ್ದ ತೀರ್ಪಿನ ವಿರುದ್ಧ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಆಧಾರವಾಗಬಹುದು.
ನ್ಯಾಯಾಲಯದ ಹೊರಗೆ ನೀಡಿದ ಇಂತಹ ಹೇಳಿಕೆಗಳು ತೀರ್ಪಿನ ನ್ಯಾಯಸಮ್ಮತತೆಯನ್ನು ಹಾಳುಮಾಡಬಹುದು.