ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ಹೈಕೋರ್ಟ್‌ಗಳಲ್ಲಿ ರಿಟ್ ಅರ್ಜಿ ಸಲ್ಲಿಸಲು ಜಾರಿ ನಿರ್ದೇಶನಾಲಯ ಕಾನೂನುಬದ್ಧ ಸಂಸ್ಥೆಯೇ ಎಂಬುದನ್ನು ಸುಪ್ರೀಂ ಕೋರ್ಟ್ ಶೀಘ್ರದಲ್ಲಿಯೇ ಪರಿಶೀಲಿಸಲಿದೆ.
ವಿಧಿ 226ರ ಅಡಿಯಲ್ಲಿ ರಿಟ್ ಅರ್ಜಿ ಸಲ್ಲಿಸಲು ಇ ಡಿಗೆ ಹಕ್ಕು ಇದೆ ಎಂದು ಕೇರಳ ಹೈಕೋರ್ಟ್ 2025ರ ಸೆಪ್ಟೆಂಬರ್ 26ರಂದು ನೀಡಿದ್ದ ತೀರ್ಪು ಪ್ರಶ್ನಿಸಿ ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಸಲ್ಲಿಸಿದ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ವಿಭಾಗೀಯ ಪೀಠ ಇ ಡಿಗೆ ನೋಟಿಸ್ ಜಾರಿ ಮಾಡಿತು.
ಕೇರಳ ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ತಮಿಳುನಾಡು ಸರ್ಕಾರದ ಪರವಾಗಿ ಹಿರಿಯ ವಕೀಲರಾದ ಪಿ. ವಿಲ್ಸನ್ ಮತ್ತು ವಿಕ್ರಮ್ ಚೌಧರಿ ಹಾಜರಾದರು.
ಯುಎಇ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತಿತರ ರಾಜಕೀಯ ನಾಯಕರನ್ನು ಸಿಲುಕಿಸಲು ಇ ಡಿ ಮತ್ತು ಸುಂಕ ಇಲಾಖೆ ಸೇರಿದಂತೆ ಕೇಂದ್ರ ಸಂಸ್ಥೆಗಳು ನಡೆಸಿದ ಪ್ರಯತ್ನಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಮೋಹನನ್ ಅವರ ನೇತೃತ್ವದ ಆಯೋಗ ರಚಿಸಿ ಅಧಿಸೂಚನೆ ಹೋರಟಿಸಿತ್ತು. ಸರ್ಕಾರದ ಈ ಅಧಿಸೂಚನೆಯನ್ನು ರದ್ದುಪಡಿಸಲು ಕೋರಿ ಇ ಡಿ ಕೇರಳ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ರೀತಿಯ ಕ್ರಮವು ಒಕ್ಕೂಟ ತತ್ವದ ವಿರುದ್ಧ ಎಂದು ವಾದಿಸಿತ್ತು.
ಇ ಡಿ ವಾದವನ್ನು ಏಕಸದಸ್ಯ ಪೀಠ ಎತ್ತಿ ಹಿಡಿದಿತ್ತು. ಇದರ ವಿರುದ್ಧ ಕೇರಳ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಇ ಡಿಗೆ ಅಧಿಸೂಚನೆಯನ್ನು ಪ್ರಶ್ನಿಸುವ ಕಾನೂನು ರೀತ್ಯಾ ಹಕ್ಕಿಲ್ಲ. ಅಧಿಸೂಚನೆಯ ವಿರುದ್ಧ ಒಂದೊಮ್ಮೆ ತಕರಾರು ಇದ್ದರೆ ಅದನ್ನು ಕೇಂದ್ರ ಸರ್ಕಾರವು ಸಂವಿಧಾನದ 131ನೇ ವಿಧಿಯಡಿ (ಸುಪ್ರೀಂ ಕೋರ್ಟ್‌ನ ನ್ಯಾಯಿಕ ವ್ಯಾಪ್ತಿಗೆ ಸಂಬಂಧಪಟ್ಟಿದ್ದು) ಪ್ರಶ್ನಿಸಬೇಕು ಎಂದಿತ್ತು.
ಇದಕ್ಕೆ ಪ್ರತಿಯಾಗಿ ಇ ಡಿಯು ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಹಾಗೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಪಿಎಂಎಲ್‌ಎ) ಈ ಎರಡೂ ಕೇಂದ್ರ ಸರ್ಕಾರದ ಕಾಯಿದೆಗಳಾಗಿದ್ದು, ಕೇಂದ್ರ ಸರ್ಕಾರದ ಅಧಿಕಾರದ ವ್ಯಾಪ್ತಿಗೆ ಮಾತ್ರವೇ ಬರುವಂತಹದೇ ಹೊರತು ರಾಜ್ಯ ಸರ್ಕಾರದ ವ್ಯಾಪ್ತಿಗಲ್ಲ ಎಂದು ವಾದಿಸಿತ್ತು.
ವಾದಗಳನ್ನು ಆಲಿಸಿದ್ದ ಕೇರಳ ಹೈಕೋರ್ಟ್ ವಿಭಾಗೀಯ ಪೀಠವು ಇ ಡಿಗೆ ರಿಟ್ ಅರ್ಜಿಯನ್ನು ನಿರ್ವಹಿಸುವ ಕಾನೂನು ರೀತ್ಯಾ ಹಕ್ಕಿದೆ ಎಂದು ಹೇಳಿ, ಏಕಸದಸ್ಯ ಪೀಠವು ನೀಡಿದ್ದ ಮಧ್ಯಂತರ ಆದೇಶವನ್ನು ಎತ್ತಿಹಿಡಿದಿತ್ತು. ಇದರ ವಿರುದ್ಧ ಕೇರಳ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಮತ್ತೊಂದೆಡೆ ತಮಿಳುನಾಡು ಸರ್ಕಾರವು ಸಹ ಇ ಡಿಯ ಕಾನೂನು ರೀತ್ಯಾ ಹಕ್ಕಿನ ವ್ಯಾಪ್ತಿಯ ಬಗ್ಗೆ ಕೇರಳ ಹೈಕೋರ್ಟ್ ನೀಡಿರುವ ತೀರ್ಪು ತನ್ನ ರಾಜ್ಯದಲ್ಲಿನ ಗಣಿಗಾರಿಕೆ ಕುರಿತ ಪ್ರಕರಣದ ಮೇಲೆ ಪರಿಣಾಮ ಬೀರಲಿದೆ ಎಂದು ಆಕ್ಷೇಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ತಮಿಳುನಾಡು ಸಲ್ಲಿಸಿರುವ ಅರ್ಜಿಯ ಪ್ರಕಾರ ಕೇಂದ್ರ ಸರ್ಕಾರ ಅಥವಾ ಅದರ ಯಾವುದೇ ಸಂಸ್ಥೆ ಮತ್ತು ರಾಜ್ಯ ಸರ್ಕಾರದ ನಡುವಿನ ವ್ಯಾಜ್ಯವನ್ನು ಸಂವಿಧಾನದ ವಿಧಿ 131ರ ಅಡಿಯಲ್ಲಿ ಸುಪ್ರೀಂ ಕೋರ್ಟ್ ಮಾತ್ರವೇ ಇತ್ಯರ್ಥಪಡಿಸಬೇಕು ಎಂದು ಆಕ್ಷೇಪಿಸಿದೆ. ಈ ವಿಧಿಯು, ಭಾರತ ಸರ್ಕಾರ ಮತ್ತು ಒಂದು ಅಥವಾ ಹೆಚ್ಚಿನ ರಾಜ್ಯ ಸರ್ಕಾರಗಳ ನಡುವಿನ ಯಾವುದೇ ವ್ಯಾಜ್ಯವನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್‌ಗೆ ಮಾತ್ರವೇ ಏಕೈಕ ಮತ್ತು ವಿಶೇಷ ಅಧಿಕಾರ ನೀಡುತ್ತದೆ.
ಜಾರಿ ನಿರ್ದೇಶನಾಲಯ (ಇ ಡಿ) ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಇಲಾಖೆ ಆಗಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್‌ಎ) ಸೆಕ್ಷನ್ 49ರ ಅಡಿಯಲ್ಲಿ ಆ ಕಾಯಿದೆಯ ಸೆಕ್ಷನ್‌ಗಳನ್ನು ಜಾರಿಗೆ ತರುವ ಅಧಿಕಾರ ಪಡೆದಿದೆ. ಆದರೆ ಸಿಬಿಐನ ರೀತಿ ಜಾರಿ ನಿರ್ದೇಶನಾಲಯ ಪ್ರತ್ಯೇಕ ಕಾನೂನಿನ ಮೂಲಕ ರಚಿತವಾದ ಸಂಸ್ಥೆಯಲ್ಲ. ಅದು ಖುದ್ದು ಭಾರತ ಸರ್ಕಾರದ ಅಂಗ ಎಂದು ತಮಿಳುನಾಡು ಸರ್ಕಾರದ ಅರ್ಜಿ ಹೇಳಿದೆ.
ಇದಕ್ಕೆ ಪೂರಕವಾಗಿ, ಸಂವಿಧಾನದ 32ನೇ ವಿಧಿಯಡಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸುವಂತೆ ಇ ಡಿ ಸಲ್ಲಿಸಿರುವ ಮತ್ತೊಂದು ಅರ್ಜಿಯೂ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. 32ನೇ ವಿಧಿಮೂಲಭೂತ ಹಕ್ಕುಗಳ ಉಲ್ಲಂಘನೆಯ ವಿರುದ್ಧ ನಾಗರಿಕರಿಗೆ ಮಾತ್ರ ಲಭ್ಯವಿರುವ ಪರಿಹಾರವಾಗಿದ್ದು, ಸರ್ಕಾರಿ ಸಂಸ್ಥೆಗಳು ಅದನ್ನು ಬಳಸಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಆಕ್ಷೇಪಿಸಿತ್ತು. ಆದರೂ, ಸುಪ್ರೀಂ ಕೋರ್ಟ್ ಆ ಅರ್ಜಿಯ ಕುರಿತು ಮಮತಾ ಬ್ಯಾನರ್ಜಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು.