ಇಎಸ್ಐ ಕಾಯಿದೆ 1948ರ ಅಡಿಯಲ್ಲಿ ಸೌಲಭ್ಯ ಪಡೆಯಲು ಅರ್ಹನಾಗಿರುವ ಮೋಟಾರು ವಾಹನದಿಂದ ಅಪಘಾತಕ್ಕೀಡಾದ ಉದ್ಯೋಗಿಯು 1988 ರ ಮೋಟಾರು ವಾಹನಗಳ (MV) ಕಾಯಿದೆ ಅಡಿಯಲ್ಲಿ ಕೂಡ ಪರಿಹಾರ ಪಡೆದುಕೊಳ್ಳಬಹುದೇ ಎಂಬ ಪ್ರಶ್ನೆ ಈಗ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ [ರಾಜ್‌ಕುಮಾರ್ ಅಗರ್ವಾಲ್ ವರ್ಸಸ್ ವೆಹಿಕಲ್ ಟಾಟಾ ವೆಂಚರ್ ನಂ. ಯುಪಿ 70-ಬಿಎಂ-1600 ಕಮರ್ಷಿಯಲ್ ಆಟೋ ಸೇಲ್ಸ್ ಪ್ರೈವೇಟ್ ಲಿಮಿಟೆಡ್ ಅದರ ನಿರ್ದೇಶಕ ಸಂಸ್ಕರ್ ಗುಪ್ತಾ ಮತ್ತು ಇತರರ ಮೂಲಕ].
ಇಎಸ್‌ಐ ಕಾಯಿದೆ ಅಡಿ ವಿಮೆ ಸೌಲಭ್ಯ ಪಡೆದಿರುವ ಉದ್ಯೋಗಿಗೆ ಪಾವತಿಸಿದ ವಿಮಾ ಪರಿಹಾರವನ್ನು ಮೋಟಾರು ವಾಹನ ಅಪಾಘಾತದ ಸಂದರ್ಭದಲ್ಲಿ ನೀಡುವ ವಿಮಾ ಪರಿಹಾರದೊಂದಿಗೆ ಹೋಲಿಸಿ 'ಸಮಾನರೂಪದ ಸವಲತ್ತು' ಎನ್ನಬಹುದೇ ಎನ್ನುವುದು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಸುಧಾಂಶು ಧುಲಿಯಾ ಅವರಿದ್ದ ವಿಭಾಗೀಯ ಪೀಠದ ಮುಂದಿರುವ ಪ್ರಶ್ನೆಯಾಗಿತ್ತು.
ಪ್ರಕರಣದ ಬಗ್ಗೆ ವ್ಯತಿರಿಕ್ತ ಅಭಿಪ್ರಾಯ ಇರುವುದರಿಂದ ಅದನ್ನು ವಿಸೃತ ಪೀಠಕ್ಕೆ ವರ್ಗಾಯಿಸುತ್ತಿರುವುದಾಗಿ ಪೀಠ ತಿಳಿಸಿತು.
ಮೋಟಾರು ಅಪಘಾತದ ಪ್ರಕರಣದಲ್ಲಿ ಸಂತ್ರಸ್ತ ಅರ್ಜಿದಾರರಿಗೆ ನೀಡಲಾಗಿದ್ದ ಪರಿಹಾರವನ್ನು ಪ್ರಶ್ನಿಸಿದ್ದ ಮೇಲ್ಮನವಿ ಆಲಿಸಿದ್ದ ಅಲಾಹಾಬಾದ್ ಹೈಕೋರ್ಟ್ ಸಂತ್ರಸ್ತರಿಗೆ ನೀಡಿದ್ದ ಪರಿಹಾರವನ್ನು ರದ್ದುಗೊಳಿಸಿತ್ತು. ಇಎಸ್‌ಐ ಕಾಯಿದೆಯ ಸೆಕ್ಷನ್ 61 ಸಹವಾಚನ ಸೆಕ್ಷನ್ 53ರ ಪ್ರಕಾರ ವಿಮಾ ಸೌಲಭ್ಯ ಪಡೆದ ಉದ್ಯೋಗಿ ಮೋಟಾರು ಅಪಘಾತ ಪರಿಹಾರ ಪಡೆಯುವಂತಿಲ್ಲ ಎಂದು ಹೈಕೋರ್ಟ್ ಹೇಳಿತ್ತು.
ಇಎಸ್‌ಐ ಕಾಯಿದೆಯಡಿ ವಿಮೆ ಮಾಡಿಸಿಕೊಂಡ ವ್ಯಕ್ತಿ ಅಥವಾ ಅವನ ಅವಲಂಬಿತರು ತಮ್ಮ ಉದ್ಯೋಗದಾತರಿಂದ ಅಥವಾ ಯಾವುದೇ ಇತರ ವ್ಯಕ್ತಿಯಿಂದ, ನೌಕರರ ಪರಿಹಾರ ಕಾಯಿದೆ- 1923ರ ಅಡಿಯಲ್ಲಿ ಅಥವಾ ಆಗ ಅಸ್ತಿತ್ವದಲ್ಲಿರುವ ಇನ್ನಾವುದೇ ಕಾಯಿದೆಯಡಿ ಯಾವುದೇ ಪರಿಹಾರ ಅಥವಾ ಹಾನಿ ಸೌಲಭ್ಯಗಳನ್ನು ಪಡೆಯಲು ಅಥವಾ ವಸೂಲಿ ಮಾಡಲು ಅರ್ಹರಾಗಿರುವುದಿಲ್ಲ ಎಂದು ಇಎಸ್‌ಐ ಕಾಯಿದೆಯ ಸೆಕ್ಷನ್ 53 ಹೇಳುತ್ತದೆ.
ಇಎಸ್‌ಐ ಕಾಯಿದೆಯಡಿ ಒದಗಿಸಲಾದ ಯಾವುದೇ ಪ್ರಯೋಜನಗಳಿಗೆ ಒಬ್ಬ ವ್ಯಕ್ತಿ ಅರ್ಹನಾಗಿದ್ದರೆ, ಉಳಿದ ಕಾಯಿದೆಗಳ ಅಡಿಯಲ್ಲಿ ಅನುಮತಿಸಬಹುದಾದ ಯಾವುದೇ ರೀತಿಯ ಸೌಲಭ್ಯ ಪಡೆಯಲು ಅವನು ಅರ್ಹನಾಗಿರುವುದಿಲ್ಲ ಎಂದು ಇಎಸ್‌ಐ ಕಾಯಿದೆಯ ಸೆಕ್ಷನ್ 61 ತಿಳಿಸುತ್ತದೆ.
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿಯಲ್ಲಿ ಅರ್ಜಿದಾರರು ಮೋಟಾರು ವಾಹನ ಕಾಯಿದೆಯಡಿಯಲ್ಲಿ ವಿಮಾದಾರ ಉದ್ಯೋಗಿ ಪರಿಹಾರ ಪಡೆದಾಗ ಅದನ್ನು ಇಎಸ್‌ಐ ಕಾಯಿದೆಯ ಸೆಕ್ಷನ್ 53 ಅಡಿ ನಿರ್ಬಂಧವೆಂದು ಪರಿಗಣಿಸಬಾರದು ಎಂದು ವಾದಿಸಿದ್ದಾರೆ. ಇಎಸ್‌ಐ ಕಾಯಿದೆಯ ಸೆಕ್ಷನ್ 53 ಮತ್ತು 61 'ಸಮಾನರೂಪದ ಸವಲತ್ತನ್ನು' ಕಾರ್ಮಿಕರು ತೆಗೆದುಕೊಂಡರೆ ಮಾತ್ರ ಅನ್ವಯವಾಗುತ್ತದೆ. ತಾವು ಎರಡೂ ಕಾಯಿದೆಗಳಡಿ ಒಂದೇ ರೀತಿಯ ಸೌಲಭ್ಯ ಪಡೆದಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.