Supreme Court and Kerala 
ಸುದ್ದಿಗಳು

'ರಾಜತಾಂತ್ರಿಕ ವಿನಾಯಿತಿಯುಳ್ಳ ಸರಕನ್ನು ಕೇಂದ್ರ ಶೋಧಿಸಬಹುದೇ?' ಕೇರಳ ಚಿನ್ನ ಕಳ್ಳಸಾಗಣೆ ಕುರಿತು ಸುಪ್ರೀಂ ಪ್ರಶ್ನೆ

ಪ್ರಕರಣದ ವಿಚಾರಣೆಯನ್ನು ಕೇರಳದಿಂದ ಕರ್ನಾಟಕಕ್ಕೆ ವರ್ಗಾಯಿಸುವಂತೆ ಕೋರಿ ಜಾರಿ ನಿರ್ದೇಶನಾಲಯ (ಇಡಿ) ಅರ್ಜಿ ಸಲ್ಲಿಸಿತ್ತು.

Bar & Bench

ರಾಜತಾಂತ್ರಿಕ ವಿನಾಯಿತಿ ಇರುವ ರಾಜತಾಂತ್ರಿಕ ಸರಕುಗಳನ್ನು ಪರಿಶೀಲಿಸಲು ಹಾಗೂ ಶೋಧ ನಡೆಸಲು ಕೇಂದ್ರ ಸರ್ಕಾರಕ್ಕೆ ಕಾನೂನುಬದ್ಧ ಅಧಿಕಾರ ಇದೆಯೇ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಶ್ನಿಸಿದೆ [ಜಾರಿ ನಿರ್ದೇಶನಾಲಯ ಮತ್ತು ಸರಿತ್ ಪಿಎಸ್ ಇನ್ನಿತರರ ನಡುವಣ ಪ್ರಕರಣ].

ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸ್ವಪ್ನಾ ಸುರೇಶ್ ಪ್ರಕರಣದ ವಿಚಾರಣೆಯನ್ನು ಕೇರಳದಿಂದ ಕರ್ನಾಟಕಕ್ಕೆ ವರ್ಗಾಯಿಸಲು ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಈ ಪ್ರಶ್ನೆ ಎತ್ತಿದೆ.

ತಿರುವನಂತಪುರಂನಲ್ಲಿರುವ ಅರಬ್‌ ಸಂಯುಕ್ತ ಸಂಸ್ಥಾನ ಕಾನ್ಸುಲೇಟ್ ಜನರಲ್ ಕಚೇರಿಗೆ ಸೇರಿದ ರಾಜತಾಂತ್ರಿಕ ಸರಕುಗಳ ನಡುವೆ ಇದ್ದ 30 ಕೆಜಿಯಷ್ಟು ಕಳ್ಳಸಾಗಣೆ ಮಾಡಿದ್ದೆನ್ನಲಾದ ಚಿನ್ನ ವಶಪಡಿಸಿಕೊಳ್ಳಲಾಗಿತ್ತು. ಪ್ರಕರಣ ರಾಜಕೀಯವಾಗಿಯೂ ಸಾಕಷ್ಟು ಸದ್ದು ಮಾಡಿತ್ತು.

ಒಂದೊಮ್ಮೆ ಭಾರತ ಸರ್ಕಾರ ರಾಜತಾಂತ್ರಿಕ ಸರಕಗಳ ಪರಿಶೋಧನೆ ನಡೆಸುತ್ತದೆ ಎಂದರೆ ಅದಕ್ಕಿರುವ ಪ್ರಕ್ರಿಯೆ ಏನು? ಹಾಗೆ ಮಾಡಲು ಸಾಧ್ಯವೇ ? ರಾಜತಾಂತ್ರಿಕ ಸರಕುಗಳಿಗೆ ವಿನಾಯಿತಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಹಚ್ಚುವಂತೆ ಸುಪ್ರೀಂ ಕೋರ್ಟ್‌ ಇ ಡಿಯನ್ನು ಮೌಖಿಕವಾಗಿ ಕೇಳಿದೆ.

ಇ ಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ ವಿ ರಾಜು ಅದನ್ನು ತಿಳಿಯುವುದಾಗಿ ಹೇಳಿದರು. ಮೇಲ್ನೋಟಕ್ಕೆ ಸರಕನ್ನು ಅಪರಾಧಕ್ಕೆ ಬಳಸಿದ್ದರೆ ಅದನ್ನು ವಶಪಡಿಸಿಕೊಳ್ಳಲು ಅವಕಾಶವಿದ್ದು ಆಗ ಅದು ರಾಜತಾಂತ್ರಿಕ ಸರಕಾಗಿ ಉಳಿಯುವುದಿಲ್ಲ ಎಂದರು.

ಅಕ್ರಮ ಹಣ ವರ್ಗಾವಣೆ, ಅಕ್ರಮ ಹಣಕಾಸು ವಹಿವಾಟು, ರಾಜತಾಂತ್ರಿಕ ಸೋಗಿನಲ್ಲಿ ಭಾರೀ ಚಿನ್ನ ಕಳ್ಳಸಾಗಣೆ ಆರೋಪಗಳಿಗೆ ಸಂಬಂಧಿಸಿದಂತೆ ಶಂಕಿತರನ್ನು ಎನ್‌ಐಎ, ಇ ಡಿ ಸೇರಿದಂತರೆ ವಿವಿಧ ತನಿಖಾ ಸಂಸ್ಥೆಗಳು ಬಂಧಿಸಿ ವಿಚಾರಣೆ ನಡೆಸಿದ್ದವು.

ಯುಎಪಿಎ ಕಾಯಿದೆಯಡಿ ಸರಿತ್‌ ಪಿ ಎಸ್‌ ಮತ್ತು ಸ್ವಪ್ನಾ ಸುರೇಶ್‌ ಸೇರಿದಂತೆ 20 ಆರೋಪಿಗಳ ವಿರುದ್ಧ ಎನ್‌ಐಎ ಆರೋಪಪಟ್ಟಿ ಸಲ್ಲಿಸಿತ್ತು. ಪಿಎಂಎಲ್‌ಎ ಕಾಯಿದೆಯಡಿಯೂ ಎನ್‌ಐಎ ಮತ್ತು ಕಸ್ಟಮ್ಸ್‌ ಇಲಾಖೆ ಆರೋಪ ಮಾಡಿದ್ದವು.

ಈ ಪ್ರಕರಣವನ್ನು ಪ್ರಸ್ತುತ ಎರ್ನಾಕುಲಂನ ಪಿಎಂಎಲ್‌ಎ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದು ಡಿಸೆಂಬರ್ 2020ರಲ್ಲಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ್ ಅವರನ್ನು ನಾಲ್ಕನೇ ಆರೋಪಿಯನ್ನಾಗಿ ಹೆಸರಿಸಲಾಗಿತ್ತು. ಆನಂತರ ಪ್ರಕರಣ ಗಂಭೀರ ರಾಜಕೀಯ ತಿರುವು ಪಡೆದಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇ ಡಿ ಪ್ರಕರಣದ ವಿಚಾರಣೆಯನ್ನು ಕೇರಳದಿಂದ ಕರ್ನಾಟಕಕ್ಕೆ ವರ್ಗಾಯಿಸಲು ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಎಂ ಶಿವಶಂಕರ್ ಭಾಗಿಯಾಗಿರುವುದು ಬೆಳಕಿಗೆ ಬಂದ ನಂತರ ರಾಜ್ಯ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ತಿರುಗಿಬಿದ್ದಿದೆ ಎಂದು ಇ ಡಿ ಹೇಳಿಕೊಂಡಿತ್ತು . ಉನ್ನತ ಅಧಿಕಾರಿಗಳು ಹಸ್ತಕ್ಷೇಪ ಮಾಡುವ ಸಾಧ್ಯತೆಗಳಿರುವುದರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಅದು ಪ್ರತಿಪಾದಿಸಿತ್ತು. ಈ ಸಂಬಂಧ ಅಕ್ಟೋಬರ್ 2022 ರಲ್ಲಿ ಸುಪ್ರೀಂ ಕೋರ್ಟ್ ಕೇರಳ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು .