ಕೇಂದ್ರ ಸರ್ಕಾರವು ಬಳಕೆದಾರರ ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸುವಂತೆ ಆದೇಶ ಮಾಡಿರುವುದನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸೋಮವಾರ ನಡೆಸಿದ ಕರ್ನಾಟಕ ಹೈಕೋರ್ಟ್ “ಅಂತಾರಾಷ್ಟ್ರೀಯ ಸಂಸ್ಥೆಯು ರಿಟ್ ನ್ಯಾಯಾಲಯದ ಕದತಟ್ಟಬಹುದೇ” ಎಂದು ಟ್ವಿಟರ್ ಅನ್ನು ಪ್ರಶ್ನಿಸಿತು.
ಸಂವಿಧಾನದ 226ನೇ ವಿಧಿಯು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಗೆ ಮಾತ್ರವೇ ಸೀಮಿತವಾಗಿಲ್ಲ. ಹೈಕೋರ್ಟ್ ಮೆಟ್ಟಿಲೇರುವುದಕ್ಕೆ ಟ್ವಿಟರ್‌ಗೆ ಯಾವುದೇ ನಿರ್ಬಂಧವಿಲ್ಲ ಎಂದು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠಕ್ಕೆ ಟ್ವಿಟರ್ ಪರ ವಕೀಲ ಮನು ಕುಲಕರ್ಣಿ ವಿವರಿಸಿದರು.
“ನಾನು (ಟ್ವಿಟರ್) ಪ್ರಜೆಯಲ್ಲ. ಸಂವಿಧಾನದ ಅಡಿ ದೊರೆತಿರುವ 14ನೇ ವಿಧಿಯ ಅಡಿ ಪರಿಹಾರ ಕೋರಬಹುದು. ನಾನು 19ನೇ ವಿಧಿಯಡಿ ಹಕ್ಕುಸಾಧನೆ ಕೋರುತ್ತಿಲ್ಲ. 226ನೇ ವಿಧಿಯಡಿ ನ್ಯಾಯಾಲಯದ ಮೆಟ್ಟಿಲೇರಲು ನಿರ್ಬಂಧವಿಲ್ಲ” ಎಂದರು.
“ಸಿವಿಲ್ ದಾವೆ ಹೂಡಬಹುದಾಗಿತ್ತು. ಆದರೆ, ಪರಿಣಾಮ ಒಂದೇ ರೀತಿ ಇರುವುದಿಲ್ಲ. ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ಸೆಕ್ಷನ್ 69ಎ ಅನ್ನು ನ್ಯಾಯಾಲಯವು ರದ್ದುಪಡಿಸಿಲ್ಲ. ಏಕೆಂದರೆ ರಿಟ್‌ನಲ್ಲಿ ಪರಿಹಾರವಿದೆ” ಎಂದರು.
“ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸುವ ಆದೇಶಕ್ಕೆ ಸರ್ಕಾರ ಕಾರಣಗಳನ್ನು ನೀಡಿದರೆ ನಿರ್ದಿಷ್ಟ ವ್ಯಕ್ತಿಗಳಿಗೆ ಹೈಕೋರ್ಟ್ ಮುಂದೆ ಹೇಗೆ ಅದನ್ನು ಪ್ರಶ್ನಿಸಬೇಕು ಎಂಬುದರ ಅರಿವು ದೊರೆಯಲಿದೆ. ಸರ್ಕಾರದ ಸ್ವೇಚ್ಛೆಯ ನಿರ್ಧಾರವು ಅಡ್ಡಿಯಾಗಿ ಕೆಲಸ ಮಾಡಲಿದೆ” ಎಂದರು.
ವಿದೇಶಗಳಲ್ಲಿ ಕಾರಣಗಳನ್ನು ನೀಡಿರುವುದನ್ನು ನ್ಯಾಯಾಲಯಗಳು ಹೇಗೆ ಪರಿಗಣಿಸಿವೆ ಎಂಬುದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಶಾಸ್ತ್ರದ ಉದಾಹರಣೆಗಳನ್ನು ಸಲ್ಲಿಸುವಂತೆ ಪಕ್ಷಕಾರರಿಗೆ ಸೂಚಿಸಿ, ವಿಚಾರಣೆಯನ್ನು ಪೀಠವು ಬುಧವಾರಕ್ಕೆ ಮುಂದೂಡಿದೆ.