ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯಿದೆ- 2005ರ ಅಡಿಯಲ್ಲಿ ಸೊಸೆಯ ವಿರುದ್ಧ ಅತ್ತೆ ಕೌಟುಂಬಿಕ ಹಿಂಸಾಚಾರ ಪ್ರಕರಣ ದಾಖಲಿಸಬಹುದು ಎಂದು ಅಲಾಹಾಬಾದ್ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ [ಶ್ರೀಮತಿ ಗರಿಮಾ ಮತ್ತಿತರರು ಹಾಗೂ ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ] .
ಅತ್ತೆ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಸೊಸೆ ಮತ್ತು ಅವರ ಕುಟುಂಬ ಸದಸ್ಯರಿಗೆ ಸಮನ್ಸ್ ಜಾರಿ ಮಾಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿ ಅಲೋಕ್ ಮಾಥುರ್ ಎತ್ತಿಹಿಡಿದಿದ್ದಾರೆ.
ಕಾಯಿದೆಯ ಸೆಕ್ಷನ್ 12ನ್ನು ಪರಿಶೀಲಿಸಿದ ನ್ಯಾಯಾಲಯ ಈ ಸೆಕ್ಷನ್ ಅಡಿಯಲ್ಲಿ ಮನೆಯಲ್ಲಿನ ಕೌಟುಂಬಿಕ ಸಂಬಂಧದಲ್ಲಿರುವ ಯಾವುದೇ ನೊಂದ ಮಹಿಳೆ ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದು ಎಂದು ಅಭಿಪ್ರಾಯಪಟ್ಟಿತು. ಜೊತೆಗೆ ಅತ್ತೆ ಅಂತಹ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂಬ ವಾದವನ್ನು ತಿರಸ್ಕರಿಸಿತು.
"ಸೊಸೆ ಅಥವಾ ಕುಟುಂಬದ ಯಾವುದೇ ಸದಸ್ಯರು ಅತ್ತೆಗೆ ಕಿರುಕುಳ ಅಥವಾ ದೈಹಿಕ ಇಲ್ಲವೇ ಮಾನಸಿಕ ಹಿಂಸೆ ನೀಡಿದರೆ, ಖಂಡಿತವಾಗಿಯೂ ಅವರನ್ನು ಸಂತ್ರಸ್ತ ವ್ಯಕ್ತಿಯ ವ್ಯಾಪ್ತಿಗೆ ತರಬಹುದು ಮತ್ತು 2005 ರ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯಿದೆಯ ಸೆಕ್ಷನ್ 12ರ ಅಡಿಯಲ್ಲಿ ಅರ್ಜಿಯನ್ನು ನಿರ್ವಹಿಸುವ ಹಕ್ಕು ಅವರಿಗಿದೆ " ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
2005ರಲ್ಲಿ ಜಾರಿಗೆ ತಂದ ಕಾಯಿದೆ ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾದ ಮಹಿಳೆಯರಿಗೆ ಪ್ರಯೋಜನಕಾರಿ ಕಾನೂನು ಆಗಿದ್ದು, ಕಾನೂನಿನ ಅನ್ವಯಿಕತೆಯನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಬದಲಿಗೆ ಅದನ್ನು ಉದಾರವಾಗಿ ಅರ್ಥೈಸಿಕೊಳ್ಳಬೇಕು ಎಂದು ಅದು ಹೇಳಿದೆ.
ಕಾಯಿದೆಯ ವಿವಿಧ ಸೆಕ್ಷನ್‌ಗಳನ್ನು ಒಗ್ಗೂಡಿಸಿ ಸಹವಾಚನ ಮಾಡಿದಾಗ ಸಂತ್ರಸ್ತ ವ್ಯಕ್ತಿ ಯಾವುದೇ ಕುಟುಂಬದ ಮಹಿಳೆ ಎಂಬುದು ತಿಳಿಯುತ್ತದೆ. ಪ್ರಸ್ತುತ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಅತ್ತೆಯಾಗಿದ್ದು. ಸೊಸೆಯೊಟ್ಟಿಗೆ ವಾಸಿಸುತ್ತಿದ್ದಾರೆ. ಆದ್ದರಿಂದ ಕಾಯಿದೆಯ ಸೆಕ್ಷನ್ 12ರ ಅಡಿಯಲ್ಲಿ ಅರ್ಜಿ ಸಲ್ಲಿಸುವ ಹಕ್ಕು ಅವರಿಗೆ ಇದೆ ಎಂದು ನ್ಯಾಯಾಲಯ ನುಡಿಯಿತು. ಅಂತೆಯೇ ವಿಚಾರಣಾ ನ್ಯಾಯಾಲಯ ಹೊರಡಿಸಿದ ಸಮನ್ಸ್ ಪ್ರಶ್ನಿಸಿದ್ದ ಅರ್ಜಿಯನ್ನು ಅದು ತಿರಸ್ಕರಿಸಿತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]