ಪೋಲೀಸರು ವ್ಯಕ್ತಿಗಳ ವಿಚಾರಣೆ ನಡೆಸುವಾಗ ವಕೀಲರ ಹಾಜರಾತಿಯನ್ನು ಕಡ್ಡಾಯ ಹಕ್ಕಾಗಿ ಮಾಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ [ ಶಫಿ ಮಾಥರ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಕಸ್ಟಡಿ ಮತ್ತು ಕಸ್ಟಡಿ ಪೂರ್ವ ವಿಚಾರಣೆಯ ವೇಳೆ ವಕೀಲರ ಉಪಸ್ಥಿತಿಯ ಹಕ್ಕನ್ನು ಗುರುತಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ , ವಿಚಾರಣೆಯ ಸಮಯದಲ್ಲಿ ವಕೀಲರ ಉಪಸ್ಥಿತಿಗೆ ಅನುಮತಿ ನೀಡದಿದ್ದರೆ ಪೊಲೀಸರು ಕೃತ್ಯದ ಬಗ್ಗೆ ಆರೋಪಿಗಳಿಂದ ಬಲವಂತದಿಂದ ತಪ್ಪೊಪ್ಪಿಗೆ ಪಡೆಯುವ ಸಾಧ್ಯತೆ ಇದ್ದು ಹೀಗೆ ಮಾಡುವುದು ತನ್ನ ವಿರುದ್ಧ ತಾನೇ ಸಾಕ್ಷಿ ನುಡಿಯದೆ ಇರುವ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸುತ್ತದೆ ಎಂದರು.
ಪಿಐಎಲ್‌ನ ಪ್ರಮುಖಾಂಶಗಳು
ಈಗ ಇರುವ ಕಾನೂನಿನಂತೆ ವಕೀಲರನ್ನು ಭೇಟಿಯಾಗುವ ಹಕ್ಕು ಮಾತ್ರ ಇದ್ದು ವಿಚಾರಣೆಯ ವೇಳೆ ವಕೀಲರ ನಿರಂತರ ಉಪಸ್ಥಿತಿ ಬಗ್ಗೆ ಅದು ಹೇಳುವುದಿಲ್ಲ. ಈ ಕಾನೂನಿನಿಂದಾಗಿ ವಕೀಲರು ಹೆಸರಿಗೆ ಮಾತ್ರ ಉಪಸ್ಥಿತರಿರುವಂತಾಗಿದೆ.
ಈ ಕೊರತೆಯಿಂದಾಗಿ ಸಂವಿಧಾನದ 20(3)ನೇ ವಿಧಿ (ತನ್ನ ವಿರುದ್ಧ ತಾನೇ ಸಾಕ್ಷಿಯಾಗಲು ಒತ್ತಡಕ್ಕೊಳಗಾಗದೆ ಇರುವ ಹಕ್ಕು) 21ನೇ ವಿಧಿ (ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯ) ಹಾಗೂ 22(1)ನೇ ವಿಧಿಯ (ತನ್ನಿಷ್ಟದ ವಕೀಲರನ್ನು ಸಂಪರ್ಕಿಸಿ ಅವರ ಮೂಲಕ ಕಾನೂನು ರಕ್ಷಣೆ ಪಡೆಯುವ ಹಕ್ಕು) ಉಲ್ಲಂಘನೆಯಾಗುತ್ತದೆ.
ಕ್ರಿಮಿನಲ್ ವಿಚಾರಣೆಯ ಎಲ್ಲಾ ಹಂತಗಳಲ್ಲಿ ವಕೀಲರೊಟ್ಟಿಗೆ ಸಮಾಲೋಚನೆ ಮಾತ್ರವಲ್ಲದೆ ಕಾನೂನು ರಕ್ಷಣೆ ಪಡೆಯುವುದಕ್ಕಾಗಿ ಸಂವಿಧಾನದ ವಿಧಿ 22ನ್ನು ಹಿಗ್ಗಿಸುವಂತೆ ಡಾ. ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನ ಸಭೆಯ ಚರ್ಚೆ ವೇಳೆ ಹೇಳಿದ್ದರು.
ಪಿಎಂಎಲ್‌ಎ ಮತ್ತು ಎನ್‌ಡಿಪಿಎಸ್ ರೀತಿಯ ಕಾಯಿದೆಗಳಡಿ ದಾಖಲಾದ ಪ್ರಕರಣಗಳಲ್ಲಿ ವಿಚಾರಣೆ ವೇಳೆ ನೀಡಿದ ತಪ್ಪೊಪ್ಪಿಗೆ ಹೇಳಿಕೆಗಳು ಸಾಕ್ಷಿಯಾಗಿ ಬಳಕೆಯಾಗಲಿದ್ದು ವಕೀಲರ ಉಪಸ್ಥಿತಿ ಇಲ್ಲದಿದ್ದಾಗ ಪೊಲೀಸರು ಒತ್ತಡ ಹೇರಿ ಇಂತಹ ಸಾಕ್ಷಿಗಳನ್ನು ದಾಖಲಿಸಿಕೊಳ್ಳುವ ಅಪಾಯ ಇರುತ್ತದೆ.
ಅಮೆರಿಕಾದ ಮಿರಿಂಡಾ ಮತ್ತು ಅರಿಜೋನಾ ನಡುವಣ ಪ್ರಕರಣದಲ್ಲಿ ವಿಚಾರಣೆಗೂ ಮುನ್ನ ಆರೋಪಿಗೆ ಅವರ ಹಕ್ಕುಗಳ ಬಗ್ಗೆ ತಿಳಿಸಬೇಕೆಂದು ಅಲ್ಲಿನ ನ್ಯಾಯಾಲಯ ಹೇಳಿತ್ತು.
ಸಾಲ್ಡುಜ್ ಮತ್ತು ಟರ್ಕಿ ನಡುವಣ ಪ್ರಕರಣದ ತೀರ್ಪಿನಲ್ಲಿ ವಕೀಲರಿಲ್ಲದೆ ವಿಚಾರಣೆ ನಡೆಸುವುದು ನ್ಯಾಯಯುತ ವಿಚಾರಣೆಗೆ ವಿರುದ್ಧ ಎಂದು ಐರೋಪ್ಯ ನ್ಯಾಯಾಲಯ ಹೇಳಿದೆ.
ಪೊಲೀಸ್ ಕಸ್ಟಡಿಯಲ್ಲಿದ್ದಾಗ ನಡೆಯುವ ದೌರ್ಜನ್ಯ ತಡೆಯಲು ವಕೀಲರ ಉಪಸ್ಥಿತಿ ಅಗತ್ಯ.
ಹೀಗಾಗಿ ವಿಚಾರಣೆಯ ಆರಂಭಿಕ ಹಂತದಿಂದಲೇ ವಕೀಲರ ಹಾಜರಾತಿ ಸಾಂವಿಧಾನಿಕ ಹಕ್ಕು ಎಂದು ಘೋಷಿಸಬೇಕು.
ವಿಚಾರಣೆಗಳನ್ನು ವೀಡಿಯೋ ರೆಕಾರ್ಡ್ ಮಾಡುವ ಕಡ್ಡಾಯ ವ್ಯವಸ್ಥೆ ಜಾರಿಗೆ ಬರಬೇಕು.
ಬಂಧಿತರಿಗೆ ಇರುವ ಹಕ್ಕುಗಳ ಬಗ್ಗೆ ಲಿಖಿತ ನೋಟಿಸ್ ಮೂಲಕ ವಿವರಿಸಬೇಕು.
ವಿಡಿಯೋ-ರೆಕಾರ್ಡ್ ವಿಚಾರಣೆ, ಹಕ್ಕುಗಳ ಶಾಸನಬದ್ಧ ಸೂಚನೆ ಮತ್ತು ಅಂತಹ ಅವಶ್ಯಕತೆಗಳಿಂದ ಯಾವುದೇ ವಿನಾಯಿತಿ ಬೇಕೆಂದಿದ್ದರೆ ಅದಕ್ಕೆ ನ್ಯಾಯಾಂಗ ಮೇಲ್ವಿಚಾರಣೆಯ ಅಗತ್ಯವಿರುವಂತಹ ಮಾರ್ಗಸೂಚಿಗಳನ್ನು ನ್ಯಾಯಾಲಯ ಹೊರಡಿಸಬೇಕು.