ಆರೋಪಿಯ ಬಿಡುಗಡೆಗೆ ಸಂಬಂಧಿಸಿದ ಷರತ್ತುಗಳ ಉಲ್ಲಂಘನೆಯ ವಿಚಾರಣೆ ನಡೆಸುವಂತಹ ಸಂದರ್ಭಗಳಲ್ಲಿ ಸೆಷನ್ಸ್ ನ್ಯಾಯಾಲಯ, ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಬಹುದು ಎಂದು ಪಂಜಾಬ್ ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
ಹೈಕೋರ್ಟ್ ಅಥವಾ ತಾನೇ ನೀಡಿದ್ದ ಇಲ್ಲವೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ನಿಯಮಿತ ಜಾಮೀನನ್ನು ರದ್ದುಗೊಳಿಸುವ ಅಧಿಕಾರ ಸೆಷನ್ಸ್ ನ್ಯಾಯಾಲಯಕ್ಕೆ ಇದೆ. ಆದರೂ, ಜಾಮೀನು ನೀಡುವಾಗ ಹೈಕೋರ್ಟ್ ವಿಧಿಸಿದ್ದ ಷರತ್ತುಗಳನ್ನು ಆರೋಪಿ ಉಲ್ಲಂಘಿಸಿದ್ದರೆ ಅಥವಾ ಅಂತಹ ಆರೋಪಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಮೂಲಕ ಇಲ್ಲವೇ ವಿಚಾರಣೆ ವಿಳಂಬಗೊಳಿಸುವ ಸಲುವಾಗಿ ಗೈರುಹಾಜರಾಗಿದ್ದರೆ ಅಥವಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾಗ ಮತ್ತೊಂದು ಅಪರಾಧ ಎಸಗಿದ್ದರೆ ಅಥವಾ ಅಂತಹ ಸಮಾನ ಸ್ವರೂಪದ ಕೃತ್ಯಗಳನ್ನು ಎಸಗಿ ತನಗೆ ನೀಡಲಾದ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿದ್ದರೆ ಮಾತ್ರ ಸೆಷನ್ಸ್ ನ್ಯಾಯಾಲಯ ಹೈಕೋರ್ಟ್ ನೀಡುವ ನಿಯಮಿತ ಜಾಮೀನನ್ನು ರದ್ದುಗೊಳಿಸಬಹುದು ಎಂದು ಹೈಕೋರ್ಟ್ ಹೇಳಿದೆ.
ಆದರೆ ಮ್ಯಾಜಿಸ್ಟ್ರೇಟ್ ತಾನು ನೀಡಿದ್ದ ಜಾಮೀನನ್ನು ಮಾತ್ರ ರದ್ದುಗೊಳಿಸಬಹುದೇ ವಿನಾ ಆರೋಪಿ ಹೈಕೋರ್ಟ್ ಅಥವಾ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿದ್ದನ್ನು ಹೊರತುಪಡಿಸಿ ಹೈಕೋರ್ಟ್ ಅಥವಾ ಸೆಷನ್ಸ್ ನ್ಯಾಯಾಲಯ ನೀಡಿದ ಜಾಮೀನನ್ನು ರದ್ದುಗೊಳಿಸುವಂತಿಲ್ಲ ಎಂದು ಅದು ತಿಳಿಸಿದೆ.
ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್‌ಗಳಡಿಯಲ್ಲಿ ವೈವಾಹಿಕ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿ ಸುಮೀತ್ ಗೋಯೆಲ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಾಮೀನು ರದ್ದುಗೊಳಿಸುವಿಕೆ ಮತ್ತು ಜಾಮೀನು ಆದೇಶ ಬದಿಗೆ ಸರಿಸುವುದಕ್ಕೆ ಸಂಬಂಧಿಸಿದ ಕಾನೂನನ್ನು ಏಕಸದಸ್ಯ ಪೀಠ ತನ್ನ ತೀರ್ಪಿನಲ್ಲಿ ವಿಶ್ಲೇಷಿಸಿದೆ.
ಹೈಕೋರ್ಟ್ ತನ್ನ ಅಥವಾ ಸೆಷನ್ಸ್ ಕೋರ್ಟ್ ನೀಡಿದ ಜಾಮೀನನ್ನು ರದ್ದುಗೊಳಿಸಬಹುದಾದರೂ, ಅಂತಹ ರದ್ದತಿಯ ಕುರಿತ ಅರ್ಜಿಯನ್ನು ಸಾಮಾನ್ಯವಾಗಿ ಅದೆ ನ್ಯಾಯಾಲಯದೆದುರು ಸಲ್ಲಿಸಬೇಕು. ಆದರೂ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 439 (2)ರ ಪ್ರಕಾರ ಹೈಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಮವರ್ತಿ ನ್ಯಾಯವ್ಯಾಪ್ತಿ ಇರುವುದರಿಂದ ಅಂತಹ ಮನವಿಯನ್ನು ಹೈಕೋರ್ಟ್‌ಗೆ ಸಲ್ಲಿಸುವುದನ್ನು ತಡೆಯುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನಿರೀಕ್ಷಣಾ ಜಾಮೀನು ರದ್ದತಿಗೆ ಸಂಬಂಧಿಸಿದಂತೆಯೂ ನ್ಯಾಯಾಲಯ ಇದೇ ರೀತಿಯ ಅವಲೋಕನಗಳನ್ನು ಮಾಡಿತು.
ನಿರೀಕ್ಷಣಾ ಅಥವಾ ನಿಯಮಿತ ಜಾಮೀನು ಆದೇಶ ರದ್ದುಗೊಳಿಸುವ ಮನವಿಯನ್ನು ಜಾಮೀನು ನೀಡಿದ ನ್ಯಾಯಾಲಯಕ್ಕಿಂತ ಮೇಲಿನ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಅದು ಹೇಳಿತು.
ಪ್ರಸ್ತುತ ಪ್ರಕರಣದಲ್ಲಿ, ನಿರೀಕ್ಷಣಾ ಜಾಮೀನಿನ ದುರುಪಯೋಗದ ಯಾವುದೇ ಆರೋಪ ಕಂಡುಬಂದಿಲ್ಲ ಎಂದ ನ್ಯಾಯಾಲಯ ಹೀಗಾಗಿ ಫರಿದಾಬಾದ್‌ನ ಸೆಷನ್ಸ್ ನ್ಯಾಯಾಲಯ ಜಾರಿಗೊಳಿಸಿದ ನಿರೀಕ್ಷಣಾ ಜಾಮೀನು ಆದೇಶ ರದ್ದತಿ ಕೋರಿ ಸಲ್ಲಿಸಲಾದ ಅರ್ಜಿ ವಜಾಗೊಳಿಸಿತು.