Karnataka High Court

 
ಸುದ್ದಿಗಳು

[ಆರ್‌ಸಿ ವಿತರಣೆ] ಸ್ಮಾರ್ಟ್‌ ಕಾರ್ಡ್‌ ವ್ಯವಸ್ಥೆಯನ್ನು ಹೊಸ ಮಾದರಿಯಲ್ಲಿಯೂ ಮುಂದುವರಿಸಬಹುದೇ? ಹೈಕೋರ್ಟ್‌ ಪ್ರಶ್ನೆ

ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ಜಾಗತಿಕ ಟೆಂಡರ್ ಮೂಲಕ ಸರ್ಕಾರದೊಂದಿಗೆ 15 ವರ್ಷಗಳಿಗೆ ರೊಸ್ಮೆರ್ಟಾ ಟೆಕ್ನಾಲಜೀಸ್ ಲಿಮಿಟೆಡ್ ಒಪ್ಪಂದ ಮಾಡಿಕೊಂಡಿದೆ ಎಂದ ಹಿರಿಯ ವಕೀಲ ಪೂವಯ್ಯ.

Bar & Bench

ಸದ್ಯ ಚಾಲ್ತಿಯಲ್ಲಿರುವ ಸ್ಮಾರ್ಟ್ ಕಾರ್ಡ್ ಆಧಾರಿತ ವಾಹನ ನೋಂದಣಿ ಪ್ರಮಾಣಪತ್ರ (ಆರ್‌ಸಿ) ವಿತರಣೆ ವ್ಯವಸ್ಥೆಯನ್ನು ಡೀಲರ್‌ಮಟ್ಟದಲ್ಲಿ ಹೊಸ ವಾಹನಗಳ ಆನ್‌ಲೈನ್ ನೋಂದಣಿಯಲ್ಲಿಯೂ ಮುಂದುವರಿಸಬಹುದೇ ಎನ್ನುವ ಕುರಿತು ಬುಧವಾರ ರಾಜ್ಯ ಸರ್ಕಾರದಿಂದ ಕರ್ನಾಟಕ ಹೈಕೋರ್ಟ್ ಸ್ಪಷ್ಟನೆ ಕೇಳಿದೆ.

ಕರ್ನಾಟಕ ಮೋಟಾರು ವಾಹನ ಅಧಿನಿಯಮ-1989ರ ನಿಯಮ 33ಕ್ಕೆ ತಿದ್ದುಪಡಿ ತಂದು, ಹೊಸ ವಾಹನಗಳಿಗೆ ಡೀಲರ್ ಮಟ್ಟದಲ್ಲೇ ಎಲೆಕ್ಟ್ರಾನಿಕ್ ಅಥವಾ ಆನ್‌ಲೈನ್ ಮೂಲಕ ಆರ್‌ಸಿ ವಿತರಿಸುವ ಸಂಬಂಧ 2021ರ ಅಕ್ಟೋಬರ್‌ 31ರಂದು ಸಾರಿಗೆ ಇಲಾಖೆ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸ್ಮಾರ್ಟ್ ಕಾರ್ಡ್ ಆಧಾರಿತ ಆರ್ ಸಿ ವಿತರಣಾ ಸಂಸ್ಥೆಯಾದ ರೊಸ್ಮೆರ್ಟಾ ಟೆಕ್ನಾಲಜೀಸ್ ಲಿಮಿಟೆಡ್ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಮಧ್ಯಂತರ ಆದೇಶ ತೆರವಿಗೆ ಕೋರಿಕೆ

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು “ಅಕ್ಟೋಬರ್‌ 31ರ ಅಧಿಸೂಚನೆಗೂ ಮೊದಲು ಜಾರಿಯಲ್ಲಿದ್ದ ವ್ಯವಸ್ಥೆಯಂತೆಯೇ ಆರ್‌ಸಿ ವಿತರಿಸಬೇಕೆಂದು ಪೀಠ ಮಧ್ಯಂತರ ಆದೇಶ ಮಾಡಿದೆ. ಇದನ್ನು ತೆರವು ಮಾಡಬೇಕು ಎಂದು ಕೋರಿ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿದೆ” ಎಂದರು.

ಇದಕ್ಕೆ ರೊಸ್ಮೆರ್ಟಾ ಟೆಕ್ನಾಲಜೀಸ್ ಲಿಮಿಟೆಡ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜ್ಜನ್‌ ಪೂವಯ್ಯ ಅವರು ಆಕ್ಷೇಪಿಸಿದರು. “ಸ್ಮಾರ್ಟ್ ಕಾರ್ಡ್ ಆಧಾರಿತ ಆರ್‌ಸಿ ವಿತರಿಸಲು ರಾಜ್ಯ ಸರ್ಕಾರ ನಮ್ಮೊಂದಿಗೆ 15 ವರ್ಷಗಳ ಕನ್ಸೆಷನ್ ಅಗ್ರಿಮೆಂಟ್ (ವಿನಾಯಿತಿ ಒಪ್ಪಂದ) ಮಾಡಿಕೊಂಡಿದೆ. ಆ ಒಪ್ಪಂದ 2024ರ ವರೆಗೆ ಜಾರಿಯಲ್ಲಿರಲಿದೆ. ಹೀಗಿರುವಾಗ ಏಕಾಏಕಿ ಡೀಲರ್‌ ಮಟ್ಟದಲ್ಲೇ ವಾಹನಗಳ ನೋಂದಣಿಗೆ ಅವಕಾಶ ಕಲ್ಪಿಸಿ, ಎಲೆಕ್ಟ್ರಾನಿಕ್ ಮೋಡ್ ಮೂಲಕ ಆರ್‌ಸಿ ವಿತರಣೆಗೆ ಸಾರಿಗೆ ಇಲಾಖೆ ಅನುವು ಮಾಡಿಕೊಟ್ಟಿದೆ. ಒಪ್ಪಂದವಿನ್ನೂ ಚಾಲ್ತಿಯಲ್ಲಿರುವುದನ್ನು ಪರಿಗಣಿಸಿದ್ದ ನ್ಯಾಯಾಲಯ, ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನೇ ಮುಂದುವರಿಸಲು ಮಧ್ಯಂತರ ಆದೇಶ ಮಾಡಿದೆ” ಎಂದರು.

ಹೊಸ ವಾಹನಗಳಿಗೆ ಮಾತ್ರ ಅನ್ವಯ

ಕೇವಲ ಹೊಸ ವಾಹನಗಳನ್ನು ನೋಂದಣಿ ಮಾಡುವ ಜವಾಬ್ದಾರಿಯಷ್ಟೇ ಡೀಲರ್‌ಗಳಿಗೆ ವಹಿಸಲಾಗಿದ್ದು, ಬೇರಾವ ಅಧಿಕಾರವನ್ನೂ ನೀಡಲಾಗಿಲ್ಲ. ಈಗಾಗಲೇ ಸುಮಾರು 8 ರಾಜ್ಯಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಧ್ಯಾನ್ ಚಿನ್ನಪ್ಪ ಹೇಳಿದರು.

ಈ ವ್ಯವಸ್ಥೆ ಮೋಟಾರು ವಾಹನ (ಎಂವಿ) ಕಾಯಿದೆಗೆ ಅನುಗುಣವಾಗಿದೆಯೇ ಎಂಬ ಪೀಠದದ ಪ್ರಶ್ನೆಗೆ ಉತ್ತರಿಸಿದ ಧ್ಯಾನ್ ಚಿನ್ನಪ್ಪ ಅವರು “ಎಂವಿ ಕಾಯಿದೆಯ ನಿಯಮ 33ರ ಅನುಸಾರ ಆರ್‌ಟಿಒ ನೋಂದಣಿ ಪ್ರಾಧಿಕಾರವಾಗಿತ್ತು. ಆ ನಿಯಮಕ್ಕೆ ತಿದ್ದುಪಡಿ ತಂದು, ಸಾರಿಗೆ ಆಯುಕ್ತರು ಅನುಮೋದಿಸಿದ ಯಾವುದೇ ಡೀಲರ್‌ಗಳು ವಾಹನ ನೋಂದಣಿ ಮಾಡಬಹುದು ಎಂದು ಮಾಡಲಾಗಿದೆ. ಇದು ಕೇವಲ ಹೊಸ ವಾಹನಗಳಿಗೆ ಮಾತ್ರ ಅನ್ವಯಿಸಲಿದೆ. ಜತೆಗೆ, ವಾಹನ ನೋಂದಣಿ ಪ್ರಕ್ರಿಯೆ ಅತ್ಯಂತ ಸರಳವಾಗಿದ್ದು, ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ನಡೆಯಲಿದೆ. ಡೀಲರ್‌ಗಳು ಯಾವುದೇ ಅಕ್ರಮವೆಸಗಲು ಅವಕಾಶವಿರುವುದಿಲ್ಲ” ಎಂದರು.

ಎಲ್ಲರೂ ಸ್ಮಾರ್ಟ್ ಫೋನ್‌ ಹೊಂದಿರುವುದಿಲ್ಲ

ಮೊದಲಿದ್ದ ವ್ಯವಸ್ಥೆ ಅನುಸಾರ ಆರ್‌ಟಿಒ ವತಿಯಿಂದಲೇ ವಾಹನ ನೋಂದಣಿ ಮಾಡಿ, ಸ್ಮಾರ್ಟ್ ಕಾರ್ಡ್ ವಿತರಿಸುವುದರಿಂದ ಯಾವ ಸಮಸ್ಯೆ ಇದೆ ಎಂದು ಪೀಠ ಪ್ರಶ್ನಿಸಿತು. ಅದಕ್ಕೆ ಪ್ರತಿಕ್ರಿಯಿಸಿದ ಧ್ಯಾನ್‌ ಚಿನ್ನಪ್ಪ ಅವರು ಆನ್‌ಲೈನ್ ಮೂಲಕ ನೋಂದಣಿ ಮಾಡಿಸಿದ ನಂತರ, ರಸೀದಿಯನ್ನು ಪ್ರಿಂಟ್‌ಔಟ್ ತೆಗೆದುಕೊಂಡರೆ ಸಾಕು. ಜತೆಗೆ, ಆನ್‌ಲೈನ್ ಆರ್‌ಸಿಗಳನ್ನು ಮೊಬೈಲ್‌ನಲ್ಲಿಯೂ ಇಟ್ಟುಕೊಳ್ಳಬಹುದಾಗಿದೆ. ಕೇಂದ್ರ ಮೋಟಾರು ವಾಹನ ನಿಯಮ 48ರಲ್ಲಿ ಅದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ, ವಾಹನ ಸವಾರರಿಗೆ ಆರ್‌ಸಿಗಳನ್ನು ಕೊಂಡೊಯ್ಯುವುದು ಮತ್ತಷ್ಟು ಸುಲಭವಾಗಲಿದೆ ಎಂದರು.

ಆಗ ಪೀಠವು ನೀವು ಸ್ಮಾರ್ಟ್‌ ಫೋನ್‌ ಹೊಂದಿರಬಹುದು. ಆದರೆ, ಎಲ್ಲರ ಬಳಿಯೂ ಸ್ಮಾರ್ಟ್‌ ಫೋನ್‌ ಇರುವುದಿಲ್ಲ. ಅಂಥವರು ಏನು ಮಾಡಬೇಕು ಎಂದು ಪ್ರಶ್ನಿಸಿತು. ಅದಕ್ಕೆ ಉತ್ತರಿಸಿದ ಧ್ಯಾನ್ ಚಿನ್ನಪ್ಪ, ಆನ್‌ಲೈನ್ ಆರ್‌ಸಿಗಳ ಪ್ರಿಂಟ್‌ಔಟ್ ಸಹ ತೆಗೆದುಕೊಳ್ಳಬಹುದು. ಅದನ್ನೇ ಅಗತ್ಯ ಸಂದರ್ಭಗಳಲ್ಲಿ ತೋರಿಸಬಹುದು ಎಂದರು.

ಶೇ. 60ರಷ್ಟು ಮಂದಿ ಸ್ಮಾರ್ಟ್‌ ಫೋನ್‌ ಹೊಂದಿಲ್ಲ: ಪೂವಯ್ಯ

ಪ್ರತಿ ಮನೆಯಲ್ಲೂ ವಾಹನ ನೋಂದಣಿ ಅಧಿಕಾರ ಕೊಡಲಿ. ಅದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ. ಆದರೆ, ನಮ್ಮೊಂದಿಗಿನ ಒಪ್ಪಂದ ಚಾಲ್ತಿಯಲ್ಲಿರುವಾಗಲೇ ಸ್ಮಾರ್ಟ್ ಕಾರ್ಡ್ ವಿತರಣೆ ವ್ಯವಸ್ಥೆ ಸ್ಥಗಿತಗೊಳಿಸುವುದಕ್ಕೆ ನಮ್ಮ ಆಕ್ಷೇಪವಿದೆ. ಸರ್ಕಾರ ಒಂದು ಕಡೆ 15 ವರ್ಷಗಳಿಗೆ ಒಪ್ಪಂದ ಮಾಡಿಕೊಂಡಿದೆ. ಅದಕ್ಕಾಗಿ ನಾವು ಕೋಟ್ಯಂತರ ಹಣ ಹೂಡಿಕೆ ಮಾಡಿದ್ದೇವೆ. ಒಪ್ಪಂದದ ಅವಧಿ ಪೂರ್ಣಗೊಳ್ಳುವ ಮೊದಲೇ ಕೇಂದ್ರ ಸರ್ಕಾರ ಆನ್‌ಲೈನ್ ಆರ್‌ಸಿ ಕಡ್ಡಾಯಗೊಳಿಸಿದೆ ಎಂಬ ಕಾರಣವನ್ನು ಸರ್ಕಾರ ಹೇಳುತ್ತಿದೆ. ಆದರೆ, ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿಯ ಪ್ರಕಾರ ಭೌತಿಕ ನೋಂದಣಿ ಕಾರ್ಡ್‌ಗಳಿಗೆ ಆನ್‌ಲೈನ್ ಆರ್‌ಸಿ ಪರ್ಯಾಯ ಎಂದು ಹೇಳಿಲ್ಲ. ದೇಶದ ಶೇ 60ರಷ್ಟು ಜನ ಸ್ಮಾರ್ಟ್‌ ಫೋನ್‌ಗಳನ್ನೇ ಹೊಂದಿಲ್ಲ. ಅಂಥವರು ಡಿಜಿಲಾಕರ್ ಮೂಲಕ ಆನ್‌ಲೈನ್ ಆರ್‌ಸಿ ತೋರಿಸಲು ಹೇಗೆ ಸಾಧ್ಯ. ಅರ್ಜಿಯಲ್ಲಿನ ಮುಖ್ಯ ಮನವಿ ಕುರಿತು ವಾದ ಮಂಡಿಸಲು ನಾವು ಸಿದ್ಧರಿದ್ದೇವೆ, ಈ ಹಂತದಲ್ಲಿ ಮಧ್ಯಂತರ ಆದೇಶ ತೆರವುಗೊಳಿಸಬಾರದು ಎಂದು ಪೂವಯ್ಯ ಮನವಿ ಮಾಡಿದರು.

ಸ್ಮಾರ್ಟ್ ಕಾರ್ಡ್ ಮುಂದುವರಿಸಬಹುದೇ?

ಸದ್ಯ ಸ್ಮಾರ್ಟ್ ಕಾರ್ಡ್ ವಿತರಣೆಯನ್ನು ಕೇಂದ್ರೀಕೃತಗೊಳಿಸಿ ಆರ್‌ಟಿಒ ಮೂಲಕ ವಿತರಿಸಲಾಗುತ್ತಿದೆ. ವಾಹನ ನೋಂದಣಿ ಅಧಿಕಾರವನ್ನು ಡೀಲರ್‌ಗಳಿಗೆ ವರ್ಗಾಯಿಸಲು ಮುಂದಾಗುವುದಾದರೆ, ಡೀಲರ್‌ಗಳ ಮೂಲಕವೇ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಬೇಕಾಗುತ್ತದೆ. ಆದರೆ, ಸರ್ಕಾರ ಆ ಕೆಲಸ ಮಾಡಿಲ್ಲ ಎಂದು ಆಕ್ಷೇಪಿಸಿದ ಪೂವಯ್ಯ, ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ಜಾಗತಿಕ ಟೆಂಡರ್ ಮೂಲಕ ಸರ್ಕಾರದೊಂದಿಗೆ 15 ವರ್ಷಗಳಿಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಪೀಠಕ್ಕೆ ತಿಳಿಸಿದರು.

ಆಗ ಪೀಠವು ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಮುಂದುವರಿಸಬಹುದೇ, ಡೀಲರ್‌ಮಟ್ಟದಲ್ಲಿ ನಡೆಸುವ ಆನ್‌ಲೈನ್ ನೋಂದಣಿಯಲ್ಲೂ ಸ್ಮಾರ್ಟ್ ಕಾರ್ಡ್ ವಿತರಿಸಬಹುದೇ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಿದರೆ ಅರ್ಜಿಯನ್ನೇ ಇತ್ಯರ್ಥಪಡಿಸಬಹುದು ಎಂದು ಹೇಳಿತು. ಈ ಕುರಿತು ಮಾಹಿತಿ ಪಡೆದು ತಿಳಿಸಲಾಗುವುದು ಎಂದು ಎಎಜಿ ಹೇಳಿದರು. ಅದನ್ನು ಪರಿಗಣಿಸಿದ ಪೀಠ ವಿಚಾರಣೆ ಮುಂದೂಡಿತು.