ದೃಢ ಪುರಾವೆಗಳಿಲ್ಲದೆ ಕೇವಲ ಹ್ಯಾಕ್ ಆಗಿದೆ, ಇಲ್ಲವೇ ತಿರುಚಲಾಗಿದೆ ಎಂಬ ಶಂಕೆಯ ಆಧಾರದ ಮೇಲೆ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಳಕೆಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ನೀಡಬಹುದೇ ಎಂದು ಸುಪ್ರೀಂ ಕೋರ್ಟ್ ಬುಧವಾರ ಪ್ರಶ್ನಿಸಿದೆ.
ಇವಿಎಂಗಳ ಮೂಲಕ ಚಲಾವಣೆಯಾದ ಪ್ರತಿ ಮತವನ್ನು ಚುನಾವಣಾ ಸಮಯದಲ್ಲಿ ವೋಟರ್-ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಚೀಟಿಗಳೊಂದಿಗೆ ತಾಳೆ ಮಾಡಲು ನಿರ್ದೇಶನ ನಿಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಈ ಪ್ರಶ್ನೆ ಕೇಳಿತು.
ಇವಿಎಂಗಳು ಹ್ಯಾಕ್ ಮಾಡದಷ್ಟು ಮುಕ್ತವಾಗಿವೆಯೇ ಎಂಬ ಬಗ್ಗೆಯೂ ಅರ್ಜಿಗಳು ಶಂಕೆ ಹುಟ್ಟುಹಾಕಿದ್ದವು. ಆದರೆ ಇವಿಎಂಗಳಲ್ಲಿನ ಮೈಕ್ರೋಕಂಟ್ರೋಲರ್‌ಗಳ ಫ್ಲ್ಯಾಷ್ ಮೆಮೊರಿಯನ್ನು ತಿರುಚಲು ಸಾಧ್ಯವಿಲ್ಲ ಎಂದು ಬುಧವಾರ ಭಾರತೀಯ ಚುನಾವಣಾ ಆಯೋಗ (ಇಸಿಐ) ಸುಪ್ರೀಂ ಕೋರ್ಟ್‌ಗೆ ಸ್ಪಷ್ಟನೆ ನೀಡಿತು.
“ಸಂಶಯದ ಆಧಾರದಲ್ಲಿ ನಾವು ತೀರ್ಪು ನೀಡಲು ಸಾಧ್ಯವೇ? ನೀವು (ಅರ್ಜಿದಾರರು) ನೆಚ್ಚಿರುವ ವರದಿಯಲ್ಲಿ ಇನ್ನೂ ಯಾವುದೇ ಹ್ಯಾಕಿಂಗ್ ಘಟನೆ ನಡೆದಿಲ್ಲ ಎಂದು ತಿಳಿಸಲಾಗಿದೆ. ನಾವು ಇನ್ನೊಂದು ಸಾಂವಿಧಾನಿಕ ಸಂಸ್ಥೆಯ (ಇಸಿಐ) ನಿಯಂತ್ರಣ ಸಂಸ್ಥೆಯಲ್ಲ. ನಾವು ಚುನಾವಣೆಯನ್ನು ನಿಯಂತ್ರಿಸಲಾಗದು. ವಿವಿಪ್ಯಾಟ್ ಬಳಸುವಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪಾಲಿಸಲಾಗಿದೆ. ಕೇವಲ ಶೇ.5ರಷ್ಟನ್ನು ಬಿಟ್ಟು ಎಲ್ಲಾ ʼವಿವಿಪ್ಯಾಟ್ʼ ಚೀಟಿಗಳನ್ನು ತಾಳೆ ನೋಡುವಂತೆ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಎಲ್ಲಿ ಹೇಳಲಾಗಿದೆ? ಇದರ ಹೊರತಾಗಿ ಯಾವುದಾದರೂ ದುರ್ಬಳಕೆ ಘಟನೆ ನಡೆದಿದೆ ಎಂದು ಅಭ್ಯರ್ಥಿಗಳು ಹೇಳುತ್ತಾರೆಯೇ ಎಂಬುದನ್ನು ನೋಡೋಣ” ಎಂದು ನ್ಯಾಯಾಲಯ ನುಡಿಯಿತು.
ಮತಪತ್ರಗಳ ಬಳಕೆಗೆ ಹಿಂದಿರುಗುವುದು ನಂತರ ಆಯ್ಕೆಯಾಗಲಿ. ಅದಕ್ಕೂ ಮೊದಲು ಇವಿಎಂ ವ್ಯವಸ್ಥೆ ಬಲಪಡಿಸಲು ನಿರ್ದೇಶನ ನೀಡುವುದನ್ನು ಪರಿಗಣಿಸುವುದಾಗಿ ನ್ಯಾಯಾಲಯ ಇದೇ ವೇಳೆ ನುಡಿಯಿತು.
ಮತದಾನ ಪ್ರಕ್ರಿಯೆ, ಇವಿಎಂ, ಭದ್ರತಾ ಕೊಠಡಿಯ ವಿಚಾರಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಕೆಲವು ಸ್ಪಷ್ಟನೆಗಳನ್ನೂ ಆಯೋಗದಿಂದ ಪಡೆಯಿತು.
ಫ್ಲಾಷ್ ಮೆಮೋರಿ ತಿರುಚಲು ಸಾಧ್ಯವಿಲ್ಲ ಎಂಬ ಆಯೋಗದ ಹೇಳಿಕೆಗೆ ಎಡಿಆರ್ ಸರ್ಕಾರೇತರ ಸಂಸ್ಥೆ ಪರ ವಾದ ಮಂಡಿಸಿದ ಪ್ರಶಾಂತ್ ಭೂಷಣ್ ಆಕ್ಷೇಪ ವ್ಯಕ್ತಪಡಿಸಿದರು. ಮತ್ತೆ ಇದೇ ವಿಷಯವನ್ನು ಇಸಿಐ ಸಮರ್ಥಿಸಿಕೊಂಡಿತು. ಆಗ ನ್ಯಾಯಾಲಯ ಹೆಚ್ಚಿನ ಪರಿಶೀಲನೆ ಅಗತ್ಯವಿದೆ ಎಂದಿತು.
ಕಳೆದ ವಿಚಾರಣೆ ವೇಳೆ ನ್ಯಾಯಾಲಯ ಎಲ್ಲವನ್ನೂ ಅನುಮಾನಿಸಲಾಗದು. ಅರ್ಜಿದಾರರು ಇವಿಎಂನ ಪ್ರತಿಯೊಂದು ಅಂಶವನ್ನು ಟೀಕಿಸುವ ಅಗತ್ಯವಿಲ್ಲ ಎಂದಿತ್ತು.