Christian Michel 
ಸುದ್ದಿಗಳು

ಕ್ರಿಶ್ಚಿಯನ್ ಮಿಶೆಲ್ ವಿದೇಶಿ ಪ್ರಜೆ ಎಂಬ ಕಾರಣಕ್ಕೆ ಅನಿರ್ದಿಷ್ಟಾವಧಿ ಜೈಲಿನಲ್ಲಿ ಇರಿಸಬಹುದೇ? ಸುಪ್ರೀಂ ಪ್ರಶ್ನೆ

ಆಗಸ್ಟಾವೆಸ್ಟ್‌ಲ್ಯಾಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಮಿಶೆಲ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Bar & Bench

ವಿದೇಶಿ ಪ್ರಜೆ ಎಂಬ ಕಾರಣಕ್ಕಾಗಿ ಆಗಸ್ಟಾವೆಸ್ಟ್‌ಲ್ಯಾಂಡ್‌ ಹಗರಣದ ಆರೋಪಿ ಬ್ರಿಟಿಷ್ ಪ್ರಜೆ ಕ್ರಿಶ್ಚಿಯನ್ ಮಿಶೆಲ್ ಅವರಿಗೆ ಜಾಮೀನು ನೀಡದೆ ಅನಿರ್ದಿಷ್ಟಾವಧಿಯವರೆಗೆ ಜೈಲಿನಲ್ಲಿ ಇರಿಸಬಹುದೇ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳನ್ನು ಪ್ರಶಿಸಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರಿದ್ದ ಪೀಠ ವಿಚಾರಣೆ ಸುದೀರ್ಘವಾಗುವ ಸಾಧ್ಯತೆಯನ್ನು ಗಮನಿಸಿದೆ.

"ನಮಗೆ ಆತಂಕವೆನಿಸುವ ವಿಷಯವೆಂದರೆ, ಈ ವಿಚಾರಣೆಯ ಸಂಕೀರ್ಣತೆ. ಪ್ರಕರಣದಲ್ಲಿ ಸುಮಾರು 200 ಸಾಕ್ಷಿಗಳಿದ್ದಾರೆ. ಅವರು ವಿದೇಶಿ ಪ್ರಜೆ ಎಂಬ ಒಂದೇ ಕಾರಣಕ್ಕಾಗಿ ನಾವು ಎಷ್ಟು ಸಮಯದವರೆಗೆ ಅವರನ್ನು ಬಂಧನದಲ್ಲಿರಿಸಬಹುದು? ಒಂದು ವೇಳೆ ಅವರು ಭಾರತೀಯರಾಗಿದ್ದರೆ, ನ್ಯಾಯಾಲಯ ಜಾಮೀನು ನೀಡಲು ಒಲವು ತೋರುತ್ತಿತ್ತು" ಎಂದು ಸಿಜೆಐ ಚಂದ್ರಚೂಡ್ ಮೌಖಿಕವಾಗಿ ತಿಳಿಸಿದರು.

ಆಗಸ್ಟಾವೆಸ್ಟ್‌ಲ್ಯಾಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಿಶೆಲ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಮಿಶೆಲ್ ಅವರ ಜಾಮೀನು ಅರ್ಜಿಯನ್ನು ಈ ಹಿಂದೆ ವಜಾಗೊಳಿಸಿದ್ದ ದೆಹಲಿ ಹೈಕೋರ್ಟ್, ಅವರು ದೇಶ ಬಿಟ್ಟು ಪಲಾಯನ ಮಾಡಬಹುದೆಂದು ತಿಳಿಸಿತ್ತು. ಇಂದು ಸುದೀರ್ಘ ವಿಚಾರಣೆಯ ನಂತರ ಸುಪ್ರೀಂ ಕೋರ್ಟ್ ಮುಂದಿನ ವರ್ಷ ಜನವರಿ ಎರಡನೇ ವಾರಕ್ಕೆ ಪ್ರಕರಣ ಮುಂದೂಡಿತು.

2006 ಮತ್ತು 2007ರಲ್ಲಿ ವಿವಿಐಪಿಗಳ ಓಡಾಟಕ್ಕೆಂದು ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಮಧ್ಯವರ್ತಿಗಳಿಗೆ ಮತ್ತು ಭಾರತೀಯ ಅಧಿಕಾರಿಗಳಿಗೆ ಹಣ ನೀಡಲಾಗಿದೆ ಎನ್ನಲಾಗಿದ್ದ 2013ರ ಹೆಲಿಕಾಪ್ಟರ್ ಲಂಚ ಹಗರಣದಲ್ಲಿ ಕಿಕ್‌ಬ್ಯಾಕ್‌ ನೀಡಲು ಮಿಶೆಲ್ ಸಂಚು ರೂಪಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಇಂಗ್ಲೆಂಡ್ ಮತ್ತು ಅರಬ್ ಸಂಯುಕ್ತ ಸಂಸ್ಥಾನದ ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆಯಾದ ಲಂಚದ ಮೊತ್ತ 33 ಮಿಲಿಯನ್ ಡಾಲರ್ ಎಂದು ಸಿಬಿಐ ಅಂದಾಜಿಸಿದೆ. ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಈ ವರ್ಷದ ಮೇನಲ್ಲಿ ಸಿಬಿಐ ಮತ್ತು ಇಡಿಗೆ ನೋಟಿಸ್ ನೀಡಿತ್ತು.