Elections

 
ಸುದ್ದಿಗಳು

ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವ ವ್ಯಕ್ತಿಗಳನ್ನು ನಾಮಪತ್ರ ಸಲ್ಲಿಸದಂತೆ ತಡೆಯಬಹುದೇ? ಸುಪ್ರೀಂ ಕೋರ್ಟ್ ಪ್ರಶ್ನೆ

ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ರಾಜಕೀಯ ಪಕ್ಷಗಳ ನೋಂದಣಿ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ರಮಣ ನೇತೃತ್ವದ ಪೀಠ.

Bar & Bench

ಕ್ರಿಮಿನಲ್ ಹಿನ್ನಲೆ ಇರುವ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲು ನಮಗೆ ಸಾಧ್ಯವೇ? ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸಂದೇಹ ವ್ಯಕ್ತಪಡಿಸಿದೆ [ಅಶ್ವಿನಿ ಕುಮಾರ್ ಉಪಾಧ್ಯಾಯ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಚುನಾವಣೆಯಲ್ಲಿ ಕ್ರಿಮಿನಲ್ ಹಿನ್ನಲೆಯುಳ್ಳ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ರಾಜಕೀಯ ಪಕ್ಷಗಳ ನೋಂದಣಿ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠ “ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವ ವ್ಯಕ್ತಿಗಳನ್ನು ನಾಮಪತ್ರ ಸಲ್ಲಿಸದಂತೆ ತಡೆಯಬಹುದೇ?” ಎಂದು ಅರ್ಜಿದಾರರಾಗಿರುವ ವಕೀಲ ಬಿಜೆಪಿ ಸದಸ್ಯ ಅಶ್ವಿನಿ ಉಪಾಧ್ಯಾಯ ಅವರನ್ನು ಪ್ರಶ್ನಿಸಿತು.

ಈ ನಡೆ ಸುಪ್ರೀಂಕೋರ್ಟ್‌ನ ಎರಡು ತೀರ್ಪುಗಳಿಗೆ ವಿರುದ್ಧವಾಗಿದೆ ಎಂದು ಉಪಾಧ್ಯಾಯ ಅವರು ತಿಳಿಸಿದಾಗ ಪ್ರಕರಣವನ್ನು ಪರಿಶೀಲಿಸುವುದಾಗಿ ನ್ಯಾಯಾಲಯ ತಿಳಿಸಿತು.

ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕೈರಾನಾ ಕ್ಷೇತ್ರದಿಂದ ನಹಿದ್ ಹಸನ್ ಅವರನ್ನು ಸಮಾಜವಾದಿ ಪಕ್ಷ (ಎಸ್‌ಪಿ) ಅಭ್ಯರ್ಥಿಯಾಗಿ ಕಣಕ್ಕಿಳಿಸಿದ ಉದಾಹರಣೆ ಉಲ್ಲೇಖಿಸಿದ ಉಪಾಧ್ಯಾಯ ಅವರು “ಪ್ರಸ್ತುತ ಪ್ರಕರಣದಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಅಪರಾಧದ ಪೂರ್ವಾಪರವನ್ನು ಬಹಿರಂಗಪಡಿಸದ ರಾಜಕೀಯ ಪಕ್ಷಗಳ ನೋಂದಣಿ ರದ್ದುಗೊಳಿಸಲು ಭಾರತದ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು” ಎಂದು ಕೋರಿದ್ದರು.

ಪ್ರಸಕ್ತ ಪ್ರಕರಣದಲ್ಲಿ ಹಸನ್‌ ಕುಖ್ಯಾತ ಪಾತಕಿಯಾಗಿದ್ದರೂ ಸಮಾಜವಾದಿ ಪಕ್ಷವು ಆತನ ಕ್ರಿಮಿನಲ್‌ ದಾಖಲೆಗಳನ್ನು ಪ್ರಕಟಿಸಿಲ್ಲ, ಅವರನ್ನು ಆಯ್ಕೆ ಮಾಡಿರುವುದಕ್ಕೆ ಕಾರಣವನ್ನೂ ತಿಳಿಸಿಲ್ಲ. ಸುಪ್ರೀಂ ಕೋರ್ಟ್‌ 2020ರಲ್ಲಿ ನೀಡಿರುವ ತೀರ್ಪಿನ ಅನ್ವಯ ಚುನಾವಣಾ ಅಭ್ಯರ್ಥಿಯ ಅಪರಾಧ ಹಿನ್ನಲೆಯನ್ನು ಬಹಿರಂಗಗೊಳಿಸುವುದು ಕಡ್ಡಾಯವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ನಹೀದ್‌ ಹಸನ್‌ ಗೂಂಡಾ ಕಾಯಿದೆಯಡಿ ಕಳೆದ ಹನ್ನೊಂದು ತಿಂಗಳಿಂದ ಬಂಧನದಲ್ಲಿದ್ದಾರೆ. ಅವರ ವಿರುದ್ಧ ಅನೇಕ ಕ್ರಿಮಿನಲ್‌ ಪ್ರಕರಣಗಳಿದ್ದು, ಕೈರಾನದಲ್ಲಿ ನಡೆದ ಹಿಂದೂಗಳ ವಲಸೆಯ ಹಿಂದಿನ ಸೂತ್ರಧಾರ ಅವರಾಗಿದ್ದಾರೆ ಎಂದು ಅರ್ಜಿಯಲ್ಲಿ ಆಪಾದಿಸಲಾಗಿದೆ.