Thumbs up emoji, contract  
ಸುದ್ದಿಗಳು

ಒಪ್ಪಂದ ಸಾಬೀತು: ಟೆಕ್ಸ್ಟ್ ಸಂದೇಶದಲ್ಲಿ ಥಮ್ಸ್ಅಪ್ ಎಮೋಜಿ ಕಳಿಸಿರುವುದು ಸಾಕಾಗುತ್ತದೆ ಎಂದ ಕೆನಡಾ ನ್ಯಾಯಾಲಯ

"ಇದು ಕೆನಡಾದ ಸಮಾಜದಲ್ಲಿ ಹೊಸ ವಾಸ್ತವವಾಗಿ ತೋರುತ್ತಿದ್ದು ಎಮೋಜಿಗಳ ಬಳಕೆಯಿಂದ ಉದ್ಭವಿಸಬಹುದಾದ ಹೊಸ ಸವಾಲುಗಳನ್ನು ಎದುರಿಸಲು ನ್ಯಾಯಾಲಯಗಳು ಸಿದ್ಧವಾಗಿರಬೇಕು" ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ವಿವರಿಸಿದೆ.

Bar & Bench

ಥಮ್ಸ್‌ಅಪ್‌ ಅಥವಾ ʼ👍ʼ ಎಮೋಜಿ ಆಧರಿಸಿದ್ದ ಒಪ್ಪಂದದ ಸಿಂಧುತ್ವವನ್ನು ಕೆನಡಾದ ನ್ಯಾಯಾಲಯ ಇತ್ತೀಚೆಗೆ ಎತ್ತಿಹಿಡಿದಿದ್ದು ಇದು ಪಕ್ಷಕಾರರು ಒಪ್ಪಂದವನ್ನು ಅನುಮೋದಿಸಿದ್ದಾರೆ ಎಂದರ್ಥ ಎಂಬುದಾಗಿ ನ್ಯಾಯಾಲಯ ತಿಳಿಸಿದೆ [ಸೌತ್ ವೆಸ್ಟ್ ಟರ್ಮಿನಲ್ ಲಿಮಿಟೆಡ್ ಮತ್ತು ಆಚ್ಟರ್‌ ಲ್ಯಾಂಡ್‌ ಅಂಡ್‌ ಕ್ಯಾಟಲ್‌ ಲಿಮಿಟೆಡ್‌].

ಸಾಸ್ಕಾಚೆವಾನ್‌ನ ಕಿಂಗ್ಸ್ ಬೆಂಚ್‌ನ ನ್ಯಾಯಾಧೀಶ ಟಿ ಜೆ ಕೀನೆ ಈ ಆದೇಶ  ನೀಡಿದ್ದಾರೆ. ಜೊತೆಗೆ ಅವರು ಪ್ರಸ್ತುತ ಜಗತ್ತಿನಲ್ಲಿ ಎಮೋಜಿಗಳ ಬಳಕೆಯಿಂದ ಉದ್ಭವಿಸಬಹುದಾದ ಇಂತಹ ಹೊಸ ಸವಾಲುಗಳನ್ನು ನ್ಯಾಯಾಲಯಗಳು ಎದುರಿಸುವ ಅಗತ್ಯತೆಯ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

" (ಏನಿಲ್ಲವೆಂದರೂ ಸಾಸ್ಕಾಚೆವಾನ್‌ನಲ್ಲಿಯಾದರೂ) ಈ ಪ್ರಕರಣ ವಿನೂತನವಾದುದು ಎಂದು ನಾನು ಒಪ್ಪುತ್ತೇನೆ. ಆದರೆ ಹೀಗೆ ಮಾಡದಿದ್ದರೆ ಈ ನ್ಯಾಯಾಲಯ ತಂತ್ರಜ್ಞಾನ ಮತ್ತು ಅದರ ಸಾಮಾನ್ಯ ಬಳಕೆಯ ಅಲೆಯನ್ನು ಎದುರಿಸುವ ಪ್ರಯತ್ನ ಮಾಡಲು ಸಾಧ್ಯವಿರಲಿಲ್ಲ. ಕೆನಡಾ ಸಮಾಜದಲ್ಲಿ ಇದೊಂದು ಹೊಸ ವಾಸ್ತವದಂತೆ ತೋರುತ್ತಿದ್ದು ಎಮೋಜಿಯಂತಹವುಗಳ ಬಳಕೆಯಿಂದ ಉದ್ಭವಿಸಬಹುದಾದ ಹೊಸ ಸವಾಲುಗಳನ್ನು ಎದುರಿಸಲು ನ್ಯಾಯಾಲಯಗಳು ಸಿದ್ಧವಿರಬೇಕು” ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.  

ಪ್ರಸ್ತುತ ಪ್ರಕರಣದಲ್ಲಿ, ಎರಡೂ ಕಡೆಯ ಪಕ್ಷಕಾರರ ನಡುವೆ ಅವರು ಬಲ್ಲ ಮತ್ತು ಹಲವಾರು ಸಂದರ್ಭಗಳಲ್ಲಿ ಮಾನ್ಯ ಮತ್ತು ಬದ್ಧವಾದ ಒಪ್ಪಂದಗಳಿಗೆ ಪ್ರವೇಶಿಸುವ ಒಂದು ರೀತಿಯ ಅವಿರೋಧ ಮಾದರಿ ಇತ್ತು ಎಂದು ಗಮನಿಸಿದ ನಂತರ ಆದೇಶವನ್ನು ಅಂಗೀಕರಿಸಲಾಗಿದೆ ಎಂಬುದಾಗಿ ನ್ಯಾಯಾಲಯ ಹೇಳಿದೆ.

“ಕ್ರಿಸ್ (ಪ್ರತಿವಾದಿಯ ಪ್ರತಿನಿಧಿ) ಅವರು ಈ ಹಿಂದೆ ಮಾಡಿದಂತೆಯೇ ಒಪ್ಪಂದವನ್ನು ಒಪ್ಪಿದ ಅಥವಾ ಅನುಮೋದಿಸಿದ ಸಂಭವನೀಯತೆಗಳ ಸಮತೋಲನದಲ್ಲಿ ನಾನು ತೃಪ್ತನಾಗಿದ್ದೇನೆ, ಆದರೆ ಈ ಬಾರಿ ಅವರು ʼ👍ʼ ಎಮೋಜಿಯನ್ನು ಬಳಸಿದರು ... ನನ್ನ ದೃಷ್ಟಿಯಲ್ಲಿ ಪಕ್ಷಕಾರರು ತಾವು ಇತರ ಹಲವು ಸಂದರ್ಭಗಳಲ್ಲಿ ಮಾಡಿದಂತೆಯೇ ಒಮ್ಮತದ ನಿಲುವು ತಳೆದಿದ್ದಾರೆ ಎಂಬ ವಸ್ತುನಿಷ್ಠ ತಿಳಿವಳಿಕೆಗೆ, ಎಲ್ಲಾ ಹಿನ್ನೆಲೆಯನ್ನು ತಿಳಿದಿರುವ ಸೂಕ್ತ ಪ್ರೇಕ್ಷಕರು ಬರುತ್ತಾರೆ” ಎಂಬುದಾಗಿ ನ್ಯಾಯಾಧೀಶರು ವಿವರಿಸಿದ್ದಾರೆ.

ನ್ಯಾಯಾಧೀಶರು ಹಿಂದಿನ ನಿದರ್ಶನಗಳ ಉದಾಹರಣೆಗಳನ್ನು ದಾಖಲಿಸಿದ್ದಾರೆ, ಪ್ರತಿವಾದಿಯು ʼಲುಕ್ಸ್‌ ಗುಡ್‌ʼ (ಒಳ್ಳೆಯದು), ʼಓಕೆʼ (ಸರಿ) ಅಥವಾ ʼಯಪ್‌ʼ (ಹೌದು) ಮತ್ತು ಒಪ್ಪಂದದಲ್ಲಿ ವಿವರಿಸಲಾದ ಸಂಕ್ಷಿಪ್ತ ಪದಗಳ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ನ್ಯಾಯಾಧೀಶರು ದಾಖಲಿಸಿದ್ದಾರೆ.

"ಈ ಸಂಕ್ಷಿಪ್ತ ಪದಗಳನ್ನು ಒಪ್ಪಂದದ ದೃಢೀಕರಣ ಎಂದು ಪಕ್ಷಕಾರ ಕಂಪೆನಿಗಳು ಸ್ಪಷ್ಟವಾಗಿ ಅರ್ಥಮಾಡಿಕೊಂಡಿವೆ ಮತ್ತು ಕ್ರಿಸ್ (ಪ್ರತಿವಾದಿಯ ಪ್ರತಿನಿಧಿ) ಒಪ್ಪಂದದ ಸ್ವೀಕೃತಿ ಕೇವಲ ಸ್ವೀಕೃತಿಯಲ್ಲ. ಪುರಾವೆಯು ಕೇಂದ್ರ ಭಾಗವಾಗಿರುವುದರಿಂದ ಬೇರೆ ಯಾವುದೇ ತಾರ್ಕಿಕ ಅಥವಾ ಶ್ರೇಯಸ್ಕರ ವಿವರಣೆಗಳು ಇರಲು ಸಾಧ್ಯವಿಲ್ಲ”  ಎಂದು ತೀರ್ಪಿನಲ್ಲಿ ಹೇಳಲಾಗಿದೆ.

87 ಮೆಟ್ರಿಕ್ ಟನ್ ಅಗಸೆ ಉತ್ಪನ್ನಕ್ಕಾಗಿ ಫಿರ್ಯಾದಿ ಕಂಪೆನಿ ಪ್ರತಿವಾದಿ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಅಗಸೆಯನ್ನು ಸರಬರಾಜು ಮಾಡದ ಕಾರಣ ಫಿರ್ಯಾದಿ ಕಂಪೆನಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಫಿರ್ಯಾದಿಯು ಒಪ್ಪಂದದ ಉಲ್ಲಂಘನೆಗಾಗಿ ಬಡ್ಡಿ ಮತ್ತು ದಂಡದ ಮೊತ್ತ ಸೇರಿ $82,200.21 ಹಣ ನೀಡುವಂತೆ ಕೋರಿದ್ದರು.  ಆದರೆ ಸಹಿ ಮಾಡಿದ ಒಪ್ಪಂದದ ಯಾವುದೇ ಟಿಪ್ಪಣಿ ಅಥವಾ ಜ್ಞಾಪಕಪತ್ರವಿಲ್ಲ ಎಂಬುದು ಪ್ರತಿವಾದಿ ಕಂಪೆನಿಯ ವಾದವಾಗಿತ್ತು.

ಇದನ್ನು ಒಪ್ಪದ ಫಿರ್ಯಾದಿ ಕಂಪೆನಿ ತನ್ನ ಪ್ರತಿನಿಧಿ ಸಹಿ ಮಾಡಿದ ಒಪ್ಪಂದದ ಚಿತ್ರವನ್ನು ಪ್ರತಿವಾದಿ ಕಂಪೆನಿಗೆ ಕಳಿಸಿಕೊಟ್ಟಿರುವುದಾಗಿ ತಿಳಿಸಿತು. ಒಪ್ಪಂದದ ಚಿತ್ರಕ್ಕೆ ಪ್ರತಿಕ್ರಿಯಿಸಿದ್ದ ಪ್ರತಿವಾದಿ ಕಂಪೆನಿಯ ಪ್ರತಿನಿಧಿ ಥಮ್ಸ್‌ಅಪ್‌ ಎಮೋಜಿ ಕಳಿಸಿದ್ದಾರೆ ಎಂದು ವಾದಿಸಿತು. ಆದರೂ ಒಪ್ಪಂದದ ಸ್ವೀಕೃತಿಯನ್ನಷ್ಟೇ ಎಮೋಜಿ ದೃಢಪಡಿಸಿದೆ ಎಂದು ಪ್ರತಿವಾದಿ ಹೇಳಿಕೊಂಡಿದ್ದರು.

ಪ್ರಕರಣ ನಿರ್ಧರಿಸಲು, ನ್ಯಾಯಾಲಯ ಎಮೋಜಿ ಕುರಿತಂತೆ ನಿಘಂಟಿನಲ್ಲಿರುವ ಅರ್ಥವನ್ನು ಮತ್ತು ದೈನಂದಿನ ಬಳಕೆಯಿಂದ ನ್ಯಾಯಾಧೀಶರ ಸ್ವಂತ ತಿಳುವಳಿಕೆಯ ಆಧಾರದಲ್ಲಿ ಪರಿಶೀಲಿಸಿತು. ಎಮೋಜಿಯು ಅನುಮೋದನೆ  ವ್ಯಕ್ತಪಡಿಸಿದೆ ಎಂದು ನ್ಯಾಯಾಧೀಶರು ಅಂತಿಮವಾಗಿ ಕಂಡುಕೊಂಡರು.

ಈ ಹಿನ್ನೆಲೆಯಲ್ಲಿ ಮಾನ್ಯಗೊಂಡ ಒಪ್ಪಂದ ಅಸ್ತಿತ್ವದಲ್ಲಿದ್ದು ಅದನ್ನು ಪ್ರತಿವಾದಿ ಕಂಪೆನಿ ಉಲ್ಲಂಘಿಸಿದೆ. ಈ ಉಲ್ಲಂಘನೆಗಾಗಿ ಫಿರ್ಯಾದುದಾರರಿಗೆ ಪ್ರತಿವಾದಿ ಕಂಪೆನಿ  $82,200.21 ಮೊತ್ತದ ಹಾನಿಯನ್ನು ಭರಿಸಿಕೊಡಬೇಕು ಎಂದು ತಿಳಿಸಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

South_West_Terminal_Ltd_v_Achter_Land___Cattle_Ltd.pdf
Preview