Allahabad High Court, Media  
ಸುದ್ದಿಗಳು

ಬೆದರಿಕೆ, ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಪತ್ರಕರ್ತರ ಪರವಾನಗಿ ರದ್ದುಗೊಳಿಸಿ: ಅಲಾಹಾಬಾದ್ ಹೈಕೋರ್ಟ್

Bar & Bench

ಪತ್ರಿಕೋದ್ಯಮದ ಸೋಗಿನಲ್ಲಿ ಬೆದರಿಕೆ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಪತ್ರಕರ್ತರ ಪರವಾನಗಿ ರದ್ದುಗೊಳಿಸಬೇಕು ಎಂದು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಪುನೀತ್ ಮಿಶ್ರಾ ಅಲಿಯಾಸ್ ಪುನೀತ್ ಕುಮಾರ್ ಮಿಶ್ರಾ ಮತ್ತಿತರರು ಹಾಗೂ ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಐಪಿಸಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ- 1989ರ ವಿವಿಧ ಸೆಕ್ಷನ್‌ಗಳಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಮತ್ತು ಪತ್ರಿಕೆ ವಿತರಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಲು ನಿರಾಕರಿಸಿದ ನ್ಯಾಯಮೂರ್ತಿ ಶಮೀಮ್ ಅಹ್ಮದ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಪತ್ರಿಕೆಗಳಲ್ಲಿ ತಮ್ಮ ವಿರುದ್ಧ ಲೇಖನ ಪ್ರಕಟಿಸಲಾಗುತ್ತದೆ ಎಂದು ಬೆದರಿಕೆಯೊಡ್ಡುವ ಹಾಗು ವ್ಯಕ್ತಿತ್ವ ಹರಣ ಮಾಡುವ ತಂಡವೊಂದು ಉತ್ತರ ಪ್ರದೇಶದಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿಗಳಿಗೆ ಪರಿಹಾರ ನಿರಾಕರಿಸಿತು.

ವಿಷಯ ತುಂಬಾ ಗಂಭೀರವಾಗಿದ್ದು ಸರ್ಕಾರಿ ವ್ಯವಸ್ಥೆ ಈ ಬಗ್ಗೆ ಗಮನ ಹರಿಸಬೇಕು. ಪತ್ರಕರ್ತರು ಪರವಾನಗಿಯ ಸೋಗಿನಲ್ಲಿ ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗಿದ್ದರೆ ಅವರ ಪರವಾನಗಿ ರದ್ದುಗೊಳಿಸಬೇಕು ಎಂದು ಅದು ಹೇಳಿತು.

ಅಕ್ರಮವಾಗಿ ಮರ ಕಡಿಯುವ ಕುರಿತು ಸುದ್ದಿ ಪ್ರಕಟಿಸಿದ್ದರಿಂದ ತಮ್ಮ ಮೇಲೆ ಆರೋಪ ಹೊರಿಸಲಾಗಿದೆ. ಪ್ರಕರಣದ ಸೂಕ್ತ ತನಿಖೆ ನಡೆಸದೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಎಸ್‌ಸಿ, ಎಸ್‌ಟಿ ಕಾಯಿದೆಯಡಿ ಯಾವುದೇ ಅಪರಾಧ ಎಸಗಿಲ್ಲ ಎಂದು ಪತ್ರಕರ್ತ ಹಾಗೂ ಪತ್ರಿಕಾ ವಿತರಕರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಆದರೆ ಅಪರಾಧ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು ಪತ್ರಕರ್ತರು ವಾರ್ತಾ ಇಲಾಖೆ ನೀಡುವ ಪರವಾನಗಿಯನ್ನು ಹೈಕೋರ್ಟ್‌ಗೆ ಸಲ್ಲಿಸಲು ವಿಫಲವಾಗಿದ್ದಾರೆ ಎಂದು ಸರ್ಕಾರ ವಾದಿಸಿತು.

ವಾದ ಪುರಸ್ಕರಿಸಿದ ನ್ಯಾಯಾಲಯ ಮೇಲ್ನೋಟಕ್ಕೆ ಸಂಜ್ಞೇಯ ಅಪರಾಧ ಎಸಗಿರುವುದು ಸಾಬೀತಾಗಿರುವುದರಿಂದ ಪ್ರಕರಣದಲ್ಲಿ ಮಧ್ಯಪ್ರವೇಶಿಸುವ ಅವಶ್ಯಕತೆ ಇಲ್ಲ ಎಂದಿತು.