Allahabad HC (Lucknow bench) with Election Commission of India  
ಸುದ್ದಿಗಳು

ಚುನಾವಣೇತರ ಸಂದರ್ಭದಲ್ಲಿ ಜಾತಿಯಾಧಾರಿತ ಸಮಾವೇಶ ನಿರ್ಬಂಧಿಸಲಾಗದು: ಅಲಾಹಾಬಾದ್‌ ಹೈಕೋರ್ಟ್‌ಗೆ ಆಯೋಗದ ವಿವರಣೆ

ಜಾತಿಯಾಧಾರಿತವಾಗಿ ಸಮಾವೇಶ ಸಂಘಟಿಸುವ ರಾಜಕೀಯ ಪಕ್ಷಗಳನ್ನು ನಿಷೇಧಿಸುವುದಲ್ಲದೇ ಅವುಗಳನ್ನು ಪಟ್ಟಿಯಿಂದ ಕೈಬಿಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.

Bar & Bench

ಚುನಾವಣೇತರ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಆಯೋಜಿಸುವ ಜಾತಿಯಾಧಾರಿತ ಸಮಾವೇಶ ಸಂಘಟಿಸುವುದನ್ನು ನಿರ್ಬಂಧಿಸುವ ವ್ಯಾಪ್ತಿಯನ್ನು ತಾನು ಹೊಂದಿಲ್ಲ ಎಂದು ಈಚೆಗೆ ಭಾರತೀಯ ಚುನಾವಣಾ ಆಯೋಗವು ಅಲಾಹಾಬಾದ್‌ ಹೈಕೋರ್ಟ್‌ಗೆ ತಿಳಿಸಿದೆ.

ಜಾತಿಯಾಧಾರಿತವಾಗಿ ರಾಜಕೀಯ ಪಕ್ಷಗಳು ಸಂಘಟಿಸುವ ಸಮಾವೇಶಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವಂತೆ ಕೋರಿ 2013ರಲ್ಲಿ ಮೋತಿ ಲಾಲ್‌ ಯಾದವ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯವು ನಡೆಸಿತು.

ರಾಜಕೀಯ ಪಕ್ಷಗಳು ಮೇಲಿಂದ ಮೇಲೆ ಜಾತಿಯಾಧಾರಿತ ಸಭೆಗಳು ನಡೆಸುವುದನ್ನು ನಿಷೇಧಿಸಲಾಗದು ಎಂದು ಇಸಿಐ ಆಕ್ಷೇಪಣೆಯಲ್ಲಿ ತಿಳಿಸಿದೆ. ಜಾತಿಯಾಧಾರಿತವಾಗಿ ಸಮಾವೇಶ ಸಂಘಟಿಸುವ ರಾಜಕೀಯ ಪಕ್ಷಗಳನ್ನು ನಿಷೇಧಿಸುವುದಲ್ಲದೇ ಅವುಗಳನ್ನು ಪಟ್ಟಿಯಿಂದ ಕೈಬಿಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ಕಳೆದ ವರ್ಷ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದಿದ್ದಾಗ ನ್ಯಾಯಾಲಯವು ಇಸಿಐ ಮತ್ತು ವಿವಿಧ ರಾಜಕೀಯ ಪಕ್ಷಗಳಿಗೆ ಹೊಸದಾಗಿ ನೋಟಿಸ್‌ ಜಾರಿ ಮಾಡಿತ್ತು. ಉತ್ತರ ಪ್ರದೇಶ ರಾಜ್ಯದಾದ್ಯಂತ ಎಲ್ಲಾ ಜಾತಿ ಆಧಾರಿತ ಸಮಾವೇಶಗಳನ್ನು ನಿಷೇಧಿಸಲು ನ್ಯಾಯಾಲಯವು ಮಧ್ಯಂತರ ಆದೇಶ ಮಾಡಿತ್ತು.

ಚುನಾವಣೇತರ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಜಾತಿಯ ಆಧಾರದ ಮೇಲೆ ಸಭೆ ಅಥವಾ ಸಮಾವೇಶ ನಡೆಸುವುದಕ್ಕೆ ನಿರ್ಬಂಧ ಹೇರಲು ತನಗೆ ವ್ಯಾಪ್ತಿ ಇಲ್ಲ ಎಂದು ಇಸಿಐ ಹಾಲಿ ಆಕ್ಷೇಪಣೆ ಸಲ್ಲಿಸಿದೆ. ಕೋಮು, ಜಾತಿ, ಧರ್ಮದ ಆಧಾರದಲ್ಲಿ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ರೂಪಿಸಿರುವುದಾಗಿ ಆಯೋಗವು ಇದೇ ವೇಳೆ ನ್ಯಾಯಾಲಯಕ್ಕೆ ತಿಳಿಸಿದೆ. ಚುನಾವಣೆಯ ಅವಧಿಯ ಹೊರತಾಗಿ ಉಲ್ಲಂಘನೆಗೆ ಸಂಬಂಧಿಸಿದಂತೆ ತಾನು ಕ್ರಮಕೈಗೊಳ್ಳಲಾಗದು ಎಂದು ಇಸಿಐ ತಿಳಿಸಿದೆ.

ನೀತಿ ಸಂಹಿತೆ ಜಾರಿಯಾದ ಬಳಿಕ ಚುನಾವಣೆಯ ಸಂದರ್ಭದಿಂದ ಮತದಾನದ ಅಂತ್ಯದವರೆಗೆ ಜಾತಿಯಾಧಾರಿತವಾಗಿ ಮತ ಕೇಳುವ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಅವರ ಏಜೆಂಟ್‌ಗಳ ವಿರುದ್ಧ ಆಯೋಗವು ಕ್ರಮಕೈಗೊಳ್ಳಬಹುದು ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.