ಗಂಭೀರ ಅಪರಾಧದ ಆರೋಪಪಟ್ಟಿಯಲ್ಲಿರುವ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲಾಗದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ [ಅಶ್ವಿನಿ ಉಪಾಧ್ಯಾಯ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ನ್ಯಾಯಾಲಯ ಸ್ವತಃ ಇಂತಹ ಘೋಷಣೆ ಹೊರಡಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರನ್ನೊಳಗೊಂಡ ಪೀಠ ಹೇಳಿದೆ.
ಆದರೂ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಯ ವಿರುದ್ಧ ಪ್ರತಿ-ಅಫಿಡವಿಟ್ ಸಲ್ಲಿಸುವಂತೆ ಪೀಠ, ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತು. ಅರ್ಜಿಯ ಮುಂದಿನ ವಿಚಾರಣೆ ಜುಲೈ 31 ರಂದು ನಡೆಯಲಿದೆ.
ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಸಂಜಯ್ ಜೈನ್ ಅವರು “ಅಪರಾಧ ಸಾಬೀತಾಗುವ ತನಕವೂ ಆರೋಪಿ ನಿರಪರಾಧಿಯಾಗಿದ್ದು ಆರೋಪ ನಿಗದಿಪಡಿಸಿದ ಬಳಿಕವೂ ಸ್ಪರ್ಧಿಸಬಹುದಾಗಿದೆ” ಎಂದು ತಿಳಿಸಿದರು. ಸಿಆರ್‌ಪಿಸಿಯ ಶಾಸನಾತ್ಮಕ ಸ್ವರೂಪವು ಅರ್ಜಿದಾರರಿಗೆ ತಮ್ಮ ವಾದವನ್ನು ಪ್ರಸ್ತುತಪಡಿಸಲು ಹಲವು ಅವಕಾಶಗಳನ್ನು ನೀಡಲಿದ್ದು ಇದಕ್ಕೆ ನ್ಯಾಯಾಲಯದ ಆದೇಶ ಸೂಕ್ತವಲ್ಲ” ಎಂದು ಎಎಸ್‌ಜಿ ಹೇಳಿದರು.
ಆಗ ಪೀಠ “ಅರ್ಜಿಯ ಮುಖ್ಯ ಮನವಿಗಳನ್ನು ಆಲಿಸುವ ಮೊದಲು ನಾವು ಗಂಭೀರ ಅಪರಾಧಗಳು ಯಾವುವು ಎಂದು ಮೊದಲು ಗುರುತಿಸಬೇಕಾಗುತ್ತದೆ” ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತು.
ಭಾರತೀಯ ಚುನಾವಣಾ ಆಯೋಗದ ಪರ ವಕೀಲರು, ಚುನಾವಣಾ ಚಿಹ್ನೆಗಳ ಆದೇಶ ಕಾಯಿದೆಯ ತಿದ್ದುಪಡಿಯನ್ನು ಕೋರುವ ಅರ್ಜಿದಾರರ ಮನವಿಗೆ ಸಂಬಂಧಿಸಿದಂತೆ ಪ್ರತಿ ಅಫಿಡವಿಟ್ ಸಲ್ಲಿಸಲಾಗಿದೆ” ಎಂದು ತಿಳಿಸಿದರು.
ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಯಲ್ಲಿ ನಮ್ಮಲ್ಲಿ ಕ್ರಿಮಿನಲ್ ಆರೋಪವಿರುವ ಶೇಕಡಾ 43 ಸಂಸದರಿದ್ದಾರೆ. ನಾವು ಪರೋಕ್ಷವಾಗಿ ರಾಜಕೀಯ ಪಕ್ಷಗಳಿಂದ ಆಳಲ್ಪಡುತ್ತಿದ್ದೇವೆಯೇ ಹೊರತು ಸರ್ಕಾರದಿಂದಲ್ಲ. ಎಲ್ಲವನ್ನೂ ಪಕ್ಷಗಳು ನಿರ್ಧರಿಸುತ್ತವೆ ಎಂದಿದ್ದರು.
2017ರಲ್ಲಿ ಉಪಾಧ್ಯಾಯ ಅವರ ಇದೇ ರೀತಿಯ ಮತ್ತೊಂದು ಮನವಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿತ್ತು. ಶಿಕ್ಷೆಗೊಳಗಾದ ವ್ಯಕ್ತಿಗಳು ರಾಜಕೀಯ ಪಕ್ಷಗಳನ್ನು ಸ್ಥಾಪಿಸಿ ಅವುಗಳ ಪದಾಧಿಕಾರಿಗಳಾಗುವುದನ್ನು ನಿಷೇಧಿಸಬೇಕೆಂದು ಆ ಮನವಿಯು ಕೋರಿತ್ತು.