Supreme Court and Justice V Srishananda 
ಸುದ್ದಿಗಳು

ಭಾರತದ ಯಾವುದೇ ಭಾಗವನ್ನು ಪಾಕಿಸ್ತಾನ ಎನ್ನುವಂತಿಲ್ಲ: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹೇಳಿಕೆಗೆ ಸುಪ್ರೀಂ ಆಕ್ಷೇಪ

ಆದರೆ ಹೈಕೋರ್ಟ್ ನ್ಯಾಯಮೂರ್ತಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ ಎಂಬ ಅಂಶ ಗಮನಿಸಿದ ಪೀಠ ತಾನು ಹೂಡಿದ್ದ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ಮುಕ್ತಾಯಗೊಳಿಸಿತು.

Bar & Bench

ಬೆಂಗಳೂರಿನ ನಿರ್ದಿಷ್ಟ ಪ್ರದೇಶವೊಂದನ್ನು 'ಪಾಕಿಸ್ತಾನ' ಎಂದಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ತಮ್ಮ ವೈಯಕ್ತಿಕ ಪೂರ್ವಾಗ್ರಹಗಳು ತಮ್ಮ ಕರ್ತವ್ಯದ ಮೇಲೆ ಪ್ರತಿಫಲಿಸದಂತೆ ವಕೀಲರು ಮತ್ತು ನ್ಯಾಯಾಧೀಶರುಗಳು ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಸೂರ್ಯಕಾಂತ್ ಹಾಗೂ ಹೃಷಿಕೇಶ್ ರಾಯ್ ಅವರಿದ್ದ ಐವರು ಸದಸ್ಯರ ಪೀಠ ಕಿವಿ ಹಿಂಡಿತು.

"ನಾವು ಭಾರತದ ಭೂಪ್ರದೇಶದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯಲು ಸಾಧ್ಯವಿಲ್ಲ. ಏಕೆಂದರೆ ಅದು ಮೂಲಭೂತವಾಗಿ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೆ ವಿರುದ್ಧ" ಎಂದು ಪೀಠ ಹೇಳಿದೆ.

ಆದರೆ ಹೈಕೋರ್ಟ್ ನ್ಯಾಯಮೂರ್ತಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ ಎಂಬ ಅಂಶ ಗಮನಿಸಿದ ಪೀಠ ತಾನು ಹೂಡಿದ್ದ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ಮುಕ್ತಾಯಗೊಳಿಸಿತು.

ಲಿಂಗ ಅಥವಾ ಸಮುದಾಯಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ಸಾಂದರ್ಭಿಕವಾಗಿ ನೀಡುವ ಹೇಳಿಕೆಗಳು ವೈಯಕ್ತಿಕ ಪಕ್ಷಪಾತದಿಂದ ನೀಡಿದ ಹೇಳಿಕೆ ಎಂದು ಗ್ರಹಿಸಬಹುದು. ಹೀಗಾಗಿ ಪುರುಷ ಪ್ರಧಾನ ಅಥವಾ ಸ್ತ್ರೀ ದ್ವೇಷದ ಹೇಳಿಕೆ ನೀಡುವಾಗ ಜಾಗರೂಕರಾಗಿರಬೇಕು. ನಿರ್ದಿಷ್ಟ ಲಿಂಗ ಅಥವಾ ಸಮುದಾಯದ ಮೇಲಿನ ಅವಲೋಕನಗಳ ಬಗ್ಗೆ ನಗಮೆ ಗಂಭೀರ ಕಳವಳ ಇದೆ.  ಅಂತಹ ಅವಲೋಕನಗಳನ್ನು ನಕಾರಾತ್ಮಕವಾಗಿ ಅರ್ಥೈಸಿಕೊಳ್ಳಬಹುದಾಗಿದೆ. ನ್ಯಾಯಿಕ ಪ್ರಕ್ರಿಯೆಯಲ್ಲಿನ ಎಲ್ಲಾ ಭಾಗೀದಾರರು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಪಕ್ಷಪಾತವಿಲ್ಲದೆ,ಎಚ್ಚರಿಕೆಯಿಂದ ನಿರ್ವಹಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂಬುದಾಗಿ ನ್ಯಾಯಾಲಯ ಹೇಳಿದೆ.

ಸಾಮಾಜಿಕ ಮಾಧ್ಯಮದ ಯುಗದಲ್ಲಿ, ನ್ಯಾಯಾಧೀಶರ ಯಾವುದೇ ಅವಲೋಕನಗಳು ವ್ಯಾಪಕ ಪರಿಣಾಮ ಬೀರುವುದರಿಂದ ನ್ಯಾಯಾಧೀಶರು ತಮ್ಮ ಮನೋಧೋರಣೆಗಳನ್ನು ಅರಿತಿರಬೇಕು. ಇದರಿಂದ ಅವರು ನಿಷ್ಪಕ್ಷಪಾತವಾಗಿ ನ್ಯಾಯ ನೀಡಬಹುದು ಎಂದು ನ್ಯಾಯಾಲಯ ಮನವರಿಕೆ ಮಾಡಿಕೊಟ್ಟಿತು.

ನ್ಯಾಯಾಲಯ ಕಲಾಪಗಳು ನೇರಪ್ರಸಾರವಾಗುವುದನ್ನು ಪ್ರಸ್ತಾಪಿಸಿದ ನ್ಯಾಯಾಲಯ ಎಲ್ಲಾ ಕಕ್ಷಿದಾರರು, ನ್ಯಾಯಾಧೀಶರು, ವಕೀಲರು, ದಾವೆದಾರರು ನ್ಯಾಯಾಲಯದ ಭೌತಿಕ ಎಲ್ಲೆ ಮೀರಿದ ಪ್ರೇಕ್ಷಕರನ್ನು ತಲುಪುತ್ತದೆ ಎಂದು ತಿಳಿದಿರಬೇಕು. ಹೀಗಾಗಿ ಸಮುದಾಯದ ಮೇಲೆ ಅವಲೋಕನ ಮಾಡುವಾಗ ಅದು ಬೀರುವ ವ್ಯಾಪಕ ಪ್ರಭಾವದ ಬಗ್ಗೆ ಎಲ್ಲರೂ ಅರಿತಿರಬೇಕು.

ಪ್ರತಿಯೊಬ್ಬ ವ್ಯಕ್ತಿಯು ಜೀವನದ ಅನುಭವಗಳ ಆಧಾರದ ಮೇಲೆ ತಮ್ಮದೇ ಆದ ಮನೋಧೋರಣೆಗಳನ್ನು ಹೊಂದಿರುವ ಬಗ್ಗೆ ನ್ಯಾಯಾಧೀಶರಾಗಿ ನಮಗೆ ಅರಿವಿರುತ್ತದೆ. ನ್ಯಾಯಾಧೀಶರು ತಮ್ಮ ಸ್ವಂತ ಮನೋಧೋರಣೆಗಳ ಬಗ್ಗೆ ತಿಳಿದಿರುವುದು ಮುಖ್ಯ. ನ್ಯಾಯಾಧೀಶರು ನಿಷ್ಪಕ್ಷಪಾತವಾಗಿದ್ದಾಗ ಮಾತ್ರ ನಾವು ವಸ್ತುನಿಷ್ಠ ನ್ಯಾಯವನ್ನು ನೀಡಬಹುದು ಎಂದು ಸರ್ವೋಚ್ಚ ನ್ಯಾಯಾಲಯ ತಿಳಿ ಹೇಳಿತು.

ನ್ಯಾಯಾಂಗ ನಿರ್ಧಾರ ಕೈಗೊಳ್ಳುವಂತಹ ಮಾರ್ಗದರ್ಶಿ  ಮೌಲ್ಯಗಳು  ಸಂವಿಧಾನದಲ್ಲಿ ಮಾತ್ರವೇ ಇರುತ್ತವೆ ಎಂಬುದನ್ನು ನ್ಯಾಯಾಂಗದ ಎಲ್ಲಾ ಪಾಲುದಾರರು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಪೀಠವು ಒತ್ತಿಹೇಳಿತು.

 “ಮುಸ್ಲಿಂ ಬಾಹುಳ್ಯ ಪ್ರದೇಶವಾದ (ಬೆಂಗಳೂರಿನ) ಗೋರಿಪಾಳ್ಯದ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹೆದರುತ್ತಿದ್ದಾರೆ. ಅದು ಪಾಕಿಸ್ತಾನದಲ್ಲಿದೆ...” ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಕಳೆದ ಆಗಸ್ಟ್‌ 28ರಂದು ಹೇಳಿದ್ದರು. ಅಲ್ಲದೆ ಮತ್ತೊಂದು ವೀಡಿಯೊದಲ್ಲಿ ಪ್ರತಿವಾದಿ ವಕೀಲರೊಬ್ಬರಿಗೆ ಪ್ರಶ್ನೆ ಕೇಳುತ್ತಿದ್ದಾಗ ಮಧ್ಯಪ್ರವೇಶಿಸಿದ ಮಹಿಳಾ ವಕೀಲರೊಬ್ಬರನ್ನು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡಿದ್ದರು. “ಅವರ ಬಗ್ಗೆ (ಎದುರು ಪಕ್ಷ) ನಿಮಗೆ ಪೂರ್ತಿ ಗೊತ್ತಿದೆ ! ನಾಳೆ ಬೆಳಿಗ್ಗೆ ಕೇಳಿದರೆ ಇನ್ನೇನಾದರೂ ಹೇಳುತ್ತೀರಿ. ಯಾವ ಬಣ್ಣದ ಒಳ ಉಡುಪು ಧರಿಸಿದ್ದಾರೆ ಎಂದೂ ಹೇಳುತ್ತೀರಿ” ಎಂದು ವಕೀಲೆಯನ್ನು ಉದ್ದೇಶಿಸಿ ತಮಾಷೆ ಮಾಡಿದ್ದರು.