Rahul Gandhi Facebook
ಸುದ್ದಿಗಳು

ಸಾವರ್ಕರ್‌ ಕುರಿತ ಹೇಳಿಕೆ: ಭಾಷಣದಲ್ಲಿ ಉಲ್ಲೇಖಿಸಿದ ಪುಸ್ತಕವನ್ನು ಹಾಜರುಪಡಿಸಲು ರಾಹುಲ್‌ಗೆ ಹೇಳಲಾಗದು ಎಂದ ನ್ಯಾಯಾಲಯ

ತನ್ನ ವಿರುದ್ಧದ ದೋಷಾರೋಪಣೆಯ ವಸ್ತುಗಳನ್ನು ತಾನೇ ಹಾಜರುಪಡಿಸುವಂತೆ ಆರೋಪಿಯನ್ನು ಒತ್ತಾಯಿಸಲಾಗದು ಎಂದು ತಿಳಿಸಿದ ನ್ಯಾಯಾಲಯ.

Bar & Bench

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಹಿಂದುತ್ವವಾದಿ ನಾಯಕ ವಿನಾಯಕ ದಾಮೋದರ್ ಸಾವರ್ಕರ್ ವಿರುದ್ಧ 2023 ರಲ್ಲಿ ಮಾಡಿದ ಭಾಷಣದ ವೇಳೆ ಉಲ್ಲೇಖಿಸಿದ ಪುಸ್ತಕವನ್ನು ಹಾಜರುಪಡಿಸುವಂತೆ ಒತ್ತಾಯಿಸಲು ನಿರ್ದೇಶನವನ್ನು ಕೋರಿ ಸಲ್ಲಿಸಿದ ಅರ್ಜಿಯನ್ನು ಪುಣೆಯ ವಿಶೇಷ ಸಂಸದ/ಶಾಸಕರ ನ್ಯಾಯಾಲಯವು ಗುರುವಾರ ತಿರಸ್ಕರಿಸಿದೆ [ಸಾತ್ಯಕಿ ಸಾವರ್ಕರ್ vs ರಾಹುಲ್ ಗಾಂಧಿ].

ಸಾವರ್ಕರ್‌ ಕುರಿತಾದ ರಾಹುಲ್‌ ಹೇಳಿಕೆಯ ವಿರುದ್ಧ ಸಾವರ್ಕರ್‌ ಅವರ ಮೊಮ್ಮಗ ಸಾತ್ಯಕಿ ಅವರು ಮಾನಹಾನಿ ಮೊಕದ್ದಮೆ ಹೂಡಿದ್ದಾರೆ. ಈ ಪ್ರಕರಣದ ಕುರಿತ ವಿಚಾರಣೆ ನಡೆಸಿದ ಸಂಸದ/ಶಾಸಕರ ಕುರಿತಾದ ಪ್ರಕರಣ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಅಮೋಲ್ ಶಿಂಧೆ ಅವರು, ರಾಹುಲ್‌ ಗಾಂಧಿಯವರು ಭಾಷಣದಲ್ಲಿ ಉಲ್ಲೇಖಿಸಿರುವ ಪುಸ್ತಕವನ್ನು ಹಾಜರುಪಡಿಸುವಂತೆ ಒತ್ತಾಯಿಸಲಾಗುವುದಿಲ್ಲ ಎಂದರು.

“ಆರೋಪಿಗೆ ದೂರುದಾರರು ಕೋರಿದ ದಾಖಲೆ/ಪುಸ್ತಕವನ್ನು ಹಾಜರುಪಡಿಸುವಂತೆ ಒತ್ತಾಯಿಸಲಾಗುವುದಿಲ್ಲ. ಭಾರತದ ಸಂವಿಧಾನದ 20(3) ನೇ ವಿಧಿಯ ಪ್ರಕಾರ, ಯಾವುದೇ ಅಪರಾಧದ ಆರೋಪ ಹೊತ್ತಿರುವ ಯಾವುದೇ ವ್ಯಕ್ತಿಯನ್ನು ತನ್ನ ವಿರುದ್ಧ ತಾನೇ ಸಾಕ್ಷಿಯಾಗಲು ಒತ್ತಾಯಿಸಲಾಗುವುದಿಲ್ಲ. ಆದ್ದರಿಂದ, ಆರೋಪಿಯು ದೋಷಾರೋಪಣೆ ದಾಖಲೆಗಳನ್ನು ಸಲ್ಲಿಸುವಂತೆ ನಿರ್ದೇಶಿಸುವ ಆದೇಶವನ್ನು ಹೊರಡಿಸಲಾಗುವುದಿಲ್ಲ,” ಎಂದು ನ್ಯಾಯಾಲಯ ಹೇಳಿದೆ.

ಮಾರ್ಚ್ 2023 ರಲ್ಲಿ ಲಂಡನ್‌ನಲ್ಲಿ ಭಾಷಣ ಮಾಡುವಾಗ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳನ್ನು ಆಕ್ಷೇಪಿಸಿ ವಿನಾಯಕ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಸಾವರ್ಕರ್ ಅವರ ಬರಹಗಳಲ್ಲಿ ವಿವರಿಸಲಾಗಿದೆ ಎನ್ನಲಾದ ಘಟನೆಯನ್ನು ರಾಹುಲ್‌ ಉಲ್ಲೇಖಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಪುಸ್ತಕದಲ್ಲಿ ಸಾವರ್ಕರ್‌ ಅವರು ಒಮ್ಮೆ ತಾನು ಮತ್ತು ತನ್ನ ಸಂಗಡಿಗರು ಓರ್ವ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾಗಿಯೂ, ಅದೊಂದು "ಆಹ್ಲಾದಕರ" ಅನುಭವವಾಗಿತ್ತು ಎಂದು ಹೇಳಿದ್ದಾರೆ ಎಂದು ರಾಹುಲ್‌ ಉಲ್ಲೇಖಿಸಿದರು ಎಂದು ವರದಿಯಾಗಿತ್ತು.

ಆದರೆ, ಇಂತಹ ಯಾವುದೇ ಘಟನೆಯ ಉಲ್ಲೇಖ ಸಾವರ್ಕರ್ ಅವರ ಯಾವುದೇ ಕೃತಿಗಳಲ್ಲಿ ಇಲ್ಲ ಎಂದು ಸಾತ್ಯಕಿ ಅವರು ಹೇಳಿದ್ದು, ರಾಹುಲ್‌ ಹೇಳಿಕೆ ಸುಳ್ಳು ಹಾಗೂ ಮಾನಹಾನಿಕರ ಎಂದು ಆರೋಪಿಸಿದ್ದರು.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್‌) ಸೆಕ್ಷನ್ 94 ರ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ, ಸಾತ್ಯಕಿ ಅವರು ರಾಹುಲ್‌ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾದ ಪುಸ್ತಕವನ್ನು ಹಾಜರುಪಡಿಸಲು ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು.

ಅರ್ಜಿಯನ್ನು ವಿರೋಧಿಸಿದ ರಾಹುಲ್‌ ಪರ ವಕೀಲರು, ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ. ಸಮರ್ಥನೆಯ ಭಾಗವಾಗಿರುವ ವಿಷಯವನ್ನು ಬಹಿರಂಗಪಡಿಸುವಂತೆ ಅಥವಾ ಸಲ್ಲಿಸುವಂತೆ ಆರೋಪಿಯನ್ನು ಒತ್ತಾಯಿಸಲಾಗದು ಎಂದು ವಾದಿಸಿದರು. ಮುಂದುವರೆದು, ಪುರಾವೆಯ ಹೊರೆ ದೂರುದಾರರ ಮೇಲಿದೆ. ಆರೋಪಿಗೆ ದಾಖಲೆಗಳನ್ನು ಹಾಜರುಪಡಿಸುವಂತೆ ಒತ್ತಾಯಿಸುವುದು ಸ್ವಯಂ-ಅಪರಾಧದಿಂದ ರಕ್ಷಿಸುವ ಸಂವಿಧಾನದ 20(3) ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಆಕ್ಷೇಪಿಸಿದರು.

ಸಾತ್ಯಕಿ ಪರ ವಕೀಲರು, ರಾಹುಲ್‌ ಗಾಂಧಿಯವರ ಸುಳ್ಳುತನವನ್ನು ಸಾಬೀತುಪಡಿಸುವಲ್ಲಿ ಪುಸ್ತಕವು ಪ್ರಮುಖವಾಗಿದೆ. ಪ್ರತಿವಾದಿಗಳು ವಿಳಂಬ ತಂತ್ರಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯವು ರಾಹುಲ್‌ ಗಾಂಧಿಯವರ ಪರವಾಗಿ ತೀರ್ಪು ನೀಡಿತು. ದೂರುದಾರರು ಕೋರಿರುವ ನಿರ್ದೇಶನವು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿತು. "ಆಕ್ಷೇಪಿತ ದಾಖಲೆಯು ದೋಷಾರೋಪಣೆ ಮಾಡುವಂತಹದ್ದಾಗಿದ್ದು, ಆರೋಪಿಯ ವಿರುದ್ಧ ಅವುಗಳನ್ನು ಹಾಜರುಪಡಿಸಲು ಕೋರಲಾಗಿದೆ. ಆರೋಪಿಯನ್ನು ತನ್ನ ವಿರುದ್ಧ ತಾನೇ ಸಾಕ್ಷಿಯಾಗಲು ಒತ್ತಾಯಿಸಲಾಗುವುದಿಲ್ಲ ಅಥವಾ ತನ್ನ ವಿರುದ್ಧದ ದೋಷಾರೋಪಣೆಯ ವಸ್ತುಗಳನ್ನು ತಾನೇ ಹಾಜರುಪಡಿಸಲು ಒತ್ತಾಯಿಸಲಾಗುವುದಿಲ್ಲ" ಎಂದು ಹೇಳಿದ ನ್ಯಾಯಾಲಯ ದೂರುದಾರರ ಕೋರಿಕೆಯನ್ನು ತಿರಸ್ಕರಿಸಿತು.

ರಾಹುಲ್‌ ಪರವಾಗಿ ವಕೀಲ ಮಿಲಿಂದ್ ಪವಾರ್ ವಾದಿಸಿದರು. ಸಾವರ್ಕರ್ ಪರವಾಗಿ ವಕೀಲ ಸಂಗ್ರಾಮ್ ಕೊಲ್ಹತ್ಕರ್ ವಾದಿಸಿದರು.