Arvind Kejriwal and Satyendar Jain with Delhi hC  
ಸುದ್ದಿಗಳು

ಸಂಪುಟದಿಂದ ಜೈನ್‌ ಕೈಬಿಡಲು ಸೂಚಿಸಲಾಗದು, ಆದರೆ ಸಿಎಂ ಜನರ ನಂಬಿಕೆ ಉಳಿಸುತ್ತಾರೆ ಎಂಬ ಭಾವನೆ ಇದೆ: ದೆಹಲಿ ಹೈಕೋರ್ಟ್

ಕ್ರಿಮಿನಲ್ ಹಿನ್ನೆಲೆಯುಳ್ಳವರು ಸಚಿವರಾಗಿ ಮುಂದುವರಿಯಲು ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ಮುಖ್ಯಮಂತ್ರಿ ಪರಿಗಣಿಸಬೇಕು ಎಂದ ಹೈಕೋರ್ಟ್ ವಿಭಾಗೀಯ ಪೀಠ.

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಸಚಿವ ಸತ್ಯೇಂದರ್‌ ಜೈನ್‌ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ, ಆದರೆ ಮುಖ್ಯಮಂತ್ರಿಗಳು ಸಚಿವರನ್ನು ನೇಮಿಸುವಾಗ ಮತದಾರರು ತಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಎತ್ತಿಹಿಡಿಯುತ್ತಾರೆ ಎಂದು ಭಾವಿಸುವುದಾಗಿ ದೆಹಲಿ ಹೈಕೋರ್ಟ್ ಬುಧವಾರ ಹೇಳಿದೆ.

ಜೈನ್ ಅವರನ್ನು ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಂಧಿಸಿರುವ ಕಾರಣ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಕೋರಿ ನಂದ ಕಿಶೋರ್ ಗಾರ್ಗ್ ಎಂಬವವರು ವಕೀಲ ಶಶಾಂಕ್ ದೇವ್ ಸುಧಿ ಅವರ ಮೂಲಕ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ.

ಅಪರಾಧ ಹಿನ್ನೆಲೆಯ ವ್ಯಕ್ತಿಗಳು ಸಚಿವರಾಗಿ ಮುಂದುವರೆಯಲು ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ಸಿಎಂ ಪರಿಗಣಿಸಬೇಕು ಎಂದು ಪೀಠ ಹೇಳಿದೆ.

ನ್ಯಾಯಾಲಯ ಅವಲೋಕನದ ಪ್ರಮುಖಾಂಶಗಳು

  • ಒಳ್ಳೆಯ ಆಡಳಿತ ಒಳ್ಳೆಯ ಜನರ ಕೈಯಲ್ಲಿ ಮಾತ್ರ ಇದ್ದು ಒಳ್ಳೆಯದು ಅಥವಾ ಕೆಟ್ಟದ್ದು ಯಾವುದೆಂದು ತಾವು ನಿರ್ಣಯಿಸುತ್ತಾ ಕೂರಲು ಸಾಧ್ಯವಿಲ್ಲವಾದರೂ, ಸಂವಿಧಾನದ ನೀತಿಗಳನ್ನು, ರಕ್ಷಿಸುವಂತೆ ಉತ್ತೇಜಿಸುವಂತೆ ಖಂಡಿತವಾಗಿಯೂ ಸಾಂವಿಧಾನಿಕ ಕಾರ್ಯಕರ್ತರಿಗೆ ತಾನು ನೆನಪು ಮಾಡಿಕೊಡುತ್ತೇನೆ ಎಂದಿತು.

  • ಇಂತಹ ಸಾಂವಿಧಾನಿಕ ತತ್ವಗಳಿಂದ ಸಿಎಂಗೆ ಉತ್ತಮ ಸಲಹೆ ಮತ್ತು ಮಾರ್ಗದರ್ಶನ ದೊರೆಯುತ್ತದೆ ಎಂಬ ಭಾವನೆ ಇದೆ.

  • ಸಂಪುಟ ಸದಸ್ಯರ ಆಯ್ಕೆ ಮತ್ತು ಸಚಿವ ಸಂಪುಟ ನೇಮಕಾತಿಗೆ ಸಂಬಂಧಿಸಿದಂತೆ ನೀತಿ ರೂಪಿಸಲು ಮುಖ್ಯಮಂತ್ರಿಗಳು ತಮ್ಮ ವಿವೇಚನೆ ಬಳಸುತ್ತಾರೆ. ಸಚಿವ ಸಂಪುಟವು ಸಂವಿಧಾನದ ಸಮಗ್ರತೆ ಉಳಿಸಿಕೊಳ್ಳುವ ಮತ್ತು ಎತ್ತಿ ಹಿಡಿಯುವ ಸಾಮೂಹಿಕ ಜವಾಬ್ದಾರಿ ಹೊಂದಿದೆ. ಮುಖ್ಯಮಂತ್ರಿಗಳು ರಾಜ್ಯದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು ಮತ್ತು ಅಪರಾಧ ಹಿನ್ನೆಲೆ ಉಳ್ಳವರನ್ನು ಸೇರಿಸಿಕೊಳ್ಳಬೇಕೆ ಬೇಡವೇ ಎಂಬುದನ್ನು ಪರಿಗಣಿಸಬೇಕು. ನೈತಿಕತೆಯ ಬಿಕ್ಕಟ್ಟಿಗೆ ಸಿಲುಕಿರುವವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆ ಸಚಿವರಾಗಿ ಮುಂದುವರಿಸಬೇಕೆ ಬೇಡವೇ ಎಂಬುದನ್ನು ಅವರು ತೀರ್ಮಾನಿಸಬೇಕು.

  • ಕೇಂದ್ರ ಅಥವಾ ರಾಜ್ಯ ಮಟ್ಟದಲ್ಲಿ ಯಾರನ್ನು ಶಾಸಕರನ್ನಾಗಿ ನೇಮಿಸಬೇಕು ಅಥವಾ ಸಚಿವರಾಗಲು ಯಾರು ಅರ್ಹರು ಎಂಬುದರ ಕುರಿತು ವಿಸ್ತೃತ ಮಾರ್ಗಸೂಚಿ ರೂಪಿಸಲು ಅಥವಾ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ.

  • ಪ್ರತಿಜ್ಞಾವಿಧಿ ಉಲ್ಲಂಘಿಸಿದ ವ್ಯಕ್ತಿಯನ್ನು ಪದಚ್ಯುತಗೊಳಿಸುವಂತೆ ರಾಜ್ಯಪಾಲರು ಅಥವಾ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡುವುದು ನ್ಯಾಯಾಲಯದ ಕೆಲಸವಲ್ಲ. ಸಂವಿಧಾನದ 226ನೇ ವಿಧಿ ಪ್ರಕಾರ ರಾಜ್ಯ ಸಚಿವರ ನೇಮಕಾತಿ ರದ್ದುಗೊಳಿಸುವಂತೆ ನಿರ್ದೇಶಿಸಲು ಹೈಕೋರ್ಟ್‌ ಸೂಕ್ತವಲ್ಲ.

  • ಆದರೂ ಸಂವಿಧಾನದ ತತ್ವಗಳನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ವ್ಯಕ್ತಿಗಳ ಪಾತ್ರ ಏನೆಂಬುದನ್ನು ನೆನಪಿಸುವುದು ನ್ಯಾಯಾಲಯದ ಕರ್ತವ್ಯವಾಗಿದೆ.

  • ಸಂವಿಧಾನದ ನಿರ್ಮಾತೃ ಡಾ ಬಿ ಆರ್‌ ಅಂಬೇಡ್ಕರ್‌ ಅವರ ಅವಲೋಕನಕ್ಕೆ ತಾನು ಮನಃಪೂರ್ವಕವಾಗಿ ಸಮ್ಮತಿಸುವುದಾಗಿ ಹೇಳಿದ ಪೀಠವು ಅದರಂತೆ ಜನರನ್ನು ಮುನ್ನಡೆಸುವಂತಹ ವ್ಯಕ್ತಿಗಳನ್ನು ನೇಮಿಸುವಾಗ ಮುಖ್ಯಮಂತ್ರಿಯವರು ಪ್ರತಿನಿಧಿತ್ವದ ಪ್ರಜಾಪ್ರಭುತ್ವದ ಅಡಿಪಾಯವೇ ಆದ ಜನತೆ ತಮ್ಮ ಮೇಲಿರಿಸಿರುವ ನಂಬಿಕೆಯನ್ನು ಎತ್ತಿ ಹಿಡಿಯುತ್ತಾರೆಂದು ಭಾವಿಸುವುದಾಗಿ ಹೇಳಿತು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Dr_Nand_Kishore_Garg_v_Govt_of_NCT_of_Delhi_and_Ors.pdf
Preview