Pregnant woman and Kerala High Court  
ಸುದ್ದಿಗಳು

ಅತ್ಯಾಚಾರಿಯ ಮಗುವಿಗೆ ಜನ್ಮ ನೀಡು ಎಂದು ಸಂತ್ರಸ್ತೆಯನ್ನು ಒತ್ತಾಯಿಸಲು ಸಾಧ್ಯವಿಲ್ಲ: ಕೇರಳ ಹೈಕೋರ್ಟ್

ಮಹಿಳೆಯರು ಅನಗತ್ಯ ಗರ್ಭಧಾರಣೆಗೆ ಬಲವಂತಪಡಿಸಿದರೆ ಉಂಟಾಗುವ ಆಘಾತವನ್ನು ನ್ಯಾಯಾಲಯ ಈ ಸಂದರ್ಭದಲ್ಲಿ ಪ್ರಸ್ತಾಪಿಸಿತು.

Bar & Bench

ಅತ್ಯಾಚಾರದಿಂದ ಧರಿಸಿರುವ ಗರ್ಭವನ್ನು ಅಂತ್ಯಗೊಳಿಸದಂತೆ ಅತ್ಯಾಚಾರ ಸಂತ್ರಸ್ತೆಗೆ ಅನುಮತಿ ನಿರಾಕರಿಸುವುದು ಆಕೆ ಘನತೆಯಿಂದ ಬದುಕುವ ಹಕ್ಕನ್ನು ನಿರಾಕರಿಸುತ್ತದೆ ಎಂದು ಕೇರಳ ಹೈಕೋರ್ಟ್‌ ಈಚೆಗೆ ಹೇಳಿದೆ [XXXXXXXX ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

 ವೈದ್ಯಕೀಯ ಗರ್ಭಪಾತ ಕಾಯಿದೆಯ (ಎಂಟಿಪಿ ಕಾಯಿದೆ) ಸೆಕ್ಷನ್‌ಗಳ ಪ್ರಕಾರ ಅತ್ಯಾಚಾರ ಸಂತ್ರಸ್ತೆ ತನ್ನ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿಯ ಮಗುವಿಗೆ ಜನ್ಮ ನೀಡುವಂತೆ ಒತ್ತಾಯಿಸುವಂತಿಲ್ಲ ಎಂದು ನ್ಯಾಯಮೂರ್ತಿ ಕೌಸರ್ ಎಡಪ್ಪಾಗತ್ ತಿಳಿಸಿದ್ದಾರೆ.

ಗರ್ಭಾವಸ್ಥೆ ಮುಂದುವರೆಸುವುದು ಗರ್ಭಿಣಿಯ ದೈಹಿಕ ಅಥವಾ ಮಾನಸಿಕ ಆರೋಗ್ಯಕ್ಕೆ ಗಂಭೀರ ಹಾನಿ ಉಂಟು ಮಾಡುತ್ತದೆ ಎನ್ನುವುದಾದರೆ ಗರ್ಭಾವಸ್ಥೆ ಕೊನೆಗೊಳಿಸಲು ಎಂಟಿಪಿ ಕಾಯಿದೆಯ ಸೆಕ್ಷನ್ 3(2) ಅನುವು ಮಾಡಿಕೊಡುತ್ತದೆ. ಸೆಕ್ಷನ್‌ 3 (2) ರ ವಿವರಣೆ 2ರಲ್ಲಿ ಅತ್ಯಾಚಾರದಿಂದ ಗರ್ಭ ಧರಿಸಿದ್ದರೆ ಗರ್ಭಾವಸ್ಥೆಯಿಂದ ಉಂಟಾಗುವ ವೇದನೆ ಗರ್ಭಿಣಿಯ ಮಾನಸಿಕ ಆರೋಗ್ಯಕ್ಕೆ ಗಂಭೀರ ಹಾನಿ ಉಂಟಾಗುತ್ತದೆ ಎಂದು ಭಾವಿಸಲಾಗಿರುವುದರಿಂದ ಅತ್ಯಾಚಾರಕ್ಕೊಳಗಾದ ವ್ಯಕ್ತಿ ಲೈಂಗಿಕವಾಗಿ ಆಕ್ರಮಣ ಮಾಡಿದವನ ಮಗುವಿಗೆ ಜನ್ಮ ನೀಡಬೇಕು ಎಂದು ಒತ್ತಾಯಿಸಲು ಸಾಧ್ಯವಿಲ್ಲ.

ಅತ್ಯಾಚಾರ ಸಂತ್ರಸ್ತೆಗೆ ತನ್ನ ಅನಪೇಕ್ಷಿತ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಅಂತ್ಯಗೊಳಿಸಲು ನಿರಾಕರಿಸುವುದು ಆಕೆಯನ್ನು ಮಾತೃತ್ವದ ಹೊಣೆಗಾರಿಕೆಗೆ ಬಲವಂತಪಡಿಸಿದಂತಾಗಲಿದ್ದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಿದ ಜೀವಿಸುವ ಹಕ್ಕಿನ ಮಹತ್ವದ ಭಾಗವಾಗಿರುವ ಘನತೆಯಿಂದ ಬದುಕುವ ಅವಳ ಮಾನವ ಹಕ್ಕನ್ನು ನಿರಾಕರಿಸಿದಂತಾಗುತ್ತದೆ ಎಂದು ನ್ಯಾಯಾಲಯ ನುಡಿದಿದೆ.

ಮಹಿಳೆಯರು ಅನಗತ್ಯ ಗರ್ಭಧಾರಣೆಗೆ ಬಲವಂತಪಡಿಸಿದರೆ ಉಂಟಾಗುವ ಆಘಾತವನ್ನು ನ್ಯಾಯಾಲಯ ಈ ಸಂದರ್ಭದಲ್ಲಿ ಪ್ರಸ್ತಾಪಿಸಿತು. 16 ವರ್ಷದ ಅತ್ಯಾಚಾರ ಸಂತ್ರಸ್ತೆ ತನ್ನ ತಾಯಿಯ ಮೂಲಕ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.

ಬಾಲಕಿ 9ನೇ ತರಗತಿಯಲ್ಲಿ ಓದುತ್ತಿದ್ದಾಗ ಆಕೆಯ 19ರ ಹರೆಯದ ‘ಪ್ರೇಮಿ’ಯಿಂದ ಲೈಂಗಿಕ ಕಿರುಕುಳಕ್ಕೊಳಗಾಗಿ ಗರ್ಭಿಣಿಯಾಗಿದ್ದಳು ಎಂದು ಆರೋಪಿಸಲಾಗಿತ್ತು.

ಎಂಟಿಪಿ ಕಾಯಿದೆ 24 ನೇ ವಾರದವರೆಗಿ ಗರ್ಭಾವಸ್ಥೆಯನ್ನಷ್ಟೇ (ಕೆಲವು ಸಂದರ್ಭಗಳಲ್ಲಿ ಹೊರತುಪಡಿಸಿ) ಮುಕ್ತಾಯಗೊಳಿಸಲು ಅನುಮತಿಸುವುದರಿಂದ ಅಪ್ರಾಪ್ತ ವಯಸ್ಕಳಾದ ತನ್ನ 28 ವಾರಗಳ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಅಂತ್ಯಗೊಳಿಸಲು ಅನುಮತಿ ಕೋರಿ ಆಕೆ ನ್ಯಾಯಾಲಯದ ಮೊರೆ ಹೋಗಿದ್ದಳು.

ತನ್ನ ಸಂತಾನೋತ್ಪತ್ತಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸ್ವಯಂ ನಿರ್ಧರಿಸುವ ಹಕ್ಕು ಪ್ರತಿಯೊಬ್ಬ ಮಹಿಳೆ ಮತ್ತು ಹುಡುಗಿಯ ಸಮಾನತೆ ಮತ್ತು ಗೌಪ್ಯತೆಯ ಮೂಲಭೂತ ಹಕ್ಕಿನ ತಿರುಳಾಗಿದೆ ಎಂದು ನ್ಯಾಯಾಲಯ ತಿಳಿಸಿತು.

ಮಕ್ಕಳನ್ನು ಪಡೆಯಬೇಕೆ ಹಾಗೆ ಪಡೆಯುವುದಾದರೆ ಯಾವಾಗ ಎಂದು ಆಯ್ಕೆ ಮಾಡುವುದನ್ನು, ಮಕ್ಕಳ ಸಂಖ್ಯೆ ಆರಿಸಿಕೊಳ್ಳುವುದನ್ನು ಹಾಗೂ ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಒಳಗಾಗುವುದನ್ನು ಸಂತಾನೋತ್ಪತ್ತಿ ಹಕ್ಕುಗಳು ಒಳಗೊಂಡಿವೆ ಎಂದು ನ್ಯಾಯಾಲಯ ಇದೇ ವೇಳೆ ವಿವರಿಸಿತು.

ಗರ್ಭಾವಸ್ಥೆಯನ್ನು ಮುಂದುವರಿಸುವುದು ಅವಳ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಹಾನಿಕರವಾಗಬಹುದು ಎಂಬ ವೈದ್ಯಕೀಯ ಮಂಡಳಿಯ ವರದಿ ಹಾಗೂ ಸಂತ್ರಸ್ತೆ ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಅಂಶವನ್ನು ಗಮನಿಸಿದ ನ್ಯಾಯಾಲಯ ಆಕೆಯನ್ನು ದೂರ ಇಡುವ ಸಾಧ್ಯತೆಯನ್ನು ತಳ್ಳಿಹಾಕಲು ಆಗದು ಎಂದಿತು. ಹೀಗಾಗಿ ಗರ್ಭಾವಸ್ಥೆ ಅಂತ್ಯಕ್ಕೆ ಅದು ಅನುಮತಿಸಿತು.