Lawyers 
ಸುದ್ದಿಗಳು

ವಕೀಲ ಗುಮಾಸ್ತರನ್ನು ಸಂಕಷ್ಟದಲ್ಲಿರಿಸಲಾಗದು: ವಕೀಲರ ಕಲ್ಯಾಣ ಕಾಯಿದೆ ತಿದ್ದುಪಡಿಗೆ ಹೈಕೋರ್ಟ್‌ ನಿರ್ದೇಶನ

ವಕೀಲರ ಕಲ್ಯಾಣ ನಿಧಿ ಕಾಯಿದೆ ಸೆಕ್ಷನ್‌ 27ಕ್ಕೆ ತಿದ್ದುಪಡಿ ಮಾಡಿ, ವಕೀಲ ಗುಮಾಸ್ತರ ಕಲ್ಯಾಣಕ್ಕೆ ಅನುಕೂಲವಾಗಲು ಪ್ರತ್ಯೇಕವಾಗಿ ₹5 ಅಥವಾ ₹10 ಸ್ಟ್ಯಾಂಪ್‌ ಮಾಡಬೇಕು ಎಂದು ಅಮಿಕಸ್‌.

Bar & Bench

ರಾಜ್ಯದ ವಕೀಲ ಗುಮಾಸ್ತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಕೀಲರ ಕಲ್ಯಾಣ ನಿಧಿ ಕಾಯಿದೆ 1986ರ ಸೆಕ್ಷನ್‌ 27ಕ್ಕೆ ಅಗತ್ಯ ತಿದ್ದುಪಡಿ ಮಾಡಿಬೇಕು. ಇಲ್ಲವಾದಲ್ಲಿ ಕಾನೂನು ಇಲಾಖೆಯ ಕಾರ್ಯದರ್ಶಿ ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಶುಕ್ರವಾರ ಕಟ್ಟುನಿಟ್ಟಿನ ಆದೇಶ ಮಾಡಿರುವ ನ್ಯಾಯಾಲಯವು ವಕೀಲ ಗುಮಾಸ್ತರನ್ನು ನಡುನೀರಿನಲ್ಲಿ ಕೈಬಿಡಲಾಗದು ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.

ಕರ್ನಾಟಕ ವಕೀಲ ಗುಮಾಸ್ತರ ಕಲ್ಯಾಣ ನಿಧಿಗೆ ಹಣ ಬರುವಂತೆ ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಕೋರಿ ಕರ್ನಾಟಕ ರಾಜ್ಯಮಟ್ಟದ ವಕೀಲ ಗುಮಾಸ್ತರ ಸಂಸ್ಥೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ವಕೀಲ ಗುಮಾಸ್ತರ ಮನವಿಯನ್ನು ಪರಿಗಣಿಸಿ ಆರು ತಿಂಗಳಲ್ಲಿ ಕ್ರಮಕೈಗೊಳ್ಳಬೇಕು ಎಂದು 2023ರ ಏಪ್ರಿಲ್‌ 17ರಂದು ಹೈಕೋರ್ಟ್‌ ಆದೇಶ ಮಾಡಿತ್ತು. ಇದನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಮತ್ತೆ ವಿಚಾರಣೆ ನಡೆಸುತ್ತಿದೆ.

Justice M Nagaprasanna

ವಿಚಾರಣೆ ನಡೆಸಿದ ಪೀಠವು “ವಕೀಲ ಗುಮಾಸ್ತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ನ್ಯಾಯಾಲಯವು ಹಲವು ಆದೇಶ ಮಾಡಿದೆ. ಪಕ್ಷಕಾರರ ನಡುವೆ ಹಲವು ಸುತ್ತಿನ ಚರ್ಚೆಯ ಬಳಿಕ ಅರ್ಜಿದಾರರು ಮತ್ತು ಅಮಿಕಸ್‌ ಕ್ಯೂರಿ, ಹಿರಿಯ ವಕೀಲರಾದ ಎಸ್‌ ಬಸವರಾಜು ಅವರು ಸರ್ಕಾರಕ್ಕೆ ಬೇರೆಯ ಹೈಕೋರ್ಟ್‌ಗಳಲ್ಲಿ ಸ್ಟ್ಯಾಂಪ್‌ ಮೂಲಕ ಹಣ ಸಂಗ್ರಹಸಿ ವಕೀಲ ಗುಮಾಸ್ತರ ಕ್ಷೇಮಾಭಿವೃದ್ಧಿಗೆ ನೀಡುವ ರೀತಿಯಲ್ಲಿ ಇಲ್ಲಿಯೂ ಮಾಡುವ ಕುರಿತು ಕಾಯಿದೆಗೆ ಅಗತ್ಯ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರ ಮತ್ತು ಕಾನೂನು ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಪೂರಕವಾಗಿ ಬಸವರಾಜು ಅವರು ತೆಲಂಗಾಣ ಮತ್ತು ಆಂಧ್ರಪ್ರದೇಶದ ಉದಾಹರಣೆ ನೀಡಿದ್ದಾರೆ. ಈ ಮನವಿಯು ಸರ್ಕಾರದ ಬಳಿ ಇದ್ದು, ಅವರು ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ. ವಕೀಲರ ಗುಮಾಸ್ತರ ಸಂಸ್ಥೆಗೆ ಹಣ ಸಂಗ್ರಹಿಸುವ ನಿಟ್ಟಿಲ್ಲಿ ಕಾನೂನಿಗೆ ಅಗತ್ಯ ತಿದ್ದುಪಡಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸಲಾಗಿದೆ. 2026ರ ಜನವರಿ 9ರ ಒಳಗೆ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದರೆ ಕಾನೂನು ಇಲಾಖೆಯ ಕಾರ್ಯದರ್ಶಿ ಖುದ್ದು ವಿಚಾರಣೆಗೆ ಹಾಜರಾಗಬೇಕು” ಎಂದು ಆದೇಶಿಸಿದೆ.

ಇದಕ್ಕೂ ಮುನ್ನ, ಪ್ರಕರಣದಲ್ಲಿ ಅಮಿಕಸ್‌ ಕ್ಯೂರಿಯಾಗಿರುವ ಎಸ್‌ ಬಸವರಾಜು ಅವರು “ಮನವಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ನೀಡಲಾಗಿದೆ. ವಕೀಲರ ಕಲ್ಯಾಣ ಕಾಯಿದೆಯ ಸೆಕ್ಷನ್‌ 27ಕ್ಕೆ ತಿದ್ದುಪಡಿ ಮಾಡಿ, ವಕೀಲರ ಗುಮಾಸ್ತರ ಕಲ್ಯಾಣಕ್ಕೆ ಅನುಕೂಲವಾಗಲು ಪ್ರತ್ಯೇಕವಾಗಿ ₹5 ಅಥವಾ ₹10 ಸ್ಟ್ಯಾಂಪ್‌ ಮಾಡಬೇಕು. ಈ ನಿಟ್ಟಿನಲ್ಲಿ ಸೀಮಿತ ಅವಧಿಯಲ್ಲಿ ಸರ್ಕಾರವು ನಿರ್ಧಾರ ಕೈಗೊಳ್ಳಬೇಕು. ತೆಲಂಗಾಣ ಮತ್ತು ಇತರೆ ಕಡೆ ವಕೀಲರ ಗುಮಾಸ್ತರಿಗೆ ಪ್ರತ್ಯೇಕ ಸ್ಟ್ಯಾಂಪ್‌ ಮಾಡಲಾಗಿದೆ” ಎಂದರು.

ಅದಕ್ಕೆ ಪೀಠವು “ಅರ್ಜಿಯನ್ನು ಇತ್ಯರ್ಥಪಡಿಸಿದರೆ ಸರ್ಕಾರ ಏನನ್ನೂ ಮಾಡಲ್ಲ. ವಕೀಲರ ಗುಮಾಸ್ತರಿಗೆ ಏನೂ ಸಿಗುವುದಿಲ್ಲ. ಕೊನೆಯ ಬಾರಿಗೆ ಸರ್ಕಾರ ಮೂರು ವಾರಗಳ ಕಾಲಾವಕಾಶ ನೀಡಲಾಗುವುದು. ಕೆಲಸವಾಗದಿದ್ದರೆ ಕಾನೂನು ಕಾರ್ಯದರ್ಶಿ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಬೇಕಾಗುತ್ತದೆ. ಕಾಯಿದೆಗೆ ತಿದ್ದುಪಡಿ ಮಾಡಿದರೆ ಸಾಕಲ್ಲ” ಎಂದಿತು.

ರಾಜ್ಯದಾದ್ಯಂತ ಸರಿ ಸುಮಾರು 400ಕ್ಕೂ ಹೆಚ್ಚು ನೋಂದಾಯಿತ ವಕೀಲರ ಗುಮಾಸ್ತರು ಇದ್ದಾರೆ ಎನ್ನಲಾಗಿದೆ.