Supreme Court and Covid vaccine

 
ಸುದ್ದಿಗಳು

ವಿಕಲ ಚೇತನರು ಕೋವಿಡ್ ಲಸಿಕೆ ಪ್ರಮಾಣಪತ್ರ ಕೊಂಡೊಯ್ಯುವುದು ಕಡ್ಡಾಯವಲ್ಲ: ಸುಪ್ರೀಂಕೋರ್ಟ್‌ಗೆ ಕೇಂದ್ರ

ಯಾವುದೇ ವ್ಯಕ್ತಿಯ ಒಪ್ಪಿಗೆ ಪಡೆಯದೆ ಬಲವಂತದಿಂದ ಲಸಿಕೆ ಹಾಕುವುದಿಲ್ಲ ಎಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

Bar & Bench

ವಿಕಲ ಚೇತನ ವ್ಯಕ್ತಿಗಳು ಕೋವಿಡ್‌ ಲಸಿಕೆ ಪ್ರಮಾಣಪತ್ರ ಕೊಂಡೊಯ್ಯಬೇಕೆಂಬ ಕುರಿತು ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಹೊರಡಿಸಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ವಿಕಲಚೇತನರ ಮನೆಗಳಿಗೆ ತೆರಳಿ ಆದ್ಯತೆಯ ಮೇರೆಗೆ ಕೋವಿಡ್ ಲಸಿಕೆ ಹಾಕುವಂತೆ ಕೋರಿ ಎನ್‌ಜಿಒ ಸರ್ಕಾರೇತರ ಸಂಸ್ಥೆ ಇವಾರಾ ಪ್ರತಿಷ್ಠಾನ ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಈ ಪ್ರತಿಕ್ರಿಯೆ ನೀಡಿದೆ.

ಯಾವುದೇ ವ್ಯಕ್ತಿಯ ಒಪ್ಪಿಗೆ ಪಡೆಯದೆ ಬಲವಂತದಿಂದ ಲಸಿಕೆ ಹಾಕುವುದಿಲ್ಲ ಎಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. “ಕೋವಿಡ್‌ ತಡೆಯುವ ದೃಷ್ಟಿಯಿಂದ ಸಾರ್ವಜನಿಕ ಹಿತಾಸಕ್ತಿಗಾಗಿ ಎಲ್ಲಾ ನಾಗರಿಕರು ಲಸಿಕೆ ಪಡೆಯಬೇಕೆಂದು ವಿವಿಧ ಮಾಧ್ಯಮಗಳ ಮೂಲಕ ಜಾಹೀರಾತು, ಸಲಹೆ ನೀಡಲಾಗಿದೆ. ಆದರೂ ತಮ್ಮ ಆಶಯಗಳಿಗೆ ವಿರುದ್ಧವಾಗಿ ಯಾವುದೇ ವ್ಯಕ್ತಿಗೆ ಬಲವಂತವಾಗಿ ಲಸಿಕೆ ಹಾಕುವುದಿಲ್ಲ” ಎಂದು ಕೇಂದ್ರ ವಿವರಿಸಿದೆ.

ಅಫಿಡವಿಟ್‌ನಲ್ಲಿ ಮುಖಗವಸು ಅಥವಾ ಫೇಸ್ ಕವರ್‌ಗಳ ನಿರಂತರ ಬಳಕೆ ಕುರಿತ ವಿವರ ಹಾಗೂ ಮನೆಯ ಸಮೀಪ ಲಸಿಕೆ ಕೇಂದ್ರಗಳು (ಎನ್‌ಎಚ್‌ಸಿವಿಸಿ) ಮತ್ತು ಹರ್ ಘರ್ ದಸ್ತಕ್ ಅಭಿಯಾನದ ಮಾಹಿತಿ ಒದಗಿಸಲಾಗಿದೆ. ವಿಶೇಷ ಲಸಿಕೆ ಸೆಷನ್‌ಗಳನ್ನು ಸೃಷ್ಟಿಸಲು ಕೋವಿನ್‌ ಜಾಲತಾಣದಲ್ಲಿ ಸೌಲಭ್ಯ ಒದಗಿಸಿರುವುದರಿಂದ ಗುರುತಿನ ಚೀಟಿ ಹೊಂದಿರದ ವ್ಯಕ್ತಿಗಳು ಸಹ ಲಸಿಕೆಗೆ ಅರ್ಹರು ಎಂದು ಕೂಡ ಕೇಂದ್ರ ಹೇಳಿದೆ. ಮೊಬೈಲ್‌ ಸಂಖ್ಯೆ ಮತ್ತು ಫೋಟೊ ಗುರುತಿನ ಚೀಟಿಯನ್ನು ಕಡ್ಡಾಯ ಮಾಡದೆ ಎಷ್ಟು ಫಲಾನುಭವಿಗಳು ನೋಂದಣಿ ಸಾಧ್ಯವೋ ಅಷ್ಟೂ ಫಲಾನುಭವಿಗಳಿಗೆ ಲಸಿಕೆ ನೀಡುವ ವೈಶಿಷ್ಟ್ಯ ಇಂತಹ ಸೆಷನ್‌ಗಳದ್ದಾಗಿದೆ” ಎಂದು ಅದು ಹೇಳಿದೆ. ನಾಳೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.