Soubhagya, S K Basavarajan and Murugha Mutt, Chitradurga 
ಸುದ್ದಿಗಳು

ಬಸವರಾಜನ್‌ ದಂಪತಿ ವಿರುದ್ಧದ ಪ್ರಕರಣ: ವಾದ ಮಂಡನೆಗೆ ಸರ್ಕಾರಕ್ಕೆ ಐದು ದಿನದ ಸಮಯಾವಕಾಶ ನೀಡಿದ ಹೈಕೋರ್ಟ್

ತನಿಖೆ ನಡೆಸಲು ಹಿರಿಯ ಮಹಿಳಾ ಪೊಲೀಸ್‌ ಅಧಿಕಾರಿ ನೇಮಿಸಲು ಆದೇಶಿಸಬೇಕು ಎಂದು ಉಸ್ತುವಾರಿ ಸ್ವಾಮೀಜಿ ಬಸವಪ್ರಭು ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

Bar & Bench

ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧದ ಪೋಕ್ಸೊ ಪ್ರಕರಣ ದಾಖಲಿಸಲು ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಬಸವರಾಜನ್‌ ದಂಪತಿಯ ವಿರುದ್ಧ ನೀಡಲಾಗಿರುವ ದೂರಿನ ತನಿಖಾಧಿಕಾರಿ ಬದಲಾಯಿಸಲು ಕೋರಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ದಿನದೊಳಗೆ ವಾದ ಮಂಡನೆ ಮಾಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆ ಅಡಿ ಪ್ರಕರಣ ದಾಖಲಿಸಲು ಸಂತ್ರಸ್ತೆಗೆ ಪ್ರಚೋದನೆ ನೀಡಿದ ಆರೋಪ ಮಠದ ಮಾಜಿ ಆಡಳಿತಾಧಿಕಾರಿ ಎಸ್ ಕೆ ಬಸವರಾಜನ್ ಮತ್ತವರ ಪತ್ನಿ ಸೌಭಾಗ್ಯ ಮೇಲಿದೆ. ಈ ಕುರಿತು ದಾಖಲಿಸಿರುವ ದೂರಿನ ತನಿಖಾಧಿಕಾರಿ ಬದಲಿಸಲು ಕೋರಿರುವ ಅರ್ಜಿಯ ವಿಚಾರಣೆಯನ್ನು  ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಶುಕ್ರವಾರ ವಿಚಾರಣೆ ನಡೆಸಿತು.

ಬಸವರಾಜನ್‌ ದಂಪತಿ ವಿರುದ್ಧ ಚಿತ್ರದುರ್ಗದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅದರ ತನಿಖೆಯ ಹೊಣೆಯನ್ನು ಹಿರಿಯ ಮಹಿಳಾ ಅಧಿಕಾರಿಗೆ ವಹಿಸುವಂತೆ ಕೋರಿ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಅರ್ಜಿ ಸಲ್ಲಿಸಿದ್ದಾರೆ.

ಇಂದು ಪ್ರಕರಣ ವಿಚಾರಣೆಗೆ ಬಂದಾಗ ಸರ್ಕಾರಿ ವಕೀಲರು, ಅರ್ಜಿ ಕುರಿತು ವಾದ ಮಂಡಿಸಲು ಹತ್ತು ದಿನದ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ಫೆಬ್ರವರಿ 15ರವರೆಗೆ ಮಾತ್ರ ಸಮಯ ನೀಡಲಾಗುವುದು ಎಂದು ಹೇಳಿ ವಾದ ಮಂಡಿಸಲು ಸೂಚಿಸಿತು.

ಬಸವರಾಜನ್ ಮತ್ತಿತರ ಆರೋಪಿಗಳ ವಿರುದ್ಧ ವಂಚನೆ, ಬೆದರಿಕೆ ಹಾಗೂ ಮುರುಘಾ ಶರಣರ ವಿರುದ್ಧ ಪ್ರಕರಣ ದಾಖಲಿಸಲು ಅಪ್ರಾಪ್ತೆಗೆ ಪ್ರಚೋದನೆ ನೀಡಿದ ಆರೋಪ ಸಂಬಂಧ ಅರ್ಜಿದಾರರು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಸದ್ಯ ಹೈಕೋರ್ಟ್ ಮೆಟ್ಟಿಲೇರಿರುವ ಅವರು, ದೂರಿನ ಕುರಿತು ಪೊಲೀಸರು ಸಮರ್ಪಕ ತನಿಖೆ ನಡೆಸುತ್ತಿಲ್ಲ. ಆದ್ದರಿಂದ, ತನಿಖೆಯನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಯಿಂದ ಬೇರೆಡೆಗೆ ವರ್ಗಾಯಿಸಲು ಮತ್ತು ತನಿಖೆಗೆ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಯನ್ನು ನೇಮಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.