ಸಿದ್ದರಾಮಯ್ಯ 2013 ರಿಂದ 2018ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ತಮ್ಮ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಜಾಹೀರಾತುಗಳನ್ನು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅನುಮತಿ ಇಲ್ಲದೆ, ಬಿಬಿಎಂಪಿ ವ್ಯಾಪ್ತಿಯ ಬಸ್ ತಂಗುದಾಣಗಳಲ್ಲಿ ಪ್ರದರ್ಶಿಸುವ ಮೂಲಕ ಬೊಕ್ಕಸಕ್ಕೆ ₹68 ಕೋಟಿಗೂ ಹೆಚ್ಚಿನ ಮೊತ್ತ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈಚೆಗೆ ವಜಾಗೊಳಿಸಿದೆ.
ಬಿಜೆಪಿ ಮುಖಂಡ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಎನ್ ಆರ್ ರಮೇಶ್ ಅವರು, ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಅಡಿ ಪ್ರಕರಣದ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ದೂರಿನಲ್ಲಿ ಉಲ್ಲೇಖಿಸಲಾಗಿರುವ ಆಪಾದನೆಗಳನ್ನು ಸಾಬೀತುಪಡಿಸುವ ಯಾವುದೇ ಆಧಾರಗಳಿಲ್ಲ ಎಂದು ವಜಾಗೊಳಿಸಿದ್ದಾರೆ.
ದೂರಿನಲ್ಲಿ ಸಿದ್ದರಾಮಯ್ಯ, ಸಚಿವ ಕೆ ಜೆ ಜಾರ್ಜ್, ಅಂದಿನ ಬಿಬಿಎಂಪಿ ಆಯುಕ್ತ ಐಎಎಸ್ ಅಧಿಕಾರಿ ಮಂಜುನಾಥ ಪ್ರಸಾದ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಮಾಹಿತಿ ಇಲಾಖೆ ಆಯುಕ್ತ ಪಿ ಮಣಿವಣ್ಣನ್ ಮತ್ತು ಲಕ್ಷ್ಮಿನಾರಾಯಣ ವಿರುದ್ಧ ಆಪಾದನೆ ಹೊರಿಸಲಾಗಿತ್ತು.
ಆರೋಪವೇನು?: ರಾಜ್ಯ ಸರ್ಕಾರ 2015-16 ಮತ್ತು 2016-17ನೇ ಸಾಲಿನ ತನ್ನ ಸಾಧನೆಗಳನ್ನು ಪ್ರದರ್ಶಿಸುವ ಉದ್ದೇಶದಿಂದ ಪಾಲಿಕೆಯ ಅಧಿಕೃತ ಅನುಮತಿಯನ್ನು ಪಡೆಯದೆ ಮತ್ತು ಪಾಲಿಕೆಗೆ ಯಾವುದೇ ನಿಗದಿತ ಜಾಹೀರಾತು ಶುಲ್ಕ ಪಾವತಿಸದೆ ಪಾಲಿಕೆ ಒಡೆತನದ 439 ಬಸ್ ತಂಗುದಾಣಗಳನ್ನು ಬಳಸಿಕೊಂಡಿದೆ. ಈ ನಿಟ್ಟಿನಲ್ಲಿ 290 ಕಿಯೋಸ್ಕ್ ಟೈಪ್ ಮತ್ತು 149 ಡಿ-ಟೈಪ್ ಜಾಹೀರಾತುಗಳು ಪಾಲಿಕೆಯ ಬಸ್ ತಂಗುದಾಣಗಳಲ್ಲಿ ಪ್ರದರ್ಶಿತವಾಗಿದ್ದವು. ಇದರಿಂದ ಬಿಬಿಎಂಪಿಗೆ ₹ 68 ಕೋಟಿಗೂ ಹೆಚ್ಚಿನ ಮೊತ್ತ ನಷ್ಟವಾಗಿತ್ತು ಎಂದು ಫಿರ್ಯಾದುದಾರರು ದೂರಿದ್ದರು.