Judge 
ಸುದ್ದಿಗಳು

ಪಕ್ಷಪಾತದ ಆರೋಪ ಬಂದಾಗ ನ್ಯಾಯಾಧೀಶರ ಪ್ರತಿಕ್ರಿಯೆ ಆಲಿಸದೆ ಅವರಿಂದ ಪ್ರಕರಣ ವರ್ಗಾಯಿಸುವಂತಿಲ್ಲ: ದೆಹಲಿ ಹೈಕೋರ್ಟ್

Bar & Bench

ಪ್ರಕರಣದ ವರ್ಗಾವಣೆ ಕುರಿತು ಪರಿಶೀಲಿಸುವಾಗ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಪಾಲಿಸಬೇಕಾದ ನಿರ್ದೇಶನಗಳನ್ನು ದೆಹಲಿ ಹೈಕೋರ್ಟ್ ಮಂಗಳವಾರ ನೀಡಿದೆ [ಜಾರಿ ನಿರ್ದೇಶನಾಲಯ ಮತ್ತು ಅಜಯ್‌ ಎಸ್‌ ಮಿತ್ತಲ್‌ ನಡುವಣ ಪ್ರಕರಣ].

ಪಕ್ಷಪಾತದ ಆರೋಪ ಇರುವಾಗ ಸಂಬಂಧಪಟ್ಟ ನ್ಯಾಯಾಧೀಶರ ಪ್ರತಿಕ್ರಿಯೆಯನ್ನು ಕಡ್ಡಾಯವಾಗಿ ಕೇಳಿ ಪರಿಶೀಲಿಸದೆಯೇ ಅಂತಹ ಪ್ರಕರಣವನ್ನು ವರ್ಗಾಯಿಸದಂತೆ ಎಲ್ಲಾ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ನೋಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಆದೇಶಿಸಿದರು.

 ಈ ನಿಟ್ಟಿನಲ್ಲಿ ಕೆಳಗಿನ ನಿರ್ದೇಶನಗಳನ್ನು ನೀಡಲಾಗಿದೆ:

- ಪಕ್ಷಪಾತದ ಆಧಾರದ ಮೇಲೆ ಪ್ರಕರಣವನ್ನು ವರ್ಗಾಯಿಸಲು ಕೋರಿದ್ದಾಗ ಸಂಬಂಧಪಟ್ಟ ನ್ಯಾಯಾಧೀಶರ ಹೇಳಿಕೆಗಳನ್ನು ಕಡ್ಡಾಯವಾಗಿ ಪಡೆಯತಕ್ಕದ್ದು.

- ಹೇಳಿಕೆಗಳನ್ನು ಪರಿಗಣಿಸಿದ ಬಳಿಕ ಪಕ್ಷಪಾತದ ನೈಜ ಆತಂಕಗಳ ತತ್ವಗಳ ಹಿನ್ನೆಲೆಯಲ್ಲಿ ಅರ್ಜಿಯನ್ನು ನಿರ್ಧರಿಸಬೇಕು.

- ಅಂತಹ ಅರ್ಜಿಗಳನ್ನು ನಿರ್ಧರಿಸುವಾಗ ವಿಚಾರಣೆಗೆ ಹಾಜರಾಗುವ ಸಂದರ್ಭಗಳಿಗೆ ಸಂಬಂಧಿಸಿದ ಇತರ ತತ್ವಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಬೇಕು.

“ಇ ಡಿ ಪ್ರಕರಣಗಳಲ್ಲಿ ಯಾರಿಗೆ ಜಾಮೀನು ದೊರೆಯುತ್ತದೆ?” ಎಂದು ಹೇಳಿದ್ದ ನ್ಯಾಯಾಧೀಶರೊಬ್ಬರಿಂದ ಭೂಷಣ್ ಸ್ಟೀಲ್ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ವರ್ಗಾಯಿಸಿದ್ದ ರೌಸ್‌ ಅವೆನ್ಯೂ ನ್ಯಾಯಾಲಯದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಆದೇಶ ತಳ್ಳಿಹಾಕುವ ಸಂದರ್ಭದಲ್ಲಿ ಪೀಠ ಈ ನಿರ್ದೇಶನಗಳನ್ನು ನೀಡಿತು.

ಸಿಬ್ಬಂದಿ ಮತ್ತು ನ್ಯಾಯಾಧೀಶರ ನಡುವಿನ ಸಂಬಂಧವನ್ನು ಗೌಪ್ಯವಾಗಿ ಪರಿಗಣಿಸಬೇಕು ಮತ್ತು ಅದು ದಾವೆದಾರರು ಅಥವಾ ವಕೀಲರ ಪರಿಶೀಲನೆಯ ವಿಷಯವಾಗಬಾರದು. ಇದು ಗೌರವ ಮತ್ತು ಗೌಪ್ಯತೆಯನ್ನು ಬೇಡುವ ಕ್ಷೇತ್ರವಾಗಿದೆ ಎಂದು ನ್ಯಾಯಮೂರ್ತಿ ಶರ್ಮಾ ಅವರು ಹೇಳಿದರು. 

(ಇ ಡಿ ಪ್ರಕರಣಗಳಲ್ಲಿ ಯಾರಿಗೆ ಜಾಮೀನು ದೊರೆಯುತ್ತದೆ ಎಂಬ) ನ್ಯಾಯಾಧೀಶರ ಹೇಳಿಕೆ ಆರೋಪಿ ಅಜಯ್ ಎಸ್ ಮಿತ್ತಲ್ ಕಡೆಗಾಗಲೀ ಇ ಡಿ ಕಡೆಗಾಗಲೀ ಪಕ್ಷಪಾತದ ನೈಜ ಆತಂಕವನ್ನು ಬಿಂಬಿಸದು ಎಂದು ನ್ಯಾಯಾಲಯ ತಿಳಿಸಿದೆ.

 ತಾನು ಈಗ ನೀಡಿರುವ ತೀರ್ಪು ಮತ್ತು ಮಾರ್ಗಸೂಚಿಗಳನ್ನು ದೆಹಲಿಯ ಎಲ್ಲಾ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಹಾಗೂ ಅಲ್ಲಿನ ನ್ಯಾಯಾಂಗ ಅಕಾಡೆಮಿಗೆ ರವಾನಿಸುವಂತೆ ಪೀಠ ಇದೇ ವೇಳೆ ಆದೇಶಿಸಿತು.