“ರಾಜಕಾರಣಿಗಳು ಅಥವಾ ಅವರ ಬೆಂಬಲಿಗರು ಜಾತಿ ನಿಂದನೆ ಮಾಡಿದಾಗ, ಅದರಿಂದ ಉಂಟಾಗುವ ಅವಮಾನವು ಗಂಭೀರ ಆಯಾಮವನ್ನು ಪಡೆಯುತ್ತದೆ” ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
ರಾಜಕೀಯ ವಿರೋಧಿಯಾದ ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ನ ಭೀಮಾ ನಾಯಕ್ ಮತ್ತು ಅವರ ಅಳಿಯ ಎಸ್ ಎಲ್ ಮಂಜುನಾಥ್ ವಿರುದ್ಧ ರಾಜಕೀಯ ಸಭೆ ಸೇರಿದಂತೆ ಮೂರು ಕಡೆ ಜಾತಿ ನಿಂದನೆ ಮಾಡಿದ ಸಂಬಂಧ ಕಾಂಗ್ರೆಸ್ ನಾಯಕ ಸಿರಾಜ್ ಶೇಖ್ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಿರಾಕರಿಸಿದೆ.
“ರಾಜಕಾರಣಿ ಅಥವಾ ಅವರ ಬೆಂಬಲಿಗರು ಸಾರ್ವಜನಿಕ ಸ್ಥಳದಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯರ ಮೇಲೆ ಜಾತಿ ನಿಂದನೆ ಮಾಡಿದಾಗ, ಅಗೌರವವು ಗಂಭೀರ ಆಯಾಮವನ್ನು ಪಡೆಯುತ್ತದೆ. ಇದು ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ; ಸಮಾನ ಪೌರತ್ವದ ಸಾಂವಿಧಾನಿಕ ಭರವಸೆಗೆ ಮಾಡಿದ ಅವಮಾನ ಮತ್ತು ಸಂವಿಧಾನವು ದೃಢವಾಗಿ ಹೂತುಹಾಕಲು ಪ್ರಯತ್ನಿಸಿದ ಸಾಮಾಜಿಕ ಶ್ರೇಣಿಯನ್ನು ಅವಮಾನಕರ ಮಾತುಗಳ ಮೂಲಕ ಪುನರುತ್ಥಾನಗೊಳಿಸುವ ಪ್ರಯತ್ನವಾಗಿದೆ. ಸಮಾನತೆಯ ಸ್ಥಳವಾಗಬೇಕಾದ ಸಾರ್ವಜನಿಕ ಚೌಕವನ್ನು ಜಾತಿ ಅವಮಾನದ ಅಖಾಡವನ್ನಾಗಿ ಪರಿವರ್ತಿಸಲು ಪ್ರಜಾಪ್ರಭುತ್ವವು ಅನುಮತಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
“ಸಮಾನತೆಯ ಸಾಂವಿಧಾನಿಕ ಖಾತರಿಗಳ ಹೊರತಾಗಿಯೂ, ರಾಜಕೀಯ ಅಧಿಕಾರದಲ್ಲಿರುವವರ ನಡವಳಿಕೆಯಲ್ಲಿಯೂ ಸಹ ಜಾತಿಯ ವಿಷವು ಪ್ರತಿಫಲಿಸುತ್ತಲೇ ಇದೆ” ಎಂದು ನ್ಯಾಯಾಲಯವು ವಿಷಾದಿಸಿದೆ.
“ಸಂವಿಧಾನವು ಅಸ್ಪೃಶ್ಯತೆಯನ್ನು ನಿಷೇಧಿಸಿ ಸಮಾನತೆ, ಘನತೆ ಮತ್ತು ಭ್ರಾತೃತ್ವದ ಭರವಸೆ ನೀಡಿದೆ; ಆದರೂ, ವಿಷಾದಕರವೆಂದರೆ, ಜಾತಿಯ ವಿಷವು ಕೆಲವೊಮ್ಮೆ ರಾಜಕೀಯ ಅಧಿಕಾರದ ಹುದ್ದೆಗಳನ್ನು ಅಲಂಕರಿಸುವವರ ನಡವಳಿಕೆಯಲ್ಲಿಯೂ ಸಹ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತದೆ” ಎಂದು ಪೀಠ ವ್ಯಾಖ್ಯಾನಿಸಿದೆ.
ಆಗಸ್ಟ್ 12, 2023 ರಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಸ್ವಾಗತಿಸಲು ಹಾಕಲಾಗಿದ್ದ ಫ್ಲೆಕ್ಸ್ ಬೋರ್ಡ್‌ನಲ್ಲಿ ಶೇಖ್ ಫೋಟೊ ಇಲ್ಲವಾಗಿದ್ದು, ಇದರಿಂಧ ಕುಪಿತರಾಗಿದ್ದ ಶೇಖ್ ಮತ್ತು ಮತ್ತೊಬ್ಬ ಕಾಂಗ್ರೆಸ್ ಮುಖಂಡ ಭೀಮಾ ನಾಯಕ್ ನಡುವೆ ಕಲಹಕ್ಕೆ ಕಾರಣವಾಗಿತ್ತು. ಕಲಹದ ನಂತರ ಆಗಸ್ಟ್ 15ರಂದು ಭೀಮಾ ನಾಯ್ಕ್ ಅವರು ಜಿಲ್ಲಾ ಉಸ್ತುವಾರಿ ಸಚಿವರ ಕಾರಿನಲ್ಲಿ ಕೂರುವಂತೆ ಆಹ್ವಾನಿಸಿದ್ದಾಗ ಶೇಖ್ ಆಕ್ಷೇಪಿಸಿದ್ದರು. ಅಲ್ಲದೇ, ಭೀಮಾ ನಾಯಕ್ ಮತ್ತು ಅವರ ಸಂಬಂಧಿ ಎಸ್ ಎಲ್ ಮಂಜುನಾಥ್ ಅವರ ವಿರುದ್ಧ ಜಾತಿ ನಿಂದನೆಯ ಶಬ್ದಗಳನ್ನು ಬಳಕೆ ಮಾಡಿದ್ದರು ಎನ್ನುವುದು ಆರೋಪವಾಗಿದೆ. ಆನಂತರ ರಾಜಕೀಯ ಸಭೆಯಲ್ಲಿಯೂ ಮಂಜುನಾಥ್ ಮತ್ತು ನಾಯಕ್ ಅವರನ್ನು ಶೇಖ್ ನಿಂದಿಸಿದ್ದರು. ಇದರಿಂದ ಕುಪಿತರಾಗಿದ್ದ ಮಂಜುನಾಥ್ ಅವರು ಜಾತಿ ನಿಂದನೆ ಮಾಡುತ್ತಿದ್ದಾರೆ ಎಂದು ಶೇಖ್ ವಿರುದ್ಧ ದೂರು ನೀಡಿದ್ದರು.
ವಿಚಾರಣಾಧೀನ ನ್ಯಾಯಾಲಯವು ಆರೋಪ ಮುಕ್ತಿಗೊಳಿಸಲು ನಿರಾಕರಿಸಿದ್ದರಿಂದ ಶೇಖ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಸ್ತೃತ ವಿಚಾರಣೆಯ ಅಗತ್ಯವಿದೆ ಎಂದಿರುವ ನ್ಯಾಯಾಲಯವು ಅರ್ಜಿ ವಜಾಗೊಳಿಸಿದೆ.
“ನಾಯಕ್ ಮತ್ತು ಮಂಜುನಾಥ್ ಅವರ ಜಾತಿಯ ಬಗ್ಗೆ ಶೇಖ್‌ಗೆ ಗೊತ್ತಿಲ್ಲ ಎಂದೇನು ಇಲ್ಲ. ಅವರು ಅಪರಿಚಿತರಲ್ಲ. ರಾಜಕೀಯ ಎದುರಾಳಿಗಳಾಗಿದ್ದು, ಭೀಮಾ ನಾಯಕ್ ಅವರು ಎಸ್‌ಸಿ ಸಮುದಾಯಕ್ಕೆ ಸೇರಿದವರು ಎಂಬುದು ಶೇಖ್‌ಗೆ ಚೆನ್ನಾಗಿ ತಿಳಿದಿತ್ತು. ನಾಲ್ಕು ಗೋಡೆಯಲ್ಲಿ ಗೌಪ್ಯತೆಯಿಂದ ಅಥವಾ ಬೇರೊಬ್ಬರನ್ನು ಕೇಳಿ ನಿಂದಿಸಿಲ್ಲ.. ರಾಜಕೀಯ ಸಭೆಯಲ್ಲಿ ನಿಂದನೆಯಾಗಿದೆ” ಎಂದು ಹೈಕೋರ್ಟ್ ಹೇಳಿದೆ.
“ರಾಜಕೀಯ ವೇದಿಕೆಯನ್ನು ಜಾತಿ ಅವಮಾನಕ್ಕೆ ವೇದಿಕೆಯನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ, ಅಥವಾ ರಾಜಕೀಯ ಪೈಪೋಟಿಯ ಗದ್ದಲವು ಸಾಂವಿಧಾನಿಕ ಘನತೆಯ ಖಾತರಿಯನ್ನು ಮುಳುಗಿಸಲು ಸಾಧ್ಯವಿಲ್ಲ. ಅಂತಹ ಸಭೆಯಲ್ಲಿ ಆಡುವ ಮಾತುಗಳು ಭಾಷಣಕಾರ ಮತ್ತು ಅವರು ಯಾರ ವಿರುದ್ಧ ಹೇಳುತ್ತಿದ್ದಾರೋ ಅವರಿಗೆ ಸೀಮಿತವಾಗಿರುವುದಿಲ್ಲ; ಅವು ಸಭೆಯನ್ನು ಮೀರಿ ವಿಶಿಷ್ಟವಾದ ಸಾರ್ವಜನಿಕ ಪಾತ್ರವನ್ನು ಪಡೆದುಕೊಳ್ಳುತ್ತವೆ” ಎಂದು ವ್ಯಾಖ್ಯಾನಿಸಿದೆ.
ಶೇಖ್ ಅವರು ಉದ್ದೇಶಪೂರ್ವಕವಾಗಿ ಭೀಮಾ ನಾಯಕ್ ಮತ್ತು ಮಂಜುನಾಥ್ ಅವರಿಗೆ ಅವಮಾನಿಸಲು ನಿಂದನಾತ್ಮಕ ಪದಗಳನ್ನು ಬಳಕೆ ಮಾಡಿದ್ದಾರೆಯೇ ಎಂಬುದಕ್ಕೆ ಉತ್ತರಬೇಕಿದೆ. ಹೀಗಾಗಿ, ಮೇಲ್ನೋಟಕ್ಕೆ ಆರೋಪ ರುಜುವಾತಿಗೆ ವಿಚಾರಣೆ ಅಗತ್ಯವಾಗಿದೆ” ಎಂದು ಹೇಳಿದೆ.
“ಘನತೆಯು ಅಂಚಿನಲ್ಲಿರುವವರಿಗೆ ಅಧಿಕಾರದಲ್ಲಿರುವವರು ನೀಡುವ ರಿಯಾಯಿತಿಯಲ್ಲ; ಇದು ಪ್ರತಿಯೊಬ್ಬ ನಾಗರಿಕನ ಉಲ್ಲಂಘಿಸಲಾಗದ ಸಾಂವಿಧಾನಿಕ ಹಕ್ಕು” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.