ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈಚೆಗೆ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದ ಸಂಬಂಧ ಕರ್ತವ್ಯ ಲೋಪದ ಆರೋಪದ ಮೇಲೆ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಅಮಾನತು ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯು ಮಂಗಳವಾರ ವಜಾಗೊಳಿಸಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.
ವಿಕಾಸ್ ಕುಮಾರ್ ವಿಕಾಸ್ ಸೇರಿ ಮೂವರು ಐಪಿಎಸ್ ಅಧಿಕಾರಿಗಳೂ ಒಳಗೊಂಡು ಐವರು ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜೂನ್ 5ರಂದು ರಾಜ್ಯ ಸರ್ಕಾರ ಅಮಾನತು ಮಾಡಿದ್ದ ಆದೇಶವನ್ನು ನ್ಯಾಯಾಂಗ ಸದಸ್ಯರಾದ ನಿವೃತ್ತ ನ್ಯಾಯಮೂರ್ತಿ ಬಿ ಕೆ ಶ್ರೀವಾಸ್ತವ ಮತ್ತು ಆಡಳಿತಾತ್ಮಕ ಸದಸ್ಯರಾದ ಸಂತೋಷ್ ಮೆಹ್ರಾ ಅವರ ವಿಭಾಗೀಯ ಪೀಠವು ಬದಿಗೆ ಸರಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಆರ್‌ಸಿಬಿ ವಿಜಯೋತ್ಸವದ ವೇಳೆ ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ದ್ವಾರದ ಬಳಿಯ ಜನಜಂಗುಳಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಜ್ಯ ಸರ್ಕಾರವು ಬೆಂಗಳೂರು ಜಿಲ್ಲಾಧಿಕಾರಿ ಜಿ ಜಗದೀಶ್ ಅವರ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದೆ. ಅಲ್ಲದೇ, ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿದ್ದು, ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಆದೇಶಿಸಿದೆ.
ಅಖಿಲ ಭಾರತ ಸೇವೆಗಳು (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು 1969, ನಿಯಮ 3(1)(ಎ) ಅಡಿ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಬಿ ದಯಾನಂದ್, ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ಕೇಂದ್ರೀಯ ವಿಭಾಗದ ಡಿಸಿಪಿ ಶೇಖರ್ ಎಚ್ ತೆಕ್ಕಣ್ಣವರ್ ಅವರನ್ನು ಅಮಾನತು ಮಾಡಲಾಗಿತ್ತು.
ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ಪ್ರಕ್ರಿಯೆ) ನಿಯಮಗಳು 1965, ನಿಯಮ 5ರ ಅಡಿ ಕಬ್ಬನ್ ಪಾರ್ಕ್ ಎಸಿಪಿ ಸಿ ಬಾಲಕೃಷ್ಣ ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎ ಕೆ ಗಿರೀಶ್ ಅವರ ಕರ್ತವ್ಯ ಲೋಪದಿಂದ ಮೇಲ್ನೋಟಕ್ಕೆ ದುರ್ಘಟನೆ ಸಂಭವಿಸಿದೆ ಎಂದು ಸರ್ಕಾರವು ಅಮಾನತು ಮಾಡಿತ್ತು.
ಕಾಲ್ತುಳಿತ ಸಂಭವಿಸಲು ಅರ್ಜಿದಾರರು ಸೇರಿದಂತೆ ಅಮಾನತುಗೊಂಡ ಇತರೆ ಪೊಲೀಸ್ ಅಧಿಕಾರಿಗಳ ಕರ್ತವ್ಯ ಲೋಪವೇ ಕಾರಣ ಎಂಬ ಸರ್ಕಾರದ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಸಿಎಟಿಯು ಇಡೀ ಪ್ರಕರಣಕ್ಕೆ ಆರ್‌ಸಿಬಿಐ ಹೊಣೆ ಎಂದು ಸ್ಪಷ್ಟವಾಗಿ ನುಡಿದಿದೆ.
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳಿಂದ ವಿಜಯೋತ್ಸವಕ್ಕೆ ಮೂರರಿಂದ ಐದು ಲಕ್ಷ ಜನರ ಸೇರಿದಕ್ಕೆ ಆರ್‌ಸಿಯೇ ಜವಾಬ್ದಾರಿ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ವಿಜಯೋತ್ಸವ ಆಚರಿಸಲು ಆರ್‌ಸಿಬಿ ಪೊಲೀಸರಿಂದ ಅನುಮತಿ ಮತ್ತು ಒಪ್ಪಿಗೆ ಪಡೆದಿರಲಿಲ್ಲ. ಕಾರ್ಯಕ್ರಮ ನಡೆಸುವ ಬಗ್ಗೆ ದಿಢೀರ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿತು. ಆ ಮಾಹಿತಿಯೇ ಸಾರ್ವಜನಿಕರು ಸೇರಲು ಕಾರಣವಾಯಿತು. ಜೂನ್ 3ರಂದು ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದಿತ್ತು. ಕಾಲಾವಕಾಶ ಕೊರೆತೆಯಿಂದ ಜೂನ್ 4ರಂದು ವಿಜಯೋತ್ಸವಕ್ಕೆ ಸಮರ್ಪಕವಾಗಿ ಸಿದ್ಧತೆ ನಡೆಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಸಿದ್ಧತೆ ನಡಸಲು ಪೊಲೀಸರಿಗೆ ಸೂಕ್ತ ಕಾಲಾವಕಾಶ ನೀಡಿಲ್ಲ. ಜೂನ್ 3-4ರ ಇಡೀ ರಾತ್ರಿ ಸಾರ್ವಜನಿಕರು ಬೀದಿಯಲ್ಲಿ ವಿಜಯೋತ್ಸವ ನಡೆಸುತ್ತಿದ್ದರು. ಸಾರ್ವಜನಿಕರ ನಿರ್ವಹಣೆಯಲ್ಲಿ ಪೊಲೀಸ್ ವ್ಯವಸ್ಥೆ ನಿರತವಾಗಿತ್ತು. ಇದೇ ವೇಳೆ ವಿಧಾನ ಸೌಧದ ಆವರಣದಲ್ಲಿ ರಾಜ್ಯ ಸರ್ಕಾರ ಮತ್ತೊಂದು ಕಾರ್ಯಕ್ರಮ ಆಯೋಜಿಸಿತ್ತು. ವಿಧಾನಸೌಧಕ್ಕೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಇದೇ ವೇಳೆ ಆರ್‌ಸಿಬಿ ಉಪದ್ರ ಸೃಷ್ಟಿಸಿದೆ ಎಂದು ಪೀಠ ನುಡಿದಿದೆ.
12 ಗಂಟೆಗಳ ಕಡಿಮೆ ಸಮಯದಲ್ಲಿ ಎಲ್ಲಾ ಸಿದ್ಧತೆಗಳನ್ನು ಪೊಲೀಸರು ಮಾಡುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಪೊಲೀಸರು ಸಹ ಮನುಷ್ಯರೇ. ಪೊಲೀಸರು ದೇವರು ಅಥವಾ ಜಾದೂಗಾರರಲ್ಲ. ಅಲ್ಲಾವುದ್ದೀನ್ ಅದ್ಭುತ ದೀಪದಂತೆ ಜಾದೂ ಮಾಡುವ ಶಕ್ತಿಯನ್ನು ಅವರು ಹೊಂದಿಲ್ಲ. ಸಾರ್ವಜನಿಕರು ದೊಡ್ಡ ಪ್ರಮಾಣದಲ್ಲಿ ಸೇರುವುದನ್ನು ನಿಯಂತ್ರಿಸಲು ಪೊಲೀಸರಿಗೆ ಸೂಕ್ತ ಸಮಯ ನೀಡಬೇಕು .ಆದರೆ ಸೂಕ್ತ ಸಿದ್ಧತೆ/ವ್ಯವಸ್ಥೆ ಮಾಡಲು ಪೊಲೀಸರಿಗೆ ಮಾಹಿತಿ ನೀಡಿಲ್ಲ. ಪೋಲೀಸರ ಅನುಮತಿಗಾಗಿ ಅರ್ಜಿ ಸಲ್ಲಿಸಿಲ್ಲ ಅಥವಾ ಪೊಲೀಸರು ಅನುಮತಿಯೂ ನೀಡಿಲ್ಲ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಅಲ್ಲದೇ, ಕೆಸಿಎ ಪೊಲೀಸರಿಗೆ ಬರೆದಿರುವ ಪ್ರತ್ರದಲ್ಲಿ ಸಹ ಅನುಮತಿ ಮಂಜೂರು ಮಾಡಿದ ಅಥವಾ ಸಿದ್ಧತೆ ನಡೆಸುವುದಕ್ಕೆ ಮನವಿ ಮಾಡಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪತ್ರವು ಕೇವಲ ವಿಜಯೋತ್ಸವ ನಡೆಸುವ ಉದ್ದೇಶವನ್ನು ಸಾದರಪಡಿಸುತ್ತದೆ. ಪೊಲೀಸ್ ಠಾಣಾಧಿಕಾರಿಗೆ ಪತ್ರ ಸಲ್ಲಿಸಿದ ಮಾತ್ರಕ್ಕೆ ಪೊಲೀಸರು ದಿಢೀರ್ ಆಗಿ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ, ಸೂಕ್ತ ಆಧಾರಗಳ ಮೇಲೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗದು. ಕರ್ತವ್ಯ ಲೋಪ ಆಧಾರದ ಮೇಲೆ ಅಮಾನತು ಆದೇಶವನ್ನು ಹೊರಡಿಸುವಾಗ ಸೂಕ್ತ ದಾಖಲೆ/ಆಧಾರಗಳು ಇರಲಿಲ್ಲ ಎಂಬುದು ಕಂಡಬುರುತ್ತದೆ. ಆದ್ದರಿಂದ, ಸರ್ಕಾರದ ಆದೇಶವು ಸಮಂಜಸವಾಗಿಲ್ಲ. ಮತ್ತೊಂದೆಡೆ ಬೃಹತ್ ಸಭೆಯನ್ನು ಆಯೋಜಿಸಲು ಪೊಲೀಸರು ಬೇರೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ, ಅರ್ಜಿದಾರರನ್ನು ಸೇವೆಯಿಂದ ಅಮಾನತುಪಡಿಸಿದ ಆದೇಶವನ್ನು ರದ್ದುಪಡಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ವಿವರಿಸಿದೆ.
ವಿಕಾಸ್ ಕುಮಾರ್ ವಿಕಾಸ್ ಪರವಾಗಿ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ವಾದಿಸಿದ್ದರು.